ಬೇಲೂರಿನಲ್ಲಿ ಸುರಿದ ಮಳೆಯಿಂದಾಗಿ ಬಿಕ್ಕೋಡು ರಸ್ತೆಯಲ್ಲಿ ಚರಂಡಿಯಲ್ಲಿ ನೀರು ಹೋಗದ ಕಾರಣ ರಸ್ತೆಯಲ್ಲಿ ನಿಂತಿರುವುದು.  
ಹಾಸನ

ಚರಂಡಿ ಅವ್ಯವಸ್ಥೆಯಿಂದ ರಸ್ತೆಯಲ್ಲಿ ನಿಂತ ಮಳೆ ನೀರು

ಪ್ರಮುಖ ಮುಖ್ಯಾಂಶಗಳು

  • ಬೇಲೂರಿನ ಬಿಕ್ಕೋಡು ರಸ್ತೆಯಲ್ಲಿ ವಾಹನ ಸವಾರರ ಪರದಾಟ
ಬೇಲೂರು: ಪಟ್ಟಣದ ಬಿಕ್ಕೋಡು ರಸ್ತೆಯಲ್ಲಿ ಕೆಲ ತಿಂಗಳ ಹಿಂದಷ್ಟೆ ಹೊಸದಾಗಿ ನಿರ್ಮಿಸಿದ ಚರಂಡಿಯಲ್ಲಿ ಮಳೆ ನೀರು ಸರಾಗವಾಗಿ ಹೋಗದೆ ರಸ್ತೆಯಲ್ಲಿ ನಿಲ್ಲುತ್ತಿರುವುದರಿಂದ ವಾಹನ ಸವಾರರು ಸಂಚರಿಸಲು ಪರದಾಡುವಂತಾಯಿತು.
ಮಂಗಳವಾರ ಮಧ್ಯಾಹ್ನ ಹಾಗೂ ರಾತ್ರಿ ತಾಲೂಕಿನಾದ್ಯಂತ ಸುರಿದ ಭಾರಿ ಮಳೆಯಿಂದಾಗಿ ರೈತರು ಜಮೀನುಗಳತ್ತ ಮುಖ ಮಾಡಿದರೆ ಪಟ್ಟಣ ಜನತೆ ಮಳೆ ನೀರು ಸರಾಗವಾಗಿ ಚರಂಡಿಯಲ್ಲಿ ಹರಿಯದ ಕಾರಣ ಪುರಸಭೆ ಹಾಗೂ ಗುತ್ತಿಗೆದಾರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಳೆಗಾಲ ಪ್ರಾರಂಭದಲ್ಲೇ ಒಂದು ಸಣ್ಣ ಮಳೆಗೆ ಚರಂಡಿಯಲ್ಲಿ ನೀರು ಹೋಗುತ್ತಿಲ್ಲವೆಂದರೆ ಇನ್ನೂ ಮುಂದಿನ ದಿನಗಳಲ್ಲಿ ಜೋರು ಮಳೆಗೆ ಯಾವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಪುರಸಭೆ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಚರಂಡಿ ನೀರು ಸರಾಗವಾಗಿ ಹೋಗುವಂತೆ ಮಾಡುವ ಮೂಲಕ ಸಾರ್ವಜನಿಕರು, ವಾಹನಗಳ ಸವಾರರಿಗೆ ಅನುಕೂಲ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.