ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಸುವ ಕಾರ್ಯಾಚರಣೆ ಪ್ರಾರಂಭಕ್ಕೂ ಮುನ್ನ ತಾಲೂಕಿನ ಬಿಕ್ಕೋಡು ಆನೆ ಕ್ಯಾಂಪ್‌ನಲ್ಲಿ ಸಾಕಾನೆಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಪೂಜೆ ಸಲ್ಲಿಸಿದರು.
- ಕುಮ್ಕಿ ಆನೆಗಳ ನೆರವಿನಿಂದ ಕಾರ್ಯಾಚರಣೆ
ತಾಲೂಕಿನ ಅರೇಹಳ್ಳಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಬೆಳೆ ನಾಶ ಪಡಿಸುತ್ತಿದ್ದ 30 ವರ್ಷದ ಹೆಣ್ಣಾನೆಯನ್ನು ಸೋಮವಾರ ಮಲಸಾವರ ಗ್ರಾಮದ ಕಾಫಿ ತೋಟದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕುಮ್ಕಿ ಆನೆಗಳ ಮೂಲಕ ಹಿಡಿದು ರೆಡಿಯೋ ಕಾಲರ್ ಅಳವಡಿಸಿದರು.
ಕಾಡಾನೆ ಸೆರೆಗಾಗಿ ಎರಡು ದಿನಗಳ ಹಿಂದೆ ಕುಮ್ಕಿ ಆನೆಗಳಾದ ಏಕಲವ್ಯ, ಈಶ್ವರ, ಲಕ್ಷ್ಮಣ, ಧನಂಜಯ, ಅಜ್ಜಯ್ಯ, ಪ್ರಶಾಂತ ಬೇಲೂರು ತಾಲೂಕಿಗೆ ಆಗಮಿಸಿದ್ದವು.
ಸೋಮವಾರ ಬೆಳಗ್ಗೆ ಬಿಕ್ಕೋಡು ಸಮೀಪದ ಆನೆ ಕ್ಯಾಂಪಿನಲ್ಲಿ ಸಾಕಾನೆಗಳಿಗೆ ಪೂಜೆ ಸಲ್ಲಿಸಿ ಕಾರ್ಯಾಚರಣೆಗಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮಳೆಯ ನಡುವೆಯೇ 6 ಗಂಟೆ ಕಾರ್ಯಾಚರಣೆ ನಡೆಸಿ ತಾಲೂಕಿನ ಮಲಸಾವರ ಗ್ರಾಮದ ಮಲೆನಾಡು ಭಾಗದಲ್ಲಿ ಉಪಟಳ ನಿಡುತಿದ್ದ 30ಕ್ಕೂ ಹೆಚ್ಚಿನ ಕಾಡಾನೆಗಳ ಹಿಂಡಿನ ನೇತೃತ್ವ ವಹಿಸುತಿದ್ದ 30 ವರ್ಷದ ಹೆಣ್ಣಾನೆಯನ್ನು ಗುಂಪಿನಿಂದ ಬೇರ್ಪಡಿಸಿದರು.
ಪಶುವೈದ್ಯಾಧಿಕಾರಿಗಳಾದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಡಾ. ವಸೀಮ್, ಮೈಸೂರು ವೃತ್ತದ ಡಾ. ಆದರ್ಶ ಹಾಗೂ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಡಾ. ವಿನಾಯಕ ತಂಡ ಅರಿವಳಿಕೆ ಚುಚ್ಚುಮದ್ದು ನೀಡಿತು.
ಬಳಿಕ ಒಂದು ಗಂಟೆ ನಂತರ ಸುರಕ್ಷಿತವಾಗಿ ಸೆರೆ ಹಿಡಿದು, ಹೊಸದಾದ ಸ್ವದೇಶಿ ನಿರ್ಮಿತ ರೇಡಿಯೋ ಕಾಲರ್ ಅಳವಡಿಸಲಾಯಿತು. ಹಾಗೆಯೇ, ಆನೆಯ ಆರೋಗ್ಯ ಸ್ಥಿತಿ, ದೈಹಿಕ ಸ್ಥಿತಿ ಹಾಗೂ ಸುರಕ್ಷತೆಗೆ ಅಧಿಕಾರಿಗಳು ಅಗತ್ಯವಾದ ಕ್ರಮಕೈಗೊಂಡರು. ಬಳಿಕ ಆನೆ ತನ್ನ ಗುಂಪಿನೊಂದಿಗೆ ಸಹಜವಾಗಿ ಸಂಚರಿಸುವಂತೆ ಮಾಡಲಾಗಿದೆ. ಹೊಸದಾಗಿ ಅಳವಡಿಸಿರುವ ರೇಡಿಯೋ ಕಾಲರ್ ಸಹಾಯದಿಂದ ಆನೆಗಳ ಚಲನವಲನ, ಸಂಚರಿಸುವ ವ್ಯಾಪ್ತಿ ಹಾಗೂ ಪ್ರಮುಖ ಸಂಚಾರ ಮಾರ್ಗಗಳನ್ನು ನಿರಂತರವಾಗಿ ಪತ್ತೆ ಮಾಡಲು ಸಹಾಯವಾಗಲಿದೆ.
ಮಂಗಳವಾರವೂ ಕಾಡಾನೆ ಸರೆ ಕಾರ್ಯಾಚರಣೆ ಮುಂದುವರಿಯಲಿದೆ. ಡಿಸಿಎಫ್ ಸೌರಬ್ ಕುಮಾರ್, ಎಸಿಎಫ್‌ಗಳಾದ ಮಧುಸೂದನ್, ಮೋಹನ್ ಕುಮಾರ್, ಕಲಂದರ್, ವಲಯ ಅರಣ್ಯಧಿಕಾರಿಗಳಾದ ಯತೀಶ್,ತ್ರೀಮೂರ್ತಿ, ದಿಲೀಪ್, ಶಿವಾನಂದ್, ರೇವಣಸಿದ್ದಯ್ಯ ಸೇರಿದಂತೆ ಇಟಿ ಎಫ್ ಮತ್ತು ಆರ್‌ಆರ್‌ಟಿ ಸಿಬ್ಬಂದಿ ಇದ್ದರು.