ಪಶ್ಚಿಮಘಟ್ಟದ ಬೆಟ್ಟಸಾಲಿನಲ್ಲಿ ತೆರಳುತ್ತಿರುವ ರೈಲು. 
ಹಾಸನ

ರೈಲ್ವೆ ವಿದ್ಯುದ್ದೀಕರಣ ಕಾರ್ಯ ಪೂರ್ಣ

ಶಿವಶಂಕರ್ ಎಂ. ಹೆಬ್ಬಳ್ಳ

ಪ್ರಮುಖ ಮುಖ್ಯಾಂಶಗಳು

  • ಸಕಲೇಶಪುರ-ಸುಬ್ರಹ್ಮಣ್ಯ ನಡುವಿನ ಮಾರ್ಗ
  • ಎರಡೇ ವರ್ಷದಲ್ಲಿ ಕಾಮಗಾರಿ ಮುಕ್ತಾಯ
ಸಕಲೇಶಪುರ : ಸಕಲೇಶಪುರ-ಸುಬ್ರಹ್ಮಣ್ಯ ನಡುವಿನ ರೈಲ್ವೆ ವಿದ್ಯುದ್ದೀಕರಣ ಕಾರ್ಯವನ್ನು ರೈಲ್ವೆ ಇಲಾಖೆ ಕೇವಲ ಎರಡೇ ವರ್ಷದಲ್ಲಿ ಪೂರ್ಣಗೊಳಿಸಿದೆ.
ಪಶ್ಚಿಮಘಟ್ಟದ ಕಡಿದಾದ ಬೆಟ್ಟ ಶ್ರೇಣಿಯ ಸುಬ್ರಹ್ಮಣ್ಯ ಹಾಗೂ ಸಕಲೇಶಪುರ ನಡುವಿನ 55 ಕಿ.ಮೀ. ಉದ್ದದ ರೈಲ್ವೆ ಮಾರ್ಗಕ್ಕೆ 2023ರ ಡಿಸೆಂಬರ್ ತಿಂಗಳಿನಲ್ಲಿ 93.55 ಕೋಟಿ ರೂ. ವೆಚ್ಚದಲ್ಲಿ ವಿದ್ಯುದ್ದೀಕರಣ ಕಾಮಗಾರಿಗೆ ಚಾಲನೆ ದೊರಕಿತ್ತು. 2025ರ ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಮುಕ್ತಾಯಗೊಂಡಿದೆ. ತೀವ್ರ ಕಡಿದಾದ ಬೆಟ್ಟದ ಸಾಲಿನಲ್ಲಿ ವಿದ್ಯುದ್ದೀಕರಣ ಕಾರ್ಯ ರೈಲ್ವೆ ಇಲಾಖೆಗೆ ಸವಾಲಿನ ಕೆಲಸವಾಗಿತ್ತು. ಆದರೆ, ಕೇವಲ ಎರಡು ವರ್ಷದಲ್ಲೇ ಸರಾಗವಾಗಿ ಕಾಮಗಾರಿ ಮುಕ್ತಾಯಗೊಳಿಸುವ ಮೂಲಕ ಸಾಧನೆ ಮಾಡಿದೆ. ಈ  ಮಾರ್ಗದಲ್ಲಿ ಐದು ಸ್ವಿಚಿಂಗ್ ಸ್ಟೇಷನ್‌ಗಳ ನಿರ್ಮಾಣ ಮಾಡಲಾಗಿದ್ದರೆ, ಸುರಂಗ ಮಾರ್ಗದಲ್ಲಿ ಮೇಲ್ಮೈ ವಿದ್ಯುತ್ ಸಾಧನಗಳನ್ನು ಅಳವಡಿಸಲಾಗಿದೆ. 419 ಮುಖ್ಯ ಬ್ರಾಕೆಟ್ ಹಾಗೂ ಅಷ್ಟೇ ಸಂಖ್ಯೆಯ ಹೆಚ್ಚ್ಚುವರಿ ಬ್ರಾಕೆಟ್‌ಗಳನ್ನು ಒದಗಿಸುವ ಮೂಲಕ ಕಾಮಗಾರಿ ಪೂರ್ಣಗೊಳಿಸಲಾಗಿದ್ದು ವಿದ್ಯುತ್ ಸ್ಟೇಷನ್ ನಿರ್ಮಾಣ ಕಾರ್ಯ ಪೂರ್ಣಗೊಂಡರೆ ಡೀಸೆಲ್‌ಗೆ ಗುಡ್‌ಬೈ ಹೇಳಿ ವಿದ್ಯುತ್ ಮೂಲಕ ರೈಲುಗಳು ಸಂಚರಿಸಲಿವೆ.
ರೈಲುಗಳ ಸಂಖ್ಯೆ ಹೆಚ್ಚಳ: ರೈಲ್ವೆ ವಿದ್ಯುದ್ದೀಕರಣ ಪೂರ್ಣಗೊಂಡಿರುವುದರಿಂದ ಸದ್ಯ ಈ ಮಾರ್ಗದಲ್ಲಿ ಸಂಚರಿಸುತ್ತಿರುವ 10 ರೈಲಿಗೆ (ಪ್ಯಾಸೆಂಜರ್ಸ್‌)ಬದಲಾಗಿ ಮತ್ತಷ್ಟು ರೈಲು ಸಂಚಾರಕ್ಕೆ ರೈಲ್ವೆ ಇಲಾಖೆ ಯೋಜನೆ ರೂಪಿಸುತ್ತಿದೆ. ಇದಲ್ಲದೆ ನಾಲ್ಕು ಸರಕು ರೈಲುಗಳ ಬದಲಾಗಿ ಮತ್ತಷ್ಟು ಸರಕು ರೈಲು ಸಂಚಾರ ಆರಂಭಿಸುವ ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗುತ್ತಿದೆ. 
ಪ್ರವಾಸೋದ್ಯಮಕ್ಕೆ ಒತ್ತು 
ಸುಬ್ರಹ್ಮಣ್ಯ ಹಾಗೂ ಸಕಲೇಶಪುರ ನಡುವಿನ ರೈಲ್ವೆ ಮಾರ್ಗ ನಿರ್ಮಾಣವೇ ವಿಸ್ಮಯ ಹುಟ್ಟಿಸುವಂತಿದ್ದು, ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾದ ಈ ಮಾರ್ಗದಲ್ಲಿ 20 ಮೀಟರ್‌ನಿಂದ 2 ಕಿ.ಮೀ. ದೂರದ 57 ಸುರಂಗಗಳಿದ್ದರೆ, 258 ಸೇತುವೆಗಳನ್ನು ನಿರ್ಮಿಸಲಾಗಿದೆ. ತೀವ್ರ ಕಡಿದಾದ ಪಶ್ಚಿಮಘಟ್ಟದ ಪರ್ವತ ಶ್ರೇಣಿಗಳಲ್ಲಿ ಹಾದು ಹೋಗಿರುವ ಈ ರೈಲ್ವೆ ಮಾರ್ಗದಲ್ಲಿ ಪ್ರಯಾಣಿಸುವುದೇ ಒಂದು ಅದ್ಭುತ ಅನುಭವ. ಪಶ್ಚಿಮಘಟ್ಟದ ರಮಣೀಯ ಸೌಂದರ್ಯವನ್ನು ರೈಲು ಪ್ರಯಾಣದ ಮೂಲಕ ಕಣ್ತುಂಬಿಕೊಳ್ಳಬಹುದಾಗಿದೆ. ಪಶ್ಚಿಮಘಟ್ಟದಲ್ಲಿ ರೈಲಿನ ವೇಗ 30 ಕಿ.ಮೀ.ಗೆ ಮಿತಿಗೊಳಿಸಲಾಗಿದ್ದು 55 ಕಿ.ಮೀ. ಪ್ರಯಾಣಕ್ಕೆ 3 ಗಂಟೆಗಳ ಸಮಯ ತೆಗೆದುಕೊಳ್ಳಲಿದೆ. ಇಲ್ಲಿನ ಪ್ರಕೃತಿ ಸೌಂದರ್ಯ ಸವಿಯಲೆಂದೆ ಕೇಂದ್ರ ಸರ್ಕಾರ ಮೂರು ವರ್ಷಗಳ ಹಿಂದೆ ವಿಸ್ಡಂ ರೈಲನ್ನು (ಗಾಜಿನ ಕಿಟಿಕಿಗಳನ್ನು ಅಳವಡಿಸಿರುವ ರೈಲು) ಪರಿಚಯಿಸಿದ್ದು, ಪ್ರತಿದಿನ ವಿಸ್ಡಂ ರೈಲುಪ್ರತಿದಿನ ಈ ಮಾರ್ಗದಲ್ಲಿ ಸಂಚರಿಸುತ್ತಿದೆ. ಈ ರೈಲಿನಲ್ಲಿ ಸಂಚರಿಸಲು ಬಯಸುವ ಜನರು ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸಬೇಕಿದೆ. ರೈಲ್ವೆ ವಿದ್ಯುದ್ದೀಕರಣ ಪೂರ್ಣಗೊಂಡಿರುವುದರಿಂದ ಮತ್ತಷ್ಟು ವಿಸ್ಡಂ ರೈಲುಗಳ ಸಂಚಾರ ಆರಂಭಿಸುವ ಬಗ್ಗೆ ಚಿಂತನೆ ನಡೆದಿದೆ ಎನ್ನುತ್ತಾರೆ ರೈಲ್ವೆ ಅಧಿಕಾರಿಯೊಬ್ಬರು.
ಹೆದ್ದಾರಿಯಲ್ಲಿ ಒತ್ತಡ ಕಡಿಮೆ
ವಿದ್ಯುದ್ದೀಕರಣ ನಂತರ ಮತ್ತಷ್ಟು ರೈಲುಗಳ ಸಂಚಾರ ಆರಂಭವಾಗುವುದರಿಂದ ಬೆಂಗಳೂರು-ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-75 ರಲ್ಲಿನ ವಾಹನಗಳ ದಟ್ಟಣೆ ಕಡಿಮೆಯಾಗಲಿದೆ ಎನ್ನಲಾಗುತ್ತಿದೆ. ಸದ್ಯ ಬೆರಳೆಣಿಕೆ ಸರಕು ರೈಲುಗಳು ಸಂಚರಿಸುತ್ತಿದ್ದರಿಂದ ಹೆದ್ದಾರಿಯಲ್ಲಿ ಸರಕು ಲಾರಿಗಳ ಸಂಚಾರ ಹೆಚ್ಚಿದ್ದು, ರೈಲುಗಳ ಸಂಚಾರ ಹೆಚ್ಚಾಗುವುದರಿಂದ ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ಕಡಿಮೆಯಾಗಲಿದೆ ಎನ್ನಲಾಗುತ್ತಿದೆ. 
ತಾಲೂಕು ಪ್ರವಾಸೋದ್ಯಮ್ಯಕ್ಕೆ ಇಂಬು
ಸುಬ್ರಹ್ಮಣ್ಯ-ಸಕಲೇಶಪುರ ನಡುವಿನ 55 ಕಿ.ಮೀ. ರೈಲ್ವೆ ಮಾರ್ಗದಲ್ಲಿ ದೋಣಿಗಾಲ್ ಹಾಗೂ ಎಡಕುಮೇರಿ ಪ್ರದೇಶದಲ್ಲಿ ರೈಲ್ವೆ ನಿಲ್ದಾಣಗಳಿದ್ದು ಈ ಎರಡು ರೈಲ್ವೆ ನಿಲ್ದಾಣಗಳು ಅಭಿವೃದ್ಧಿ ಹಂತದಲ್ಲಿವೆ. ಇದಾದ ನಂತರ ಪ್ರವಾಸೋದ್ಯಮಕ್ಕೆ ಮೆರುಗು ಬರಲಿದೆ. ಎಡಕುಮೆರಿ ರೈಲ್ವೆ ನಿಲ್ದಾಣದಿಂದ ತಾಲೂಕಿನ ಹೆತ್ತೂರು ಹೋಬಳಿಗೆ ಸಂಪರ್ಕ ದೊರೆಯುವುದರಿಂದ ಈ ಹೋಬಳಿಯಲ್ಲಿರುವ ಕಾಗೆನರಿ,ಪಟ್ಲಬೆಟ್ಟ, ಗವಿಬೆಟ್ಟ, ಮೂಕನಮನ ಜಲಪಾತ, ಬಿಸಿಲೆಘಾಟ್‌ನಂತಹ ಹಲವು ಪ್ರವಾಸಿತಾಣಗಳಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಲಿದೆ. ಈ ಮೊದಲು ಇಲ್ಲಿನ ಪ್ರವಾಸಿತಾಣಗಳಿಗೆ ವಾಹನಗಳ ಮೂಲಕವೇ ತೆರಳಬೇಕಿತ್ತು.
ಟ್ರೆಕ್ಕಿಂಗ್ ಮಾಡುವವರ ಸಂಖ್ಯೆ ಹೆಚ್ಚಳ
ಸದ್ಯ ಈ ರೈಲು ಮಾರ್ಗದ ಹಲವೆಡೆ ಟ್ರೆಕ್ಕಿಂಗ್‌ಗೆ ಉತ್ತಮ ಸ್ಥಳಗಳಿದ್ದು ಸದ್ಯ ಎಡಕುಮೇರಿ ರೈಲ್ವೆ ನಿಲ್ದಾಣದಲ್ಲಿ ಮೂಲಸೌಕರ್ಯ ಒದಗಿಸಿದಲ್ಲಿ ಟ್ರೆಕ್ಕಿಂಗ್ ಮಾಡುವವರ ಸಂಖ್ಯೆ ಬಾರಿ ಪ್ರಮಾಣದಲ್ಲಿ ಹೆಚ್ಚಲಿದೆ.ಸದ್ಯ 55 ಕಿ.ಮೀ. ಉದ್ದದ ರೈಲ್ವೆ ಟ್ರ್ಯಾಕ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮುಖ್ಯ ಕೇಂದ್ರ ಪಟ್ಟಣದಲ್ಲಿ ನಿರ್ಮಾಣವಾಗುತ್ತಿದ್ದು ಪಟ್ಟಣದ ಚಂಪಕನಗರ ಸಮೀಪ ಸುಮಾರು ಒಂದು ಎಕರೆ ಪ್ರದೇಶದಲ್ಲಿ ಪವರ್ ಸ್ಟೇಷನ್ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ. 

ಘಟ್ಟ ಪ್ರದೇಶದಲ್ಲಿ ವಿದ್ಯುದ್ದೀಕರಣ ಕಾರ್ಯ ಮುಕ್ತಾಯಗೊಂಡಿದ್ದು, ಈ ಸೂಕ್ಷ್ಮ ಪ್ರದೇಶದಲ್ಲಿ ಇದುವರೆಗೆ ಸಂಭವಿಸುತ್ತಿದ್ದ ಪರಿಸರ ಹಾನಿ ಮುಂದಿನ ದಿನಗಳಲ್ಲಿ ತಪ್ಪಲಿದೆ. ಪ್ರಯಾಣಿಕರು ನೆಮ್ಮದಿಯಿಂದ ರೈಲುಗಳಲ್ಲಿ ಸಂಚರಿಸಬಹುದು.

ವಿದ್ಯುದ್ದೀಕರಣದಿಂದ ರೈಲುಗಳ ಸಂಖ್ಯೆ ಹೆಚ್ಚಳವಾಗುವುದರಿಂದ ಪ್ರಯಾಣಿಕರು ಇದುವರೆಗೆ ಅನುಭವಿಸುತ್ತಿದ್ದ ಸಮಸ್ಯೆ ತಪ್ಪಲಿದೆ.