ಹೊಳೆನರಸೀಪುರ ತಾಲೂಕಿನ ದೊಡ್ಡಕಾಡನೂರು ನೀರಾವರಿ ಇಲಾಖೆಯಲ್ಲಿ ಆಯೋಜಿಸಿದ್ದ ರಂಗನಹಳ್ಳಿ ಏತ ನೀರಾವರಿ ಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಎ.ಮಂಜು ಮಾತನಾಡಿದರು. ಕೇಶವಮೂರ್ತಿ, ರಾಜೇಶ್, ಪುಟ್ಟ ಸೋಮಪ್ಪ, ಚಂದ್ರಶೇಖರ್, ಶಿವಣ್ಣ, ಮಲ್ಲೇಗೌಡ ಇತರರು ಇದ್ದರು.  
ಹಾಸನ

ಏಪ್ರಿಲ್‌ನಲ್ಲಿ ರಂಗೇನಹಳ್ಳಿ ಏತ ನೀರಾವರಿ ಯೋಜನೆಗೆ ಚಾಲನೆ

ಪ್ರಮುಖ ಮುಖ್ಯಾಂಶಗಳು

  • ಅರಕಲಗೂಡು ಶಾಸಕ ಎ. ಮಂಜು ಭರವಸೆ
  • ದೊಡ್ಡಕಾಡನೂತಿನಲ್ಲಿ ಅಧಿಕಾರಿಗಳ ಸಭೆ
ಹೊಳೆನರಸೀಪುರ: ನನ್ನ ಹಾಗೂ ಮುಖ್ಯಮಂತ್ರಿ ಅವರ ಕನಸಿನ ರಂಗೇನಹಳ್ಳಿ ಏತ ನೀರಾವರಿ ಯೋಜನೆಗೆ ಮಾರ್ಚ್ ಅಥವಾ ಏಪ್ರಿಲ್ ತಿಂಗಳೊಳಗೆ ಚಾಲನೆ ಸಿಗಲಿದೆ ಎಂದು ಅರಕಲಗೂಡು ಶಾಸಕ ಎ. ಮಂಜು ಹೇಳಿದರು.
ತಾಲೂಕಿನ ದೊಡ್ಡಕಾಡನೂರು ನೀರಾವರಿ ಇಲಾಖೆಯಲ್ಲಿ ಶುಕ್ರವಾರ ರಂಗೇನಹಳ್ಳಿ ಏತ ನೀರಾವರಿ ಯೋಜನೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು. ಈ ಭಾಗದ 22 ಕೆರೆ, 10 ಕಟ್ಟೆಗಳ ಪುನಶ್ಚೇತನಕ್ಕೆ 2017-18ರಲ್ಲಿ 43.44 ಕೋಟಿ ರೂ. ವೆಚ್ಚದಲ್ಲಿ ರಂಗೇನಹಳ್ಳಿ ಏತ ನೀರಾವರಿ ಯೋಜನೆ ಕೈಗೆತ್ತಿಕೊಳ್ಳಲಾಯಿತು. ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಯೋಜನೆ ಸಾಕಾರಗೊಂಡು ನಾನು ಸಚಿವನಾಗಿದ್ದಾಗ ಕಾಮಗಾರಿ ಪ್ರಾರಂಭಿಸಲಾಯಿತು. ರಂಗೇನಹಳ್ಳಿ, ನಗರನಹಳ್ಳಿ, ಕಬ್ಬೂರು ಬಾಚನಹಳ್ಳಿ ದಾಳ, ಗೌಡನಹಳ್ಳಿ ಗ್ರಾಮಗಳ ಸುತ್ತಮುತ್ತಲ ಕೆರೆಗಳಿಗೆ ನೀರು ಸಂಗ್ರಹವಾಗುವುದರಿಂದ ರೈತರ ಬದುಕು ಹಸನಾಗುತ್ತದೆ. ಕೊಳವೆಬಾವಿಗಳು ಹೆಚ್ಚಿನ ನೀರು ಒದಗಿಸುತ್ತವೆ. ರೈತರು ನೆಮ್ಮದಿಯ ಜೀವನ ನಡೆಸುತ್ತಾರೆ. ಹಾಗಾಗಿ ನನ್ನ ಕನಸಿನ ಯೋಜನೆ ಸಾಕಾರಗೊಳ್ಳುವ ದಿನಗಳು ಸಮೀಪಿಸುತ್ತಿವೆ ಎಂದು ಹೇಳಿದರು.
ಕೆ.ಆರ್.ಪೇಟೆ ತಾಲೂಕಿನ ಬೇವಿನಹಳ್ಳಿ ಗ್ರಾಮ ಸಮೀಪ ಹೇಮಾವತಿ ನದಿ ದಂಡೆಯಲ್ಲಿ ಈ ಯೋಜನೆ ಪ್ರಾರಂಭವಾಗಿದ್ದು, ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಕೇವಲ ಹನ್ನೊಂದುವರೆ ಗುಂಟೆ ಜಮೀನು ದಾಖಲಾತಿಗಳ ಸಮಸ್ಯೆಯಿಂದ ಭೂಸ್ವಾಧೀನವಾಗದೆ ನಿಧಾನವಾಗಿತ್ತು. ಈ ಭೂಮಿಗೆ 2.54 ಕೋಟಿ ರೂ.ಅನುದಾನ ಬಿಡುಗಡೆಯಾಗಿದ್ದು ರೈತರು ತಮ್ಮ ದಾಖಲಾತಿಗಳನ್ನು ನೀಡಿದರೆ ಹಣ ಬಿಡುಗಡೆಯಾಗುತ್ತದೆ. ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರು ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ತಿಳಿಸಿದರು.
ರಂಗೇನಹಳ್ಳಿ ಏತ ನೀರಾವರಿ ಯೋಜನೆ ಪೂರ್ಣಗೊಂಡಿಲ್ಲ. ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಿಲ್ಲ ಎಂಬ ದೂರುಗಳು ಸಾರ್ವಜನಿಕವಾಗಿ ವ್ಯಕ್ತವಾಗಿದ್ದವು. ಹಾಗಾಗಿ ಅಧಿಕಾರಿಗಳ ಸಭೆ ಕರೆದಿದ್ದೇನೆ ಎಂದರು. ಕಾರ್ಯಪಾಲಕ ಇಂಜಿನಿಯರ್ ಕೇಶವಮೂರ್ತಿ ಹಾಗೂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಜೇಶ್ ಅವರಿಂದ ಕಾಮಗಾರಿ ವಿಳಂಬದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ತುರ್ತಾಗಿ ಖುದ್ದು ನೀವೇ ಸಮಸ್ಯೆ ಬಗೆಹರಿಸಿ ಕಾಮಗಾರಿ ಪೂರ್ಣಗೊಳಿಸಬೇಕೆಂದು ತಾಕೀತು ಮಾಡಿದರು.
ಮೂಲ ಗುತ್ತಿಗೆದಾರ ವೆಂಕಟೇಶ್‌ರಾವ್ ಅವರನ್ನು ಕಡ್ಡಾಯವಾಗಿ ಮುಂದಿನ ಸಭೆಯಲ್ಲಿ ಹಾಜರಿರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಭೂಸ್ವಾಧೀನವಾಗಿರುವ ಜಮೀನಿನ ದಾಖಲಾತಿಗಳು ಒದಗಿದ ತಕ್ಷಣ ಹಣ ಬಿಡುಗಡೆ ಮಾಡಲು ಕ್ರಮವಹಿಸುವಂತೆ ಭೂಸ್ವಾಧೀನಾಧಿಕಾರಿ ಅವರಿಗೆ ಸೂಚನೆ ನೀಡಿದರು.
ರಂಗೇನಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿಗೆ ಕೆಲವು ಕಡೆ ನೇರವಾಗಿ ಭೂಮಿ ಖರೀದಿಸಲಾಗಿದೆ. ಇದಕ್ಕೆ ಒಪ್ಪದ ಜನರಿಂದ ಭೂಸ್ವಾಧೀನಪಡಿಸಿಕೊಂಡು ದರದ ನಾಲ್ಕು ಪಟ್ಟು ಹಣ ನೀಡಲಾಗಿದೆ. ಒಪ್ಪದಿದ್ದ ಜಮೀನಿನ ಮಾಲೀಕನ ಮೇಲೆ ಕಾನೂನು ರೀತಿಯಲ್ಲಿ ಕ್ರಮವಹಿಸಿ ಎಂದು ಸೂಚಿಸಿದರು. ದಾಖಲಾತಿ ಸರಿಯಾಗಿಲ್ಲದಿದ್ದರೆ ಮೂಲ ದಾಖಲಾತಿದಾರನ ಹೆಸರಿಗೆ ಹಣ ಮೀಸಲಿಟ್ಟು ಕಾಮಗಾರಿ ಪೂರ್ಣಗೊಳಿಸಿ ಎಂದು ನಿರ್ದೇಶನ ನೀಡಿದರು.
ಈ ಯೋಜನೆ ಪ್ರಾರಂಭಿಸಿ 12 ವರ್ಷಗಳಾದರೂ ರೈತರಿಗೆ ನೀರೊದಗಿಸದಿದ್ದರೆ ಶಾಪ ಹಾಕುವುದಿಲ್ಲವೇ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು. ನಿಮಗೆ ತಿಂಗಳಿಗೆ ಸಂಬಳವಾದರೂ ಬರುತ್ತದೆ. ನೆಮ್ಮದಿ ಜೀವನ ನಡೆಸುತ್ತೀರಿ, ರೈತರು ಏನು ಮಾಡಬೇಕು. ಅಧಿಕಾರಿಗಳಿಗೆ ಜವಾಬ್ದಾರಿ ಇರಬೇಕು. ಕೆಲಸ ಮಾಡಲೇಬೇಕು ಎಂಬ ಇಚ್ಛೆ ಇರಬೇಕು. ಆಗ ಜನಗಳ ಸಮಸ್ಯೆಗಳಿಗೆ, ನೋವಿಗೆ ಸ್ಪಂದಿಸುತ್ತೀರಿ ಎಂದು ಹೇಳಿದರು.
ದೊಡ್ಡಕಾಡನೂರು, ಮೆಣಗನಹಳ್ಳಿ ದಾಳ, ಗೌಡನಹಳ್ಳಿ ಜವರಿ ಕೊಪ್ಪಲು, ಮೂಡಲ ಕೊಪ್ಪಲು, ಬಾಚನಹಳ್ಳಿ, ಸಿ.ಹಿಂದಲಹಳ್ಳಿ ಗ್ರಾಮದ ರೈತರು ಕಲ್ಲೋಡೆ ಬಾರೆ ಕಾವಲಿನಲ್ಲಿರುವ ಕ್ರಷರ್‌ಗಳನ್ನು ಸ್ಥಗಿತ ಮಾಡಬೇಕೆಂದು ಒತ್ತಾಯಿಸಿ ಶಾಸಕರಿಗೆ ಮನವಿ ಸಲ್ಲಿಸಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುತ್ತದೆ. ಕಲ್ಲೋಡೆ ಬಾರೆ ಕಾವಲು ಭೂ ಪ್ರದೇಶವನ್ನು ಜಾನುವಾರಗಳ ಮೇವಿಗಾಗಿ ಮೀಸಲಿಡಲಾಗಿದೆ. ಅಧಿಕಾರಿಗಳು ನಿಯಮಬಾಹಿರವಾಗಿ ಈ ಪ್ರದೇಶವನ್ನು ಕ್ರಷರ್‌ಗಳಿಗೆ ಮಂಜೂರು ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಸಮಿತಿಯಲ್ಲಿ ನಾನೂ ಇದ್ದು ಸಮಿತಿ ಸದಸ್ಯರನ್ನೇ ಸ್ಥಳ ಪರಿಶೀಲಿಸಲು ಕ್ರಮ ವಹಿಸಲು ಮುಂದುವರಿಯಲಾಗುವುದು. ಸುತ್ತಮುತ್ತಲ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕಾನೂನಿನ ರೀತಿಯಲ್ಲಿ ಕ್ರಮ ಕೈಗೊಂಡು ಕ್ರಷರ್‌ಗಳನ್ನು ಸ್ಥಗಿತ ಮಾಡಿಸಲಾಗುವುದು ಎಂದು ಭರವಸೆ ನೀಡಿದರು.
ಪುಟ್ಟಸೋಮಪ್ಪ, ದೊಡ್ಡಳ್ಳಿ ಶಿವಣ್ಣ, ಸಾಂಬಶಿವಪ್ಪ, ಚಂದ್ರಶೇಖರ್, ಮಲ್ಲೇಗೌಡ, ತೇಜು ಸ್ವಾಮಿ, ರವಿ ಮತ್ತಿತರರು ಇದ್ದರು.