ಹೊಳೆನರಸೀಪುರ ತಾಲೂಕು ಕಚೇರಿಯಲ್ಲಿ ಜನ ಸಂಪರ್ಕ ಸಭೆ ಆಯೋಜಿಸಲಾಗಿತ್ತು. ತಹಸೀಲ್ದಾರ್ ವೈ.ಎಂ.ರೇಣುಕುಮಾರ್, ಇಒ ಮುನಿರಾಜು, ಬಿಇಒ ಸೋಮಲಿಂಗೇಗೌಡ ಇದ್ದರು. 
ಹಾಸನ

ಜನಸಂಪರ್ಕ ಸಭೆಗೆ ಸಿಗದ ನಿರೀಕ್ಷಿತ ಸ್ಪಂದನೆ

ಲಲಾಟಾಕ್ಷ ಎಸ್
ಹೊಳೆನರಸೀಪುರ: ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ಅಧ್ಯಕ್ಷತೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಗೆ ಸಾರ್ವಜನಿಕರಿಂದ ನಿರೀಕ್ಷಿತ ಸ್ಪಂದನೆ ವ್ಯಕ್ತವಾಗಲಿಲ್ಲ.
ತಾಲೂಕು ಕಚೇರಿಯ ಸಭಾಂಗಣದಲ್ಲಿ ನಡೆದ ಜನ ಸಂಪರ್ಕ ಸಭೆಗೆ ಸಾರ್ವಜನಿಕರಿಂದ ಕುಂದು ಕೊರತೆಗಳ ವಿಷಯವಾಗಿ ಒಟ್ಟು 12 ಅರ್ಜಿಗಳು ಸಲ್ಲಿಕೆಯಾದವು. ಇಲಾಖೆಗಳ ಕರ್ತವ್ಯ ನಿರ್ವಹಣೆ ಅವಧಿಯಲ್ಲಿ ನಿತ್ಯ ನೂರಾರು ಸಾರ್ವಜನಿಕರು ಕೆಲಸ ಕಾರ್ಯಗಳಿಗಾಗಿ ಅಲೆದಾಡುತ್ತಾರೆ. ಸ್ಥಳದಲ್ಲೇ ಸಮಸ್ಯೆ ಬಗೆಹರಿಸಲು ಜನಸಂಪರ್ಕ ಸಭೆ ನಡೆಸಿದರೆ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಭಾಗವಹಿಸದೆ ನಿರಾಸಕ್ತಿ ಹೊಂದಿರುವುದು ಕಂಡುಬಂದಿತು.
ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಪ್ರತಿ ತಿಂಗಳ ಮೊದಲನೇ ಶನಿವಾರ ತಾಲೂಕು ಕೇಂದ್ರದಲ್ಲಿ ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಲಾಯಿತು. ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಸ್ಥಳದಲ್ಲಿಯೇ ಬಗೆಹರಿಸಲಾಗಿದೆ. ಇನ್ನುಳಿದ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ 7 ದಿನದೊಳಗೆ ಅರ್ಜಿದಾರರಿಗೆ ಸೂಕ್ತ ಮಾಹಿತಿ ನೀಡಬೇಕೆಂದು ತಿಳಿಸಿದ್ದೇನೆ. ಶನಿವಾರ ಸುಮಾರು ಕಂದಾಯ ಇಲಾಖೆಗೆ 6 ಅರ್ಜಿಗಳು, ಪುರಸಭೆ ವ್ಯಾಪ್ತಿಗೆ ನಾಲ್ಕು ಅರ್ಜಿಗಳು, ಕೃಷಿ ಇಲಾಖೆಗೆ ಒಂದು, ಹೇಮಾವತಿ ಇಲಾಖೆಗೆ ಸಂಬಂಧಿಸಿದ ಒಂದು ಅರ್ಜಿ ಸಲ್ಲಿಕೆಯಾಗಿದೆ. ಈಗಾಗಲೇ ಅಧಿಕಾರಿಗಳಿಗೆ ತಮ್ಮ ಇಲಾಖೆಗಳಿಗೆ ಬಂದಿರುವ ಅರ್ಜಿಗಳನ್ನು ರವಾನಿಸಲಾಗಿದೆ. ವಿಳಂಬ ಮಾಡದೆ ಸಂಬಂಧಪಟ್ಟ ಅರ್ಜಿದಾರರಿಗೆ ಕೆಲಸ ಮಾಡಿಕೊಡುವಂತೆ ತಿಳಿಸಿದ್ದೇನೆ ಎಂದು ತಹಸೀಲ್ದಾರ್ ರೇಣುಕುಮಾರ್ ಮಾಹಿತಿ ನೀಡಿದರು.
ಪಟ್ಟಣದ 17ನೇ ವಾರ್ಡ್‌ನ ಹೌಸಿಂಗ್ ಬೋರ್ಡ್ ನಿವಾಸಿ ಎಚ್.ಎನ್.ಗೌಡ ಮಾತನಾಡಿ, ನಾನು ಮಾಹಿತಿ ಹಕ್ಕು ಕಾಯ್ದೆ 2005ರ ಕಲಂ ಸಿ ( 1)ರ ಅಡಿಯಲ್ಲಿ ಮಾಹಿತಿ ಕೋರಿ ಉಪವಿಭಾಧಿಕಾರಿಗಗೆ ಅರ್ಜಿ ಸಲ್ಲಿಸಿದ್ದೆ. ಅರ್ಜಿಯನ್ನು ಉಪ ವಿಭಾಗಾಧಿಕಾರಿ ಕಚೇರಿಯಿಂದ ಹೊಳೆನರಸೀಪುರ ತಾಲೂಕು ಕಚೇರಿಗೆ 2025ರ ಜನವರಿ 1ರಂದು ಅರ್ಜಿ ವರ್ಗವಾಗಿದೆ. ಆದರೆ ಇದುವರೆಗೂ ನನಗೆ ಯಾವುದೇ ಮಾಹಿತಿ ದೊರಕಿಲ್ಲ. ಕೂಡಲೇ ತಮ್ಮ ಇಲಾಖೆಯಿಂದ ಮಾಹಿತಿ ಕೊಡಬೇಕೆಂದು ಕೋರಿದರು.
ಪಟ್ಟಣದ ಅಂಬೇಡ್ಕರ್ ನಗರದ ನಿವಾಸಿ ಕುಮಾರ್ ಮಾತನಾಡಿ, ನಾನು ಕಸಬಾ ಹೋಬಳಿ ಮಲ್ಲೇನಹಳ್ಳಿ ಗ್ರಾಮದ ಸರ್ವೇ ನಂಬರ್ 31ಪಿ ಮತ್ತು 30ಪಿರಲ್ಲಿ ಸುಮಾರು 50 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿದ್ದೇನೆ. ನಾನು ಇಲ್ಲದ ಸಮಯದಲ್ಲಿ ಮುರಳಿ ಹಾಗೂ ಪುನೀತ ಎಂಬುವವರು ನನ್ನ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಜೆಸಿಬಿ ಮೂಲಕ ಜಮೀನನ್ನು ಸಮತಟ್ಟು ಮಾಡಲು ಹೋಗಿ ಮಣ್ಣು ತೆಗೆಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಆದರೆ, ಪೊಲೀಸರು ತಪ್ಪಿತಸ್ಥರ ವಿರುದ್ಧ ಇದುವರೆಗೂ ಯಾವುದೇ ಕ್ರಮ ವಹಿಸಿಲ್ಲ. ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿದರು.
ದಕ್ಷಿಣ ನಾಲೆ ಸರ್ವೇ ನಂ.178ರಲ್ಲಿ ನನ್ನ ಜಮೀನಿದ್ದು, ಖಾತೆ ಮಾಡಿ ಕೊಡುವಂತೆ ಎಸಿ ಮತ್ತು ಡಿಸಿ ಅವರಿಗೆ ದೂರು ನೀಡಿದ್ದೇನೆ. ಅವರು ತಹಸೀಲ್ದಾಗೆ ಮೌಖಿಕ ಆದೇಶ ಕೊಟ್ಟಿದ್ದರು ಕೂಡ ನನಗೆ ತಾಲೂಕು ಕಚೇರಿಯಿಂದ ಇದುವರೆಗೂ ಖಾತೆ ಮಾಡಿ ಕೊಟ್ಟಿಲ್ಲ ಎಂದು ಎಚ್.ಸಿ.ವಿಶ್ವನಾಥ್ ದೂರಿದರು.
ಹಳ್ಳಿ ಮೈಸೂರು ಹೋಬಳಿ ಮದ್ದೂರು ಹೊಸಳ್ಳಿ ಗ್ರಾಮಕ್ಕೆ ಸೇರಿದ ಸರ್ವೇ ನಂ.79/2 ರಲ್ಲಿ ಒಂದು ಎಕರೆ 20 ಗುಂಟೆ ಜಮೀನಿಗೆ ಸಂಬಂಧಿಸಿದಂತೆ 2023ರ ಜುಲೈ 22ರಲ್ಲಿ ಪೌತಿ ಖಾತೆಗೆ ಅರ್ಜಿ ಸಲ್ಲಿಸಿದ್ದೆ. ಪೌತಿಖಾತೆ ಮಾಡಿಕೊಡದೆ ಸಂಬಂಧಪಟ್ಟ ಅಧಿಕಾರಿಗಳು ವಜಾ ಮಾಡಿ ಆದೇಶ ಮಾಡಿದ್ದಾರೆ. ಪೌತಿ ಖಾತೆ ಮಾಡಿಕೊಡದೆ ವಜಾ ಮಾಡಿರುವುದಕ್ಕೆ ಕಾರಣ ಕೊಡಬೇಕೆಂದು ಯು.ಎಂ.ರಾಜು ಅರ್ಜಿ ಸಲ್ಲಿಸಿದರು.
ತಾಲೂಕಿನ ಹಳೆಕೋಟೆ ಹೋಬಳಿ ದೊಡ್ಡ ಕುಂಚೆ ಗ್ರಾಮದ ನಿವಾಸಿ ಪಾರ್ವತಮ್ಮ ಮಾತನಾಡಿ, ನನಗೆ ಸರ್ಕಾರದ ವತಿಯಿಂದ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಹೇಮಾವತಿ ಜಲ ಸಂಪನ್ಮೂಲ ಇಲಾಖೆಯಿಂದ 2018ರಲ್ಲಿ ಬೋರ್‌ವೆಲ್ ಕೊರೆಸಿಕೊಟ್ಟಿದ್ದರು. ಆದರೆ, ಯಾವುದೇ ಸಲಕರಣೆಗಳನ್ನು ಕೊಟ್ಟಿಲ್ಲ. ವಿದ್ಯುತ್ ಸಂಪರ್ಕ ಕೊಟ್ಟಿಲ್ಲ, ಮೋಟಾರ್ ಅಳವಡಿಸಿಕೊಟ್ಟಿಲ್ಲ. ನನಗೆ ವ್ಯವಸಾಯ ಮಾಡಲು ತುಂಬಾ ತೊಂದರೆಯಾಗಿದೆ. ಕೂಡಲೇ ಮೋಟಾರ್ ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಬೇಕೆಂದು ಕೋರಿದರು.
ತಹಸೀಲ್ದಾರ್ ವೈ.ಎಂ.ರೇಣು ಕುಮಾರ್ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ ರೈತರಿಗೆ ಅನ್ಯಾಯ ಮಾಡುವುದನ್ನು ಸಹಿಸುವುದಿಲ್ಲ. ಕೂಡಲೇ ಸಮಸ್ಯೆಯನ್ನು ತುರ್ತಾಗಿ ಬಗೆಹರಿಸಿ ಕೊಡಬೇಕೆಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜ್, ಪಶು ವೈದ್ಯಾಧಿಕಾರಿ ತಿಪ್ಪೇಸ್ವಾಮಿ, ಸಹಾಯಕ ಕೃಷಿ ನಿರ್ದೇಶಕಿ ಸಪ್ನಾ, ಸಿಪಿಐ ಸಂತೋಷ್, ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.