ಪುರಸಭೆ ಅಧ್ಯಕ್ಷೆ ಉಷಾ ಸತೀಶ್ ಅಧ್ಯಕ್ಷತೆಯಲ್ಲಿ ಪುರಸಭೆಯಿಂದ ಬೀದಿ ನಾಯಿಗಳಿಗೆ ಪಶು ವೈದ್ಯಾಧಿಕಾರಿಗಳ ಸಮ್ಮುಖದಲ್ಲಿ ರೇಬಿಸ್ ಲಸಿಕೆ ಹಾಕಿಸಲಾಯಿತು. ಪುರಸಭಾ ಸದಸ್ಯ ಅಕ್ರಂ ಷರೀಫ್, ಆರೋಗ್ಯಾಧಿಕಾರಿ ಲೋಹಿತ್, ಪಶು ವೈದ್ಯರಾದ ಡಾ.ಸಯ್ಯದ್, ಡಾ.ಹರೀಶ್ ಸೇರಿದಂತೆ ಇತರರಿದ್ದರು.
- ಪುರಸಭೆ ಅಧ್ಯಕ್ಷೆ ಉಷಾ ಸತೀಶ್ ಹೇಳಿಕೆ
ಬೇಲೂರು: ಸಾಕು ನಾಯಿ ಹಾಗೂ ಬೀದಿ ನಾಯಿಗಳಿಗೆ ಲಸಿಕೆ ಹಾಕಿಸುವುದರಿಂದ ರೇಬಿಸ್ ರೋಗ ನಿರ್ಮೂಲನೆ ಮಾಡಲು ಸಾಧ್ಯ ಎಂದು ಪುರಸಭೆ ಅಧ್ಯಕ್ಷೆ ಉಷಾ ಸತೀಶ್ ಹೇಳಿದರು.
ಪಟ್ಟಣದ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಸೋಮವಾರ ಪುರಸಭೆ ವತಿಯಿಂದ ಹಿಡಿಯಲಾಗಿದ್ದ ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಟ್ಟಣದಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾದ ಕಾರಣ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಇಂದು ಪಶುವೈದ್ಯರಿಂದ ನೂರಕ್ಕೂ ಹೆಚ್ಚು ನಾಯಿಗಳಿಗೆ ರೇಬಿಸ್ ಲಸಿಕೆ ಹಾಕಿಸಲಾಗಿದೆ. ಈಗಾಗಲೇ 600 ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಗುರುತಿಸಿದ್ದು, ಎಲ್ಲ ಬೀದಿ ನಾಯಿಗಳಿಗೂ ರೇಬಿಸ್ ನಿಯಂತ್ರಣದ ಲಸಿಕೆ ಹಾಕುವ ಜತೆಗೆ ರೇಬಿಸ್ ಕಾಯಿಲೆ ಕುರಿತಾಗಿಯೂ ಜನರು ಹಾಗೂ ನಾಯಿಗಳ ಮಾಲೀಕರಿಗೆ ಜಾಗೃತಿ ಮೂಡಿಸಲಾಗುವುದು ಎಂದರು.
ಪಶು ವೈದ್ಯಾಧಿಕಾರಿ ಡಾ.ಆನಂದ್‌ಕುಮಾರ್ ಮಾತನಾಡಿ, ಬೇರೆ ಬೇರೆ ತಳಿಯ ಸಾಕು ನಾಯಿಗಳ ಜತೆಗೆ, ಪುರಸಭೆಯಿಂದ ಬೀದಿ ನಾಯಿಗಳನ್ನು ಹಿಡಿದು ಆಸ್ಪತ್ರೆಗೆ ತಂದು ಲಸಿಕೆ ಹಾಕಿಸಲಾಗುತ್ತಿದೆ. ನಾಯಿ ಕಚ್ಚಿದ ನಂತರ ರೋಗ 20 ರಿಂದ 90 ದಿನಗಳವರೆಗೆ ಕಾಣಿಸಿಕೊಳ್ಳಬಹುದು. ಇದು ಮಕ್ಕಳಲ್ಲಿ ಬೇಗ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಸಾಮಾನ್ಯವಾಗಿ ನಾಯಿ ಕಚ್ಚಿದ ಜಾಗ ಮೆದುಳಿನಿಂದ ದೂರವಿದ್ದಷ್ಟು ಕಾಯಿಲೆ ಕಾಣಿಸಿಕೊಳ್ಳುವ ಸಮಯ ಹೆಚ್ಚಾಗುತ್ತದೆ. ಸೋಂಕಿರುವ ಪ್ರಾಣಿಗಳು ಕಚ್ಚುವುದರಿಂದ, ಪ್ರಾಣಿ ಎಂಜಲು ದೇಹದ ಮೇಲಿರುವ ಗಾಯ ಅಥವಾ ಕಣ್ಣು, ಬಾಯಿ ಸಂಪರ್ಕಕ್ಕೆ ಬಂದಾಗ ಈ ವೈರಾಣು ಹರಡುವ ಸಾಧ್ಯತೆ ಇರುತ್ತದೆ ಎಂದು ಮಾಹಿತಿ ನೀಡಿದರು.
ಪುರಸಭಾ ಮುಖ್ಯಾಧಿಕಾರಿ ಬಸವರಾಜ ಶಿಗ್ಗಾವಿ ಟಕಪ್ಪ ಮಾತನಾಡಿ, ಬೀದಿ ನಾಯಿಗಳನ್ನು ಹಿಡಿದು ರೇಬಿಸ್ ಲಸಿಕೆ ಹಾಕಿಸಿ ನಾಯಿಗಳಿಗೆ ಗುರುತು ಮಾಡಲಾಗುತ್ತಿದೆ. ಜತೆಗೆ ಈಗಾಗಲೇ ಬೀದಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗಾಗಿ ಟೆಂಡರ್ ಕರೆಯಲಾಗಿದೆ ಎಂದರು.
ಪುರಸಭಾ ಸದಸ್ಯ ಅಕ್ರಂ ಷರೀಫ್, ಆರೋಗ್ಯಾಧಿಕಾರಿ ಲೋಹಿತ್, ಪಶು ವೈದ್ಯರಾದ ಡಾ.ಸಯ್ಯದ್, ಡಾ.ಹರೀಶ್ ಸೇರಿದಂತೆ ಇತರರಿದ್ದರು.