ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಶುಭಂ ಶುಕ್ಲ, ಗುಣನಾಥ ಸ್ವಾಮೀಜಿ, ಕೆ.ಎಂ.ಶ್ರೀನಿವಾಸ್, ಎ.ಎಂ.ಶಶಿಮೋಹನ್ ಇತರರಿದ್ದರು. 
ಹಾಸನ

ಜನಸೇವೆಯೇ ಸರ್ಕಾರಿ ನೌಕರರ ಧ್ಯೇಯವಾಗಲಿ

ಪ್ರಮುಖ ಮುಖ್ಯಾಂಶಗಳು

  • ಜನಸೇವೆಯೇ ಸರ್ಕಾರಿ ನೌಕರರ ಧ್ಯೇಯವಾಗಲಿ
  • ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶುಭಂ ಶುಕ್ಲ ಆಶಯ
ಹಾಸನ: ಶಿಕ್ಷಣ ಎಂಬುದು ವ್ಯಕ್ತಿಯ ಜೀವನ ರೂಪಿಸುವ ಪ್ರಮುಖ ಅಸ್ತ್ರವಾಗಿದ್ದು, ಆಸಕ್ತಿ ಮತ್ತು ಛಲ ಇದ್ದರೆ ಉನ್ನತ ಸಾಧನೆ ಮಾಡಬಹುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶುಭಂ ಶುಕ್ಲ ಅಭಿಪ್ರಾಯಪಟ್ಟರು.
ನಗರದ ಹಾಸನಾಂಬಾ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ಹಾಸನ ಜಿಲ್ಲಾ ಸರ್ಕಾರಿ, ಅರೆ ಸರ್ಕಾರಿ ಹಾಗೂ ನಿಗಮ ಮಂಡಳಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ 8ನೇ ಸರ್ವ ಸದಸ್ಯರ ಸಾಮಾನ್ಯ ವಾರ್ಷಿಕ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ಸರ್ಕಾರಿ ನೌಕರರ ಜವಾಬ್ದಾರಿ ಕಚೇರಿ ಸಮಯಕ್ಕೆ ಸೀಮಿತವಾಗಿರುವುದಿಲ್ಲ. ಜನಸೇವೆಯೇ ಅವರ ಪ್ರಮುಖ ಧ್ಯೇಯವಾಗಿದ್ದು, ದಿನದ 24 ಗಂಟೆಯೂ ಸಾರ್ವಜನಿಕರ ಹಿತಕ್ಕಾಗಿ ಕಾರ್ಯನಿರ್ವಹಿಸಬೇಕಾದ ಹೊಣೆಗಾರಿಕೆ ಅವರ ಮೇಲಿದೆ ಎಂದರು.
ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯದಿಂದ ಸಮಾಜದಲ್ಲಿ ಉತ್ತಮ ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಸಾಧ್ಯವಾಗುತ್ತದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡುವ ಗೌರವ ಇತರ ಮಕ್ಕಳಿಗೂ ಸ್ಫೂರ್ತಿಯಾಗಲಿದೆ ಎಂದು ತಿಳಿಸಿದರು.
ಬಾಲ್ಯದಲ್ಲಿ ಶಿಕ್ಷಣದಿಂದ ವಂಚಿತರಾದ ವಯಸ್ಕರಿಗೆ ಮತ್ತೊಮ್ಮೆ ಕಲಿಯುವ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಹಾಸನ ಜಿಲ್ಲೆಯಲ್ಲಿಯೇ 300ಕ್ಕೂ ಹೆಚ್ಚು ಜನ ವಿವಿಧ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುತ್ತಿರುವುದು ಶಿಕ್ಷಣದ ಮಹತ್ವವನ್ನು ಸಾರುತ್ತದೆ ಎಂದು ಹೇಳಿದರು.
ಶಿಕ್ಷಣ ಮತ್ತು ಪುಸ್ತಕಗಳೊಂದಿಗೆ ನಿಕಟ ಸಂಬಂಧ ಬೆಳೆಸಿಕೊಂಡರೆ ವ್ಯಕ್ತಿಯ ಭವಿಷ್ಯ ಉಜ್ವಲವಾಗುತ್ತದೆ. ನಿರಂತರ ಅಧ್ಯಯನ ಮತ್ತು ಪರಿಶ್ರಮದಿಂದ ಯಾವುದೇ ಕ್ಷೇತ್ರದಲ್ಲಿಯೂ ಯಶಸ್ಸು ಸಾಧಿಸಬಹುದಾಗಿದೆ ಎಂದು ಹೇಳಿದರು.
ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿಕ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳಿಗೆ ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿವಿಧ ಇಲಾಖೆಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ ಸರ್ಕಾರಿ ನೌಕರರನ್ನು ಅಭಿನಂದಿಸಲಾಯಿತು. ಬಳಿಕ ನಡೆದ ಸರ್ವ ಸದಸ್ಯರ ಸಾಮಾನ್ಯ ವಾರ್ಷಿಕ ಸಭೆಯಲ್ಲಿ ಕಳೆದ ಸಾಲಿನ ಆಡಳಿತ ಮಂಡಳಿಯ ಕಾರ್ಯಚಟುವಟಿಕೆ, ಸಂಘದ ಅಭಿವೃದ್ಧಿ ಯೋಜನೆ ಹಾಗೂ ಸದಸ್ಯರ ಕಲ್ಯಾಣಕ್ಕಾಗಿ ಜಾರಿಗೊಳಿಸಿರುವ ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಲಾಯಿತು.
ವಾರ್ಷಿಕ ವರದಿ, ಜಮಾ-ಖರ್ಚು ವಿವರ, ಲಾಭ-ನಷ್ಟ, ಆಸ್ತಿ-ಜವಾಬ್ದಾರಿ ವಿವರಗಳು ಹಾಗೂ ಲೆಕ್ಕಪತ್ರಗಳನ್ನು ಸದಸ್ಯರ ಮುಂದಿಟ್ಟು ಅನುಮೋದನೆ ಪಡೆಯಲಾಯಿತು. ಮುಂದಿನ ಸಾಲಿನ ಲೆಕ್ಕ ಪರಿಶೀಲನೆಗಾಗಿ ಚಾರ್ಟೆಡ್ ಅಕೌಂಟೆಂಟ್ ನೇಮಕ, ಸದಸ್ಯರಿಗೆ ಮತ್ತಷ್ಟು ಸೌಲಭ್ಯ ವಿಸ್ತರಿಸುವುದು, ಗೃಹ ನಿರ್ಮಾಣ ಯೋಜನೆಗಳಿಗೆ ವೇಗ ನೀಡುವುದು ಹಾಗೂ ಸಂಘದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳ ಕುರಿತು ಸದಸ್ಯರು ಚರ್ಚಿಸಿ ನಿರ್ಣಯ ಕೈಗೊಂಡರು.
ಗುಣನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂಘದ ಜಿಲ್ಲಾಧ್ಯಕ್ಷ ಕೆ.ಎಂ.ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾಜಸೇವಕ ಡಾ.ರಾಹುಲ್ ದೇವರಾಜು, ವೆಲ್‌ಫೇರ್ ಅಸೋಸಿಯೇಷನ್‌ನ ಮಂಜುನಾಥ್ ಕಾಳಿಂಗಪ್ಪ, 2025ನೇ ಸಾಲಿನ ಜಿಲ್ಲೆಯ ಯುಪಿಎಸ್ ಸಾಧಕ ಎ.ಎಂ.ಶಶಿಮೋಹನ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಸಾಂಸ್ಕೃತಿಕ ಕಾರ್ಯದರ್ಶಿ ಎಸ್.ಮಧು, ಸೊಸೈಟಿ ಅಧ್ಯಕ್ಷ ಎಂ.ಎನ್.ಪರಮೇಶ್, ಗೌರವಾಧ್ಯಕ್ಷ ಜಿ.ಪಿ.ವಿಶ್ವನಾಥ್, ಉಪಾಧ್ಯಕ್ಷ ಬಿ.ಆರ್.ಧರ್ಮ, ಗೌರವಾಧ್ಯಕ್ಷೆ ಕೆ.ಜೆ.ಸಾವಿತ್ರಮ್ಮ, ಉಪಾಧ್ಯಕ್ಷ ಎನ್.ಎಸ್.ಲೋಕೇಶ್ ಕುಮಾರ್, ಗೌರವ ಕಾರ್ಯದರ್ಶಿ ಸತೀಶ್, ಜಿ.ಪಿ. ವಿಶ್ವನಾಥ್, ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಪರಮೇಶ್, ಉಪಾಧ್ಯಕ್ಷ ಲೋಕೇಶ್ ಕುಮಾರ್, ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಉಪಾಧ್ಯಕ್ಷ ಬಿ.ಆರ್.ಧರ್ಮ, ನಿರ್ದೇಶಕ ಡಿ. ಸುರೇಶ್, ಆರ್. ಶಿವೇಗೌಡ, ಆರ್.ಯತೀಶ್, ಬೈರೇಶ್ ಇತರರಿದ್ದರು.