ಹಾಸನ ನಗರದ ಪ್ರಮುಖ ರಸ್ತೆಗಳಲ್ಲಿ ಅತಿವೇಗವಾಗಿ ಆಟೋ ಚಲಾಯಿಸಿ ಪುಂಡಾಟ ಮೆರೆಯುತ್ತಿದ್ದ ಯುವಕರನ್ನು ಸಾರ್ವಜನಿಕರು ಹಿಡಿದು ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದರು.
- ಆಟೋ ಚಲಾಯಿಸಿ ಪುಂಡಾಟ
- ಐವರು ಯುವಕರಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು
ಹಾಸನ: ನಗರದ ಪ್ರಮುಖ ರಸ್ತೆಗಳಲ್ಲಿ ಅತಿವೇಗವಾಗಿ ಆಟೋ ಚಲಾಯಿಸಿ ಪುಂಡಾಟ ಮೆರೆದು ಮೂರು ಬೈಕ್ ಜಖಂ ಮಾಡಿದ ಐವರು ಯುವಕರನ್ನು ಇತ್ತೀಚೆಗೆ ಸಾರ್ವಜನಿಕರು ಹಿಡಿದು ಥಳಿಸಿದ ನಂತರ ಪೊಲೀಸರಿಗೆ ಒಪ್ಪಿಸಿದರು.
ಯುವಕರ ಈ ಅಜಾಗರೂಕ ವಾಹನ ಚಾಲನೆಯಿಂದ ಕೆಲವು ಸಮಯ ರಸ್ತೆಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆಟೋದಲ್ಲಿ ಸಂಚರಿಸುತ್ತಿದ್ದ ಐವರು ಯುವಕರು ನಗರದ ವಿವಿಧ ಮುಖ್ಯ ಭಾಗಗಳಲ್ಲಿ ಅತಿವೇಗವಾಗಿ ವಾಹನ ಚಲಾಯಿಸುತ್ತಾ ಸಿಕ್ಕಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದು ಹುಚ್ಚಾಟ ಮೆರೆದಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಆಟೋ ಅತಿ ವೇಗದಿಂದ ಸಂಚರಿಸಿದ ಕಾರಣ ರಸ್ತೆಗಳಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಹಾಗೂ ಪಾದಚಾರಿಗಳು ಭಯಭೀತರಾಗಿದ್ದು, ಕೆಲವರು ತಕ್ಷಣ ವಾಹನಗಳನ್ನು ನಿಲ್ಲಿಸಿ ದೂರ ಸರಿದಿದ್ದಾರೆ. ಮೂರು ಬೈಕ್‌ಗಳಿಗೆ ಹಾನಿಯಾಗಿದ್ದು, ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡವರನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗಳಿಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ.
ಸಾರ್ವಜನಿಕರು ಆಟೋವನ್ನು ತಡೆದು ಯುವಕರನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದರು. ಬಳಿಕ ಕೆಲ ಸ್ಥಳೀಯರು ಮಧ್ಯಪ್ರವೇಶ ಮಾಡಿ ಅವರನ್ನು ಹಾಸನ ನಗರ ಪೊಲೀಸ್ ಠಾಣೆ ಪೊಲೀಸರಿಗೆ ಒಪ್ಪಿಸಿದರು. ಈ ಸಂಬಂಧ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.