ಹಿಂದೂ ದೇವಾಲಯಗಳ ಅರ್ಚಕರ ಒಕ್ಕೂಟದ ಅಧ್ಯಕ್ಷ ಡಾ.ಎಂ.ಎಸ್.ವಿಶ್ವನಾಥ್ ದೀಕ್ಷಿತ್
- ಹಿಂದೂ ದೇವಾಲಯಗಳ ಅರ್ಚಕರ ಒಕ್ಕೂಟದ ಅಧ್ಯಕ್ಷ ಡಾ.ಎಂ.ಎಸ್.ವಿಶ್ವನಾಥ್ ದೀಕ್ಷಿತ್ ಆಗ್ರಹ
ಚನ್ನರಾಯಪಟ್ಟಣ: ಬೇಲೂರಿನ ಚನ್ನಕೇಶವ ಬ್ರಹ್ಮ ರಥೋತ್ಸವದಲ್ಲಿ ಕುರಾನ್ ಪಠಣೆ ಮಾಡುವುದನ್ನು ಹಿಂದೂ ದೇವಾಲಯಗಳ ಅರ್ಚಕರ ಒಕ್ಕೂಟದ ರಾಜ್ಯ ಅಧ್ಯಕ್ಷ ಡಾ.ಎಂ.ಎಸ್.ವಿಶ್ವನಾಥ್ ದೀಕ್ಷಿತ್ ಖಂಡಿಸಿದರು.
ವಿಶ್ವವಿಖ್ಯಾತ ದೇವಾಲಯಗಳಲ್ಲಿ ಒಂದಾದ ಶ್ರೀ ಚನ್ನಕೇಶವ ದೇವಾಲಯದಲ್ಲಿ ನಡೆಯುವ ರಥೋತ್ಸವವು ಶಾಂತಿ, ಸೌಹಾರ್ದದ ಸಂಕೇತವಾಗಿದೆ. ರಥೋತ್ಸವದಲ್ಲಿ ಖಾಜಿಯವರು ಬಂದು ಪ್ರಾರ್ಥನೆ ಮಾಡುವುದರ ಬಗ್ಗೆ ಹಿಂದೂ ಧಾರ್ಮಿಕ ಇಲಾಖೆಯ ಯಾವುದೇ ನಿಯಮಾವಳಿಯಲ್ಲಿಯೂ ಉಲ್ಲೇಖವಿಲ್ಲ. ಆದರೆ ಕೆಲ ವರ್ಷಗಳ ಹಿಂದೆ ಯಾರೋ ಒಬ್ಬರ ಹಿತಾಸಕ್ತಿಗಾಗಿ ಮುಸ್ಲಿಂ ಖಾಜಿಯವರು ರಥೋತ್ಸವ ಸಂದರ್ಭದಲ್ಲಿ ರಥದ ಮುಂದೆ ನಿಂತು ಕುರ್‌ಆನ್ ಪಠಣ ಮಾಡಿದ್ದರಿಂದ ಹಾಗೇ ಬೆಳೆದುಕೊಂಡು ಬಂದಿತ್ತು. ನಿಯಮ ಮೀರಿ ಮಾಡುತ್ತಿರುವ ಈ ಪ್ರಕ್ರಿಯೆಗಳು ನಿಲ್ಲಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಕುರಾನ್ ಪಠಣಕ್ಕೆ ಅವಕಾಶ ಕೊಟ್ಟು ಹಿಂದೂ ಧರ್ಮಕ್ಕೆ ಹಾಗೂ ಶ್ರೀ ಚನ್ನಕೇಶವ ಸ್ವಾಮಿ ಭಕ್ತರಿಗೆ ಧಕ್ಕೆ ಉಂಟು ಮಾಡುವ ಕೆಲಸ ಮಾಡಬಾರದು. ಅಲ್ಲದೆ ಇದರ ಸಂಪೂರ್ಣ ಹೊಣೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ್ದಾಗಿದ್ದು, ಯಾವುದೇ ರೀತಿಯ ಪ್ರಾರ್ಥನೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.
ವಿವಾದ ಇದೆ ಎಂದು ಅರಿತಿದ್ದರೂ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಕಳೆದ ಬಾರಿಯ ರಥೋತ್ಸವದಲ್ಲಿ ದೇವಸ್ಥಾನದ ಒಳಗಿನ ಆವರಣದಲ್ಲಿ ಪ್ರಾರ್ಥನೆ ಮಾಡಲು ಅವಕಾಶ ನೀಡಿರುವುದು ಖಂಡನೀಯ. ನಿಯಮ ಮೀರಿ ಪ್ರಾರ್ಥನೆ ಅಥವಾ ಕುರಾನ್ ಪಠಣಕ್ಕೆ ಅವಕಾಶ ನೀಡದೆ, ವಿಚಾರವನ್ನು ಸೂಕ್ಷ್ಮವಾಗಿ ಅರಿತು ಹಿಂದೂಗಳ ಪರವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಹಿಂದೂ ಅರ್ಚಕರ ಒಕ್ಕೂಟದ ಗೌರವಾಧ್ಯಕ್ಷ ವೆಂಕಟೇಶ್, ತಾಲೂಕು ಉಪಾಧ್ಯಕ್ಷ ವಿಜಯಕುಮಾರ್, ಕಾರ್ಯದರ್ಶಿ ಸೀತಾರಾಮ್ ನಿರ್ದೇಶಕ ಮಹೇಶ್ ದತ್ತ ಭಾಗವಹಿಸಿದ್ದರು.