ಹೊಳೆನರಸೀಪುರ ತಾಲೂಕು ಕಚೇರಿಯಲ್ಲಿ ಶಾಸಕ ಎಚ್.ಡಿ.ರೇವಣ್ಣ ಟಾಸ್ಕ್‌ಫೋರ್ಸ್ ಸಭೆ ನಡೆಸಿದರು. ತಹಸೀಲ್ದಾರ್ ವೈ.ಎಂ.ರೇಣುಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮುನಿರಾಜ್, ಪುರಸಭಾ ಮುಖ್ಯ ಅಧಿಕಾರಿ ಶಿವಶಂಕರ್ ಇದ್ದರು.  
ಹಾಸನ

ನೀರು ನಿರ್ವಹಣೆಗಾಗಿ ಗ್ರಾಪಂಗಳಿಗೆ ವಿಶೇಷ ಅನುದಾನ ನೀಡಿ

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಕ್ಕೆ ಶಾಸಕ ಎಚ್.ಡಿ.ರೇವಣ್ಣ ಒತ್ತಾಯ
ಹೊಳೆನರಸೀಪುರ: ಬೇಸಿಗೆ ಅಧಿಕಾವಾಗಿದ್ದು, ಗ್ರಾಮಗಳ ಕುಡಿಯುವ ನೀರಿನ ನಿರ್ವಹಣೆ ಮಾಡಲು ಎಲ್ಲ ಗ್ರಾಮ ಪಂಚಾಯಿತಿಗಳಿಗೆ ವಿಶೇಷ ಅನುದಾನ ನೀಡಬೇಕು ಎಂದು ಶಾಸಕ ಎಚ್ ಡಿ ರೇವಣ್ಣ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕುಡಿಯುವ ನೀರಿನ ಸಮಸ್ಯೆ ಕುರಿತು ಟಾಸ್ಕ್‌ಫೋರ್ಸ್ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ತಾಲೂಕಿನಲ್ಲಿ 26 ಗ್ರಾಮ ಪಂಚಾಯಿತಿಗಳಿದ್ದು ಯಾವುದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಕುಡಿಯುವ ನೀರು, ಸಮಸ್ಯೆಯಾಗದಂತೆ ತೀವ್ರ ನಿಗಾವಹಿಸಬೇಕು. ಬಿಸಿಲ ಬೇಗೆಯಿಂದ ತತ್ತರಿಸಿ ಹೋಗುತ್ತಿರುವ ಜನರಿಗೆ ದನ ಕರುಗಳಿಗೆ ಕುಡಿಯುವ ನೀರಿನ ಹಾಹಾಕಾರ ಆಗಬಾರದು. ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ಕೂಡಲೇ ಭೇಟಿ ನೀಡಿ ವರದಿಯನ್ನು ಒಪ್ಪಿಸಿ. ಗ್ರಾಮಗಳಲ್ಲಿ ಟ್ಯಾಂಕ್ ಗಳನ್ನು ಬ್ಲೀಚಿಂಗ್ ಪೌಡರ್ ಹಾಕಿ ಸ್ವಚ್ಛತೆ ಮಾಡಿ, ನೀರನ್ನು ಶುದ್ಧೀಕರಣ ಮಾಡಿ ಜನರಿಗೆ ಅನುಕೂಲ ಮಾಡಿ. ಸಮರ್ಪಕವಾಗಿ ನೀರು ಇಲ್ಲದ ಕಡೆ ಟ್ಯಾಂಕರ್ ಮೂಲಕ ನೀರನ್ನು ಒದಗಿಸಿಕೊಡಬೇಕು. ಯಾವ ಯಾವ ಗ್ರಾಮಗಳಿಗೆ ಕುಡಿಯುವ ನೀರಿಗಾಗಿ ಸಮಸ್ಯೆ ಇದೆಯೋ ಅಂತಹ ಕಡೆ ಬೋರ್ವೆಲ್ ಕೊರೆಸುವ ಕೆಲಸವಾಗಬೇಕು. ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ನಿರ್ಲಕ್ಷೃ ತಾಳಿದರೆ ಮುಲಾಜಿಲ್ಲದೆ ಕ್ರಮ ಜರುಗಿಸಬೇಕಾಗುತ್ತದೆ ಎಂದರು.
ಬಿಸಿಲಿನ ಝಳಕ್ಕೆ ಹಲವೆಡೆ ಪೈಪ್‌ಗಳು ಹಾಳಾಗಿ ಹೋಗಿರುತ್ತವೆ. ಟ್ಯಾಂಕ್‌ಗಳು ಶಿಥಿಲಗೊಂಡಿರುತ್ತವೆ. ಬೋರ್ವೆಲ್ ಕೊರೆಸಬೇಕಾಗುತ್ತದೆ. ಆದ್ದರಿಂದ ಸರ್ಕಾರ ಪ್ರತಿ ಗ್ರಾಮ ಪಂಚಾಯಿತಿಗೆ 15 ಲಕ್ಷದಷ್ಟು ಹಣವನ್ನು ಬಿಡುಗಡೆ ಮಾಡಬೇಕು. ಕನಿಷ್ಠ ಅಂದರೆ 5 ಕೋಟಿಗೂ ಹೆಚ್ಚು ಹಣದ ಅವಶ್ಯಕತೆ ಇದೆ. ಸರ್ಕಾರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.
ಪಟ್ಟಣದಲ್ಲಿ 90 ಮಳಿಗೆಗಳು ಖಾಲಿ ಉಳಿದಿವೆ. ಹರಾಜು ಮೂಲಕ ಮಳೆಗೆ ಪಡೆದಿರುವ ಬಾಡಿಗೆದಾರರು ಹಣವನ್ನು ಪಾವತಿಸದೆ ಹೆಚ್ಚು ಹಣ ಉಳಿಸಿಕೊಂಡಿದ್ದಾರೆ. ಅಂತಹವರ ಬಳಿ ಪುರಸಭೆ ಅಧಿಕಾರಿಗಳು ವಸೂಲಿ ಮಾಡಬೇಕು. ಬಾಡಿಗೆ ಕಟ್ಟದ ಮಳಿಗೆದಾರರಿಗೆ ಮುಲಾಜಿಲ್ಲದೆ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಂಡು ಬೀಗ ಹಾಕಬೇಕು ಎಂದು ಪುರಸಭೆ ಅಧಿಕಾರಿಗೆ ತಿಳಿಸಿದರು. ಬೀಗ ಹಾಕುವ ಮಳಿಗೆಗಳಿಗೆ ಹೊಸದಾಗಿ ಟೆಂಡರ್ ಕರೆಯಬೇಕು. ಕಾನೂನು ಪ್ರಕಾರ ಕ್ರಮ ಜರುಗಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತಹಸೀಲ್ದಾರ್ ವೈ.ಎಂ.ರೇಣುಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮುನಿರಾಜ್, ಪುರಸಭಾ ಮುಖ್ಯ ಅಧಿಕಾರಿ ಶಿವಶಂಕರ್ ಮತ್ತಿತರರಿದ್ದರು.