ಹೋಬಳಿ ಕೇಂದ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಸ್ತಬ್ಧ ಚಿತ್ರಗಳ ಮೆರವಣಿಗೆಗೆ ಕತ್ತರಿ ಘಟ್ಟ ಮೇಳೆಯಮ್ಮ ಆಧ್ಯಾತ್ಮಿಕ ಕೇಂದ್ರದ ಶ್ರೀ ಚಂದ್ರಶೇಖರ ಗುರೂಜಿ ಚಾಲನೆ ನೀಡಿದರು. ಹೋಬಳಿ ಘಟಕದ ಅಧ್ಯಕ್ಷ ದೊರೆಸ್ವಾಮಿ, ಉಪಾಧ್ಯಕ್ಷ ವಿಕ್ಟರ್, ಬಸವನಪುರ ಪ್ರಕಾಶ್, ಕೊಪ್ಪಲು ಸ್ವಾಮಿ, ರೇಖಾ ಗಿರೀಶ್, ಕೋಟೆಮನೆ ಮಧು, ಶಶಿಕಲಾ, ನಂಜುಂಡೇಗೌಡ, ಅಶೋಕ್, ಮಂಜುನಾಥ್ ಇದ್ದರು. 
ಹಾಸನ

ನಾಲಿಗೆಯ ಮೇಲೆ ಮಾತೃಭಾಷೆ ನಲಿದಾಡಲಿ

ನುಗ್ಗೇಹಳ್ಳಿ: ವ್ಯವಹಾರಿಕವಾಗಿ ಅನ್ಯಭಾಷೆಗಳ ಬಳಕೆ ಇರಲಿ, ಆದರೆ ಮಾತೃಭಾಷೆ ಕನ್ನಡ ಸದಕಾಲ ನಾಲಿಗೆಯ ಮೇಲೆ ನಲಿದಾಡಲಿ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಹಡೆನಹಳ್ಳಿ ಎಚ್.ಎನ್.ಲೋಕೇಶ್ ಆಶಿಸಿದರು.
ನುಗ್ಗೇಹಳ್ಳಿ ಹೋಬಳಿ ಕೇಂದ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕ ಹಾಗೂ ಹೋಬಳಿ ವ್ಯಾಪ್ತಿಯ ಎಲ್ಲ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ, ಸಾಲುಮರದ ತಿಮ್ಮಕ್ಕ ಅವರಿಗೆ ಶ್ರದ್ಧಾಂಜಲಿ ಹಾಗೂ ಡಾ.ಎಸ್.ಎಲ್.ಭೈರಪ್ಪ ಅವರಿಗೆ ನುಡಿ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಎಂಬುದು ಭಾಷೆಯಷ್ಟೇ ಅಲ್ಲ ನಾಡಿನ ಸಂಸ್ಕೃತಿ. ಸುಸಲಿತ ಹಾಗೂ ಸ್ಪಷ್ಟ ಭಾಷೆಯಾಗಿದ್ದು, ಎಲ್ಲಿಂದ ಯಾರೇ ಬಂದರೂ ಸ್ವಾಗತಿಸುವ ನಾಡು ನಮ್ಮದಾಗಿದೆ. ಇಲ್ಲಿ ಇರುವವರೆಗೂ ಇಲ್ಲಿಯ ಸಂಸ್ಕೃತಿಗೆ ಹೊಂದಿಕೊಂಡು ನಾಡು ನುಡಿಗೆ ಗೌರವ ನೀಡಬೇಕು ಎಂದು ತಿಳಿಸಿದರು. ಹೋಬಳಿಯ ಹೆಸರಾಂತ ಸಾಹಿತಿಗಳಾದ ಎಸ್.ಎಲ್.ಬೈರಪ್ಪ ಅವರ ಕಾದಂಬರಿಗಳನ್ನು ಓದುವುದರಿಂದ ಸಾಹಿತ್ಯದ ಜ್ಞಾನ ತಿಳಿಯುತ್ತದೆ ಭೈರಪ್ಪನವರ ಕಾದಂಬರಿಗಳು ರಾಜ್ಯದ ಎಲ್ಲ ಗ್ರಂಥಾಲಯಗಳಲ್ಲಿ ಓದುವವರಿಗೆ ಸಿಗುವ ಅವಕಾಶವನ್ನು ಸರ್ಕಾರ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಹೋಬಳಿ ಘಟಕದ ಅಧ್ಯಕ್ಷ ಬಿ.ಆರ್.ದೊರೆಸ್ವಾಮಿ ಮಾತನಾಡಿ, ಕನ್ನಡ ಒಂದು ಶ್ರೀಮಂತ ಭಾಷೆ, ಪ್ರತಿ ಪದದಲ್ಲಿಯೂ ಸಾಹಿತ್ಯ ಭಾವನೆ ತುಂಬಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಆಂಗ್ಲ ಹಾಗೂ ಇತರ ಅನ್ಯಭಾಷೆಗಳಿಗೆ ಜೋತು ಬಿದ್ದಿರುವ ಕೆಲವರು ಮಾತೃಭಾಷೆಯಲ್ಲಿ ಮಾತನಾಡಲು ಹಿಂಜರಿಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಳದ ಅಧ್ಯಕ್ಷ ಸಿ.ಎನ್.ಪುಟ್ಟಸ್ವಾಮಿಗೌಡ ಮಾತನಾಡಿ, ಬೆಂಗಳೂರು, ಮಂಗಳೂರು ಸೇರಿದಂತೆ ವಿವಿಧ ನಗರ ಪ್ರದೇಶಗಳಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. 8 ಜ್ಞಾನಪೀಠ ಪ್ರಶಸ್ತಿ ಪಡೆದಿರುವ ಹೆಮ್ಮೆಯ ಭಾಷೆ ನಮ್ಮದು. ದೇಶಪ್ರೇಮದ ಜತೆಗೆ ಮಾತೃಭಾಷೆಗೂ ಹೆಚ್ಚಿನ ಆದ್ಯತೆ ನೀಡಬೇಕು. ಕನ್ನಡ ಎಂಬುದು ಕೇವಲ ಭಾಷೆಯಷ್ಟೇ ಅಲ್ಲ ಕನ್ನಡಿಗರ ಆತ್ಮ ಗೌರವವಾಗಿದೆ ಎಂದರು.
ಕರ್ನಾಟಕ ಜಾನಪದ ಪರಿಷತ್ ಅರಸೀಕೆರೆ ತಾಲೂಕು ಅಧ್ಯಕ್ಷ ಜಿ.ಪರಮೇಶ್ ಮಾತನಾಡಿ, ಪದವಿಗಳನ್ನು ಪಡೆಯುವುದೇ ಶಿಕ್ಷಣವಲ್ಲ. ಸಾಹಿತ್ಯ ಜ್ಞಾನ ಹೊಂದಿರುವ ಎಲ್ಲರೂ ವಿದ್ಯಾವಂತರೇ ಆಗಿರುತ್ತಾರೆ. ಮನಸ್ಸಿನಲ್ಲಿ ಉತ್ತಮ ಭಾವಗಳಿದ್ದರೆ ಸಾಕು ಭಾಷೆ ಹಾಗೂ ಸಾಹಿತ್ಯ ಅಭಿಮಾನ ತಾನಾಗಿಯೇ ರೂಪುಗೊಳ್ಳುತ್ತದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಹೊನ್ನೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಮೆಡಿಕಲ್ ವೆಂಕಟೇಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬೆಳಗಿಹಳ್ಳಿ ಪುಟ್ಟಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್.ದೀಪಾ, ಇಸಿಒ ಅನಿಲ್, ನಿವೃತ್ತ ಶಿಕ್ಷಣಾಧಿಕಾರಿ ಎನ್.ಜೆ.ಸೋಮನಾಥ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಗೌರವಾಧ್ಯಕ್ಷ ಬೊಮ್ಮೇಗೌಡ, ಕಸಾಪ ಉಪಾಧ್ಯಕ್ಷರಾದ ವಿಕ್ಟರ್, ಹೊನ್ನೇಗೌಡ, ಎಚ್.ಪಿ.ಸಂಪತ್ ಕುಮಾರ್, ಮುಖಂಡರಾದ ಟಿ.ಆರ್.ಸ್ವಾಮಿ, ಪ್ರಕಾಶ್, ಶಶಿಕಲಾ ಕೆ.ಟಿ.ಆನಂದ್, ಕರಿಯಪ್ಪಗೌಡ ರುದ್ರೇಶ್, ಯಲ್ಲಪ್ಪ, ಲೋಕೇಶ್, ಕೆಂಪಯ್ಯ, ಮಂಜೇಗೌಡ, ಅಶೋಕ್, ರೇಖಾ, ಪದಾಧಿಕಾರಿಗಳು, ಹೋಬಳಿ ವ್ಯಾಪ್ತಿಯ ವಿವಿಧ ಶಾಲೆಗಳ ಮುಖ್ಯಶಿಕ್ಷಕರು, ಸಹ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಇತರರು ಪಾಲ್ಗೊಂಡಿದ್ದರು.