ಶ್ರವಣಬೆಳಗೋಳದಲ್ಲಿ 2006ರಲ್ಲಿ ನಡೆದ ಮಹಾ ಮಸ್ತಕಾಭಿಷೇಕದ ಅಟ್ಟಣಿಗೆ ನಿರ್ಮಾಣದ ಬಿಲ್ ಪಾವತಿಸದ ಆರೋಪ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಲೋಕೋಪಯೋಗಿ ಇಲಾಖೆ ಮುಖ್ಯ ಕಚೇರಿಯ ವಸ್ತುಗಳನ್ನು ಜಪ್ತಿ ಮಾಡಲಾಯಿತು 
ಹಾಸನ

ಲೋಕೋಪಯೋಗಿ ಇಲಾಖೆ ಕಚೇರಿ ವಸ್ತುಗಳು ಜಪ್ತಿ

ಪ್ರಮುಖ ಮುಖ್ಯಾಂಶಗಳು

  • ಲೋಕೋಪಯೋಗಿ ಇಲಾಖೆ ಕಚೇರಿ ವಸ್ತುಗಳು ಜಪ್ತಿ
  • ಮಸ್ತಕಾಭಿಷೇಕದ ಅಟ್ಟಣಿಗೆ ನಿರ್ಮಾಣದ ಬಿಲ್ ಪಾವತಿಸದ ಹಿನ್ನೆಲೆ
  • ಚನ್ನರಾಯಪಟ್ಟಣ ಸಿವಿಲ್ ನ್ಯಾಯಾಲಯ ಆದೇಶ

ಹಾಸನ:

ಶ್ರವಣಬೆಳಗೋಳದಲ್ಲಿ 2006ರಲ್ಲಿ ನಡೆದ ಮಹಾ ಮಸ್ತಕಾಭಿಷೇಕದ ಅಟ್ಟಣಿಗೆ ನಿರ್ಮಾಣದ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಲೋಕೋಪಯೋಗಿ ಇಲಾಖೆ ಮುಖ್ಯ ಕಚೇರಿಯ ವಸ್ತುಗಳನ್ನು ಶನಿವಾರ ಜಪ್ತಿ ಮಾಡಲಾಯಿತು.

ನಗರದ ಆರ್.ಸಿ.ರಸ್ತೆಯಲ್ಲಿರುವ ಮುಖ್ಯ ಕಾರ್ಯಪಾಲಕ ಇಂಜಿನಿಯರ್ ಕಚೇರಿಗೆ ಮಧ್ಯಾಹ್ನ ಆಗಮಿಸಿದ ನ್ಯಾಯಾಲಯದ ಸಿಬ್ಬಂದಿ, ಆದೇಶದ ಪ್ರತಿಯಲ್ಲಿರುವಂತೆ ಕಚೇರಿಯ ಚೇರು, ಟೇಬಲ್, ಕಂಪ್ಯೂಟರ್, ಪ್ರಿಂಟರ್, ಜೆರಾಕ್ಸ್ ಮಷಿನ್‌ಗಳನ್ನು ಜಪ್ತಿ ಮಾಡಿದರು.

ಹನ್ನೆರಡು ವರ್ಷಗಳಿಗೊಮ್ಮೆ ಗೊಮ್ಮಟೇಶನ ಮಹಾ ಮಸ್ತಕಾಭಿಷೇಕ ಕಾರ್ಯಕ್ರಮ ನಡೆಯುತ್ತದೆ. 2006ರಲ್ಲಿ ನಡೆದಿದ್ದ ಈ ಕಾರ್ಯಕ್ರಮದಲ್ಲಿ ಜಗನ್ನಾಥ್ ಎಂಬುವರು ಟೆಂಡರ್ ಮೂಲಕ ಕಾಮಗಾರಿ ಪಡೆದು ಸುಮಾರು 4 ಕೋಟಿ ರೂ.ವೆಚ್ಚದಲ್ಲಿ ಅಟ್ಟಣಿಗೆ ನಿರ್ಮಾಣ ಮಾಡಿದ್ದರು. ನಿಗದಿಯಾಗಿದ್ದ ಬಿಲ್ ಪಾವತಿಸದೇ ಅಧಿಕಾರಿಗಳು ಸಬೂಬು ಹೇಳುತ್ತಿದ್ದರು. ಕೊನೆಗೆ ಬೇಸತ್ತ ದೂರುದಾರರು 2014ರಲ್ಲಿ ಚನ್ನರಾಯಪಟ್ಟಣ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿ ಬಿಲ್ ಪಾವತಿಸಲು ಕೋರಿದ್ದಾರೆ. ನಂತರ ಈ ಪ್ರಕರಣ ಹಾಸನ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾವಣೆಗೊಂಡು ಮೂರು ತಿಂಗಳ ಹಿಂದೆ ಬಾಕಿ ಬಿಲ್ ಜತೆ ಬಡ್ಡಿ ಸೇರಿಸಿ ಸುಮಾರು 5ಕೋಟಿ 80ಲಕ್ಷ ರೂ.ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ.
ಈ ಆದೇಶವನ್ನು ಲೋಕೋಪಯೋಗಿ ಇಲಾಖೆಯ ಪಾಲಿಸದ್ದರಿಂದ ನ್ಯಾಯಾಲಯ ಕಚೇರಿಯ ವಸ್ತುಗಳನ್ನು ವಶಕ್ಕೆ ಪಡೆದು ಬಿಲ್ ಪಾವತಿಸಿದ ನಂತರ ವಾಪಸ್ ನೀಡುವಂತೆ ಆದೇಶಿಸಿದೆ.
ಈಗಾಗಲೇ ಕಾಮಗಾರಿ ಬಿಲ್ ಪಾವತಿಯಾಗಿದೆ. ಬಾಕಿ ಉಳಿದಿರುವುದು ಕೇವಲ 27 ಲಕ್ಷ ರೂ.ಇಎಸ್‌ಡಿ ಹಣ ಮಾತ್ರ. ಇದರಲ್ಲಿ ನಮ್ಮ ಇಲಾಖೆಯ ಲೋಪ ಯಾವುದೂ ಇಲ್ಲ. ನಮ್ಮ ಪರ ವಾದ ಮಂಡಿಸಬೇಕಿದ್ದ ವಕೀಲರ ಕಾರ್ಯ ಕ್ಷಮತೆಯ ಕೊರತೆಯಿಂದ ಈ ಏಕಪಕ್ಷೀಯ ಆದೇಶ ಹೊರಡಿಸಲಾಗಿದೆ. ಈ ಪ್ರಕರಣದ ಬಗ್ಗೆ ಹೈಕೋರ್ಟ್‌ನಲ್ಲಿ ಅಪೀಲು ದಾವೆ ಹೂಡಿದ್ದೇವೆ. ಮುಂದೆ ನ್ಯಾಯಾಲಯದಲ್ಲಿ ದಾಖಲೆ ಸಮೇತ ವರದಿ ಸಲ್ಲಿಸುತ್ತೇವೆ. ಆದರೂ ನ್ಯಾಯಲಯದ ಆದೇಶವನ್ನು ನಾವು ಧಿಕ್ಕರಿಸುವಂತಿಲ್ಲ. ಆ ಕಾರಣದಿಂದ ಜಪ್ತಿಗೆ ಅವಕಾಶ ಮಾಡಿಕೊಟ್ಟಿದ್ದೇವೆ.
ಜಯಣ್ಣ
ಕಾರ್ಯಪಾಲಕ ಇಂಜಿನಿಯರ್