ರಂಜಾನ್ ಹಿನ್ನೆಲೆಯಲ್ಲಿ ಈದ್ಗಾ ಮೈದಾನಕ್ಕೆ ಮುಸಲ್ಮಾನ ಬಾಂಧವರು ಮೆರವಣಿಗೆಯಲ್ಲಿ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಬೇಲೂರು: ಪಟ್ಟಣ ಸಮೀಪದ ಗೆಂಡೇಹಳ್ಳಿ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸಲ್ಮಾನ ಬಾಂಧವರು ಶನಿವಾರ ರಂಜಾನ್ ಅಂಗವಾಗಿ ಪ್ರಾರ್ಥನೆ ಸಲ್ಲಿಸಿದರು.
ಮಕ್ಕಳು ಹಾಗೂ ಹಿರಿಯರು ಹೊಸ ಬಟ್ಟೆ ಧರಿಸಿ ಪರಸ್ಪರ ಸಿಹಿ ಹಂಚಿ, ಒಬ್ಬರನ್ನೊಬ್ಬರು ಆಲಂಗಿಸಿ ಶುಭಾಶಯ ವಿನಿಮಯ ಮಾಡಿಕೊಂಡರು. ಬೇಲೂರಿನ ಕೇಂದ್ರ ಜಾಮಿಯಾ ಮಸೀದಿಯ ಧರ್ಮಗುರು ಸೈಯದ್ ಅಹಮದ್ ಅಶ್ರಫಿ ಪ್ರವಚನ ನೀಡಿ, ರಂಜಾನ್ ತಿಂಗಳು ಮುಸಲ್ಮಾನರಿಗೆ ಅತ್ಯಂತ ಪವಿತ್ರವಾಗಿದೆ. ಉಪವಾಸದ ಮೂಲಕ ಶಿಸ್ತಿನ ಜೀವನ, ಸಹನೆ ಮತ್ತು ಆತ್ಮಶುದ್ಧಿಯನ್ನು ಅಭ್ಯಾಸ ಮಾಡಲಿದ್ದಾರೆ. ಅಸೂಯೆ, ಅಹಂಕಾರ, ಲೋಭ, ಮದ, ಮತ್ಸರ ಸೇರಿದಂತೆ ದುಷ್ಟ ವೃತ್ತಿಗಳನ್ನು ದೂರವಿಡುವಂತೆ ಕರೆ ನೀಡಿದರು.
ಮುಸ್ಲಿಂ ಒಕ್ಕೂಟದ ಅಧ್ಯಕ್ಷ ನಹೀಮ್, ಪೇಟೆ ಜಾಮಿಯಾ ಮಸೀದಿ ಅಧ್ಯಕ್ಷ ಇಫ್ರಾಜ್, ಕೋಟೆ ಜಾಮಿಯಾ ಮಸೀದಿ ಅಧ್ಯಕ್ಷ ರಫೀಕ್, ಹಳೇಬೀಡು-ಬೇಲೂರು ಪ್ರಾಧಿಕಾರ ಅಧ್ಯಕ್ಷ ಸೈಯದ್ ತೌಫಿಕ್, ಪುರಸಭೆ ಸದಸ್ಯ ಜಮಾಲ್, ಮುಸ್ಲಿಂ ಮುಖಂಡರಾದ ಜಾಕಿರ್ ಪಾಷ, ಅಹಮದ್ ಅಲಿ ಖಾನ್, ಸೈಯದ್ ಜಮೀಲ್, ಮುಜಮಿಲ್, ಮುಶೀರ್ ಸೇರಿದಂತೆ ಇತರರಿದ್ದರು.
ಡಿವೈಎಸ್ಪಿ ಪರಶುರಾಮ್, ಪೊಲೀಸ್ ಇನ್ಸ್ಪೆಕ್ಟರ್ ರೇವಣ್ಣ, ಪಿಎಸ್‌ಐ ಪಾಟೀಲ್ ನೇತೃತ್ವದಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತ್ ಒದಗಿಸಲಾಗಿತ್ತು.