ಪಟ್ಟಣದಲ್ಲಿ ಮಧ್ಯಾಹ್ನ ಮತ್ತು ಸಂಜೆ ಮಳೆ ಸುರಿಯುತ್ತಿರುವುದು.
- ಜಿಲ್ಲೆಯ ಹಲವೆಡೆ ಮಳೆಯ ಸಿಂಚನ
- ಮುಂಗಾರು ಆರಂಭದ ಮುನ್ಸೂಚನೆ
- ರೈತರಲ್ಲಿ ಮೂಡಿದ ಆಶಾಭಾವ
ಹಾಸನ: ಜಿಲ್ಲೆಯಲ್ಲಿ ಮುಂಗಾರು ಆರಂಭದ ಮುನ್ಸೂಚನೆ ನೀಡಿದ್ದು, ಮಂಗಳವಾರ ಬೆಳಗ್ಗೆಯಿಂದ ಹಾಸನ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಳೆ ಸುರಿಯಿತು.
ಹಾಸನ ನಗರದಲ್ಲಿ ಮಧ್ಯಾಹ್ನ 1 ಗಂಟೆಗೆ ಸುಮಾರಿಗೆ ಅರ್ಧ ಗಂಟೆಗೂ ಹೆಚ್ಚು ಸಮಯ ಮಳೆ ಸುರಿಯಿತು. ಸಂಜೆ 5 ಗಂಟೆ ಸುಮಾರಿಗೆ ಮತ್ತೆ ಸಣ್ಣ ಮಳೆಯಾಯಿತು. ದಿನವಿಡೀ ಮೋಡ ಕವಿದ ವಾತಾವರಣ ಇತ್ತು.
ಜಿಲ್ಲೆಯ ಚನ್ನರಾಯಪಟ್ಟಣ, ಅರಕಲಗೂಡು, ಬೇಲೂರು, ಆಲೂರು ತಾಲೂಕಿನಲ್ಲಿ ಕೆಲ ಕಾಲ ಮಳೆ ಸುರಿಯಿತು. ಅರಕಲಗೂಡು, ಅರಸೀಕೆರೆ, ಹೊಳೆನರಸೀಪುರ ಭಾಗದಲ್ಲಿ ಮೋಡ ಕವಿದ ವಾತಾವರಣದ ಜತೆಗೆ ಆಗಾಗ ಹನಿ ಹನಿ ಮಳೆ ಸುರಿಯಿತು.
ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಪ್ರಕಾರ, ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹೆತ್ತೂರು 19.7 ಮಿ.ಮೀ, ಯಸಳೂರು 17.0 ಮಿ.ಮೀ ಮತ್ತು ಅರೇಹಳ್ಳಿ 10.4 ಮಿ.ಮೀ, ಹೋಬಳಿಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಹೆತ್ತೂರಿನ ವಾಡಿಕೆ 5.5 ಮಿ.ಮೀ, ಯಸಳೂರು 4.3 ಮಿ.ಮೀ, ಅರೆಹಳ್ಳಿ 5.5 ಮಿ.ಮೀ ಇತ್ತು. ಉಳಿದಂತೆ ಬಹುತೇಕ ಹೋಬಳಿಗಳಲ್ಲಿ ಮಳೆ ಕೊರತೆ ಕಂಡುಬಂದಿದೆ.
ಇದರ ಬೆನ್ನಲ್ಲೇ ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರ ಸಂಜೆ 5.10 ಕ್ಕೆ ನೌಕಾಸ್ಟ್ ಬಿಡುಗಡೆ ಮಾಡಿದ್ದು, ಹಾಸನ ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ 30-40 ಕಿ.ಮೀ. ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ.
ತಾತ್ಕಾಲಿಕ ವಿದ್ಯುತ್ ವ್ಯತ್ಯಯ, ಸಂಚಾರ ದಟ್ಟಣೆ, ದುರ್ಬಲ ಮರಗಳು ಉರುಳುವುದು, ಕಟಾವು ಮಾಡಿದ ಬೆಳೆಗೆ ಹಾನಿಯಾಗಬಹುದು. ಸಾರ್ವಜನಿಕರು ಮನೆಯೊಳಗೆ ಇರಲು, ಮರಗಳ ಕೆಳಗೆ ನಿಲ್ಲದಿರಲು, ವಿದ್ಯುತ್ ಉಪಕರಣಗಳ ಸಂಪರ್ಕ ತೆಗೆಯಲು ಇಲಾಖೆ ಸೂಚಿಸಿದೆ.
ಕೃಷಿ ಚಟುವಟಿಕೆಗಳಿಗೆ ರೈತರು ಸಜ್ಜು
ಹೊಳೆನರಸೀಪುರ ತಾಲೂಕಿನಲ್ಲಿ ಮಳೆ ಚುರುಕುಗೊಂಡಿದೆ. ಪ್ರಸಕ್ತ ವರ್ಷ ಕೃಷಿಗೆ ಪೂರಕ ಮಳೆ ಸುರಿದಿಲ್ಲ. ರೈತರು ಭೂಮಿಯ ಉಳುಮೆಗೆ ಸಜ್ಜಾಗಿದ್ದು, ಸದ್ಯ ಮುಂಗಾರು ಪ್ರಾರಂಭವಾಗುವ ಮುನ್ಸೂಚನೆ ಕಂಡು ಬಂದಿದ್ದು, ರೈತರು ಕೃಷಿ ಚಟುವಟಿಕೆಗೆ ಸಜ್ಜಾಗುತ್ತಿದ್ದಾರೆ.
ಈಗ ಬೆಳೆಯಲಾದ ಮುಸುಕಿನ ಜೋಳ, ದ್ವಿದಳ ಧಾನ್ಯಗಳು ಇಳುವರಿ ಕುಂಠಿತವಾಗಿ ರೈತರು ನಷ್ಟ ಅನುಭವಿಸುವಂತಾಗಿತ್ತು. ಇದೀಗ ಮಳೆ ಆರಂಭವಾಗಿದ್ದರಿಂದ ರೈತರಲ್ಲಿ ಆಶಾಭಾವ ಮೂಡಿದೆ.
ತಾಲೂಕಿನ ಹಳೆಕೋಟೆ ಹೋಬಳಿ ವ್ಯಾಪ್ತಿಯ ಸುತ್ತಮುತ್ತ ಮಳೆಯಾಗುವ ಮೂಲಕ ರೈತರಿಗೆ ನೆಮ್ಮದಿ ನೀಡಿದೆ. ಕಸಬಾ ಹಾಗೂ ಹಳ್ಳಿ ಮೈಸೂರು ಹೋಬಳಿ ವ್ಯಾಪ್ತಿಯ ಸುತ್ತಮುತ್ತ ಮೋಡಕವಿದ ವಾತಾವರಣ ಮುಂದುವರಿದಿತ್ತು. ಎರಡು ಮೂರು ದಿನಗಳ ಹಿಂದೆ ಕಸಬಾ ಹಾಗೂ ಹಳ್ಳಿಮೈಸೂರು ವ್ಯಾಪ್ತಿಯ ಕೆಲವು ಭಾಗಗಳಿಗೆ ಅಲ್ಪ ಪ್ರಮಾಣದ ಮಳೆಯಾಗಿದ್ದರಿಂದ ರೈತರು ಉಳುಮೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಮುಂಗಾರು ಹದವಾಗಿ ಸುರಿದರೆ ದ್ವಿದಳ ಧಾನ್ಯಗಳಾದ ಹಲಸಂದೆ, ಎಳ್ಳು, ಹೆಸರು, ಉದ್ದು ಬಿತ್ತನೆಗೆ ಸಹಕಾರಿ ಹಾಗೆಯೇ ಕೆಲವು ರೈತರು ಮುಸುಕಿನ ಜೋಳವನ್ನು ಬಿತ್ತನೆ ಮಾಡುತ್ತಾರೆ. ಕೆಲವು ಭಾಗದ ರೈತರು ಮುಸುಕಿನ ಜೋಳವನ್ನು ಬಿತ್ತನೆ ಮಾಡಿದ್ದು ಮಳೆ ನೀರನ್ನು ಆಶ್ರಯಿಸಿದ್ದಾರೆ.
ಮೇ ತಿಂಗಳ ಅಂತಿಮ ಭಾಗದಲ್ಲಿ ವಾಡಿಕೆ ಮಳೆ 160.4 ಎಂ.ಎಂ. ಮಳೆಯ ಅವಶ್ಯಕತೆ ಇದ್ದು, ಪ್ರಸ್ತುತ 89.1 ಎಂ ಎಂ ಮಳೆಯಾಗುವ ಮೂಲಕ ಶೇ. 44ರಷ್ಟು ಮಳೆಯ ಕೊರತೆಯಾಗಿದೆ. ರೋಹಿಣಿ ಮಳೆ ರೈತರ ಪಾಲಿಗೆ ವರದಾನವಾಗುವ ನಿರೀಕ್ಷೆಯಲ್ಲಿ ರೈತಾಪಿ ವರ್ಗ ಇದೆ.
ಬೇಲೂರು ತಾಲೂಕಿನಾದ್ಯಂತ ಸುರಿದ ಧಾರಾಕಾರ ಮಳೆಗೆ ಪಟ್ಟಣದಲ್ಲಿ ಜನಜೀವನ ಅಸ್ತವ್ಯಸ್ತ ಆಯಿತು. ದಿಢೀರ್ ಬಂದ ಮಳೆಯಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕರು ಪರದಾಡಿದರೆ, ರೈತರ ಮುಖದಲ್ಲಿ ಮಂದಹಾಸ ಮೂಡಿತು.
ತಾಲೂಕಿನಲ್ಲಿ ರೈತರು ಹಂತ ಹಂತವಾಗಿ ತಮ್ಮ ತಮ್ಮ ಜಮೀನುಗಳತ್ತ ಎತ್ತು, ಟ್ರಾೃಕ್ಟರ್‌ಗಳೊಂದಿಗೆ ಕೃಷಿ ಕೆಲಸದಲ್ಲಿ ತೊಡಗಿಸಿಕೊಳ್ಳುತಿದ್ದಾರೆ. ಈಗಾಗಲೇ ತಾಲೂಕಿನಲ್ಲಿ ಜೋಳ, ಆಲೂಗಡ್ಡೆ ಸೇರಿದಂತೆ ಇತರ ಬೆಳೆ ಬೆಳೆಯಲು ರೈತರು ಸನ್ನದ್ಧರಾಗಿದ್ದಾರೆ. ತಾಲೂಕಿನ ಬಹುತೇಕ ಹೋಬಳಿಗಳಲ್ಲಿ ಮಂಗಳವಾರ ಉತ್ತಮ ಮಳೆಯಾಗಿದೆ. ಆದರೆ, ಕಳೆದ ಒಂದು ವಾರದಿಂದ ಮಳೆ ಬಾರದೆ ಕಂಗಾಲಾಗಿದ್ದ ರೈತರಿಗೆ ಮಂಗಳವಾರ ಸುರಿದ ಮಳೆಯಿಂದಾಗಿ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಮಲೆನಾಡು ಭಾಗದಲ್ಲಿನ ಕಾಫಿ ಬೆಳೆಗಾರರಿಗೂ ಉತ್ತಮ ಮಳೆಯಿಂದ ಅನುಕೂಲಕರ ವಾತಾವರಣ ಸೃಷ್ಟಿಯಾಗಿದೆ. ಆದರೆ, ಕಳೆದ 1 ವಾರದಿಂದ ಮಳೆ ವಾತಾವರಣ ಸೃಷ್ಟಿಸಿ ಚದುರಿದಂತೆ ಮಳೆಯಾಗಿ ಹೋಗುತ್ತಿತ್ತು. ಮಂಗಳವಾರ ಬೇಲೂರು ಪಟ್ಟಣದಲ್ಲಿ ಬಿರುಸಾಗಿ ಬಂದ ಗಾಳಿ ಮಳೆಯಿಂದಾಗಿ ವ್ಯಕ್ತಿಯೊಬ್ಬರ ಮನೆಯೊಳಕ್ಕೆ ನೀರು ನುಗ್ಗಿದ್ದರಿಂದ ಮನೆಯಲ್ಲಿದ್ದವರು ನೀರು ಹೊರಗೆ ಹಾಕಲು ಪರದಾಡಿದರು. ಆದರೂ ಮಳೆಯಿಂದಾಗಿ ಬಿಸಿಲ ಬೇಗೆಯಲ್ಲಿದ್ದವರಿಗೆ ತಂಪು ನೀಡಿತು.