ಹಾಸನ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಿಸಿ ಕೆ.ಎಸ್.ಲತಾ ಕುಮಾರಿ, ಎಚ್.ಎಲ್.ಮಲ್ಲೇಶ್ ಗೌಡ, ಬೆಟ್ಟೆಗೌಡ, ತಾರಾನಾಥ್, ಬೊಮ್ಮೇಗೌಡ ಇತರರಿದ್ದರು.
- ರಾಷ್ಟ್ರಕವಿ ಕುವೆಂಪು ಜಗತ್ತಿನ ಆಸ್ತಿ
- ಜಿಲ್ಲಾಧಿಕಾರಿ ಕೆ.ಎಸ್.ಲತಾ ಕುಮಾರಿ ಬಣ್ಣನೆ
- ವಿಶ್ವ ಮಾನವ ದಿನಾಚರಣೆ
ಹಾಸನ: ಕನ್ನಡ ಸಾಹಿತ್ಯ ಮತ್ತು ಕನ್ನಡ ಭಾಷೆ ಇಷ್ಟು ಉತ್ತುಂಗ ಸ್ಥಿತಿಗೆ ಏರಲು ರಾಷ್ಟ್ರಕವಿ ಕುವೆಂಪು ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸೋಮವಾರ ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ಸಾರಿದ್ದರು. ಜಾತಿ, ಮತ ತಾರತಮ್ಯ, ಮೇಲು-ಕೀಳು ಎಂಬ ಭಾವನೆಗಳಿಲ್ಲ ಮನುಷ್ಯರೆಲ್ಲರೂ ಒಂದೇ, ನಾವು ಭಾರತೀಯರು. ಬೇರೊಂದು ದೇಶದ ಪ್ರಜೆ ಎಂಬ ಅಡೆ ತಡೆ ಇಲ್ಲ, ಎಲ್ಲರೂ ವಿಶ್ವಮಾನವರು ಎಂದು ಕುವೆಂಪು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ. ಅವರ ಮೊದಲ ಪ್ರೀತಿ ಮೊದಲ ದೈವ ಕನ್ನಡವೇ ಆಗಿತ್ತು. ಅವರಿಗೆ ಕನ್ನಡವೇ ಉಸಿರಾಗಿತ್ತು ಎಂಬುದನ್ನು ನಾವು ಅವರ ಬರವಣಿಗೆ ಮೂಲಕ ತಿಳಿದುಕೊಳ್ಳಬಹುದು ಎಂದರು.
ಕುವೆಂಪು ಅವರು ಬರೆದಿರುವ ಪ್ರಮುಖ ಕಾದಂಬರಿಗಳಲ್ಲಿ ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಪ್ರಮುಖ ಕಾದಂಬರಿಗಳಾಗಿದ್ದು ನಾವೆಲ್ಲರೂ ಕುವೆಂಪು ಅವರ ಬರವಣಿಗೆಯಲ್ಲಿ ಕಾನೂರು ಹೆಗ್ಗಡತಿ ಮಹಿಳೆಯ ಪರವಾಗಿ ವಿವರಿಸಿರುವುದನ್ನು ಕಾಣುತ್ತೇವೆ. ಕುವೆಂಪು ಇಡೀ ಜಗತ್ತಿನ ಆಸ್ತಿ. ಪ್ರಾಪಂಚಿಕ ಜ್ಞಾನ ತಿಳಿಯಬೇಕೆಂದರೆ ಕನ್ನಡ ಸಾಹಿತ್ಯ ತುಂಬ ಮುಖ್ಯ. ವಿಶ್ವಮಾನವ ಸಂದೇಶವನ್ನು ಪುಸ್ತಕದಲ್ಲಿ ಮಾತ್ರವಲ್ಲ ಅವರ ಜೀವನದಲ್ಲೂ ಅಳವಡಿಸಿಕೊಂಡಿದ್ದರು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಚ್.ಎಲ್.ಮಲ್ಲೇಶ್ ಗೌಡ ಮಾತನಾಡಿ, ಜಗತ್ತಿನಲ್ಲಿ ಅತಿ ದೊಡ್ಡ ಅಧ್ಯಯನಶೀಲರು ಕುವೆಂಪು. ತಮ್ಮ ಹುಟ್ಟೂರಿನಲ್ಲಿ ಪರಿಸರವನ್ನು ನೋಡಿದ ರೀತಿ ಮತ್ತು ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಓದಿದ ರೀತಿ ಅವರನ್ನು ಅಷ್ಟು ಎತ್ತರಕ್ಕೆ ತಲುಪಿಸಿತು. ತಮ್ಮ 35ನೇ ವಯಸ್ಸಿಗೆ ಅವರು ಬಹುತೇಕ ಕೃತಿಗಳನ್ನು ಬರೆದು ಮುಗಿಸಿದ್ದರು. 20ನೇ ವಯಸ್ಸಿನಲ್ಲಿ ನಾಡಗೀತೆ ರಚಿಸಿದ್ದರು ಎಂದರು.
ಮೈಸೂರು ಕುವೆಂಪುನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಬೆಟ್ಟೇಗೌಡ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ತಾರಾನಾಥ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಜಿಲ್ಲಾ ಕಾರ್ಯದರ್ಶಿ ಬೊಮ್ಮೇಗೌಡ ಇತರರಿದ್ದರು.