ಸಂಸದ ಶ್ರೇಯಸ್ ಎಂ.ಪಟೇಲ್ ಶುಕ್ರವಾರ ಕೇಂದ್ರ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಿ ಹಾಸನ ಜಿಲ್ಲೆಯಲ್ಲಿ ಬಿಳಿ ಸುಳಿ ರೋಗದಿಂದ ತೀವ್ರ ನಷ್ಟ ಅನುಭವಿಸಿರುವ ಮುಸುಕಿನ ಜೋಳ ಬೆಳೆದ ರೈತರಿಗೆ ವಿಶೇಷ ನೆರವು ನೀಡುವಂತೆ ಮನವಿ ಮಾಡಿದರು.
- ಮುಸುಕಿನ ಜೋಳ ಬೆಳೆದ ರೈತರಿಗೆ ವಿಶೇಷ ನೆರವು ನೀಡಿ
- ಕೇಂದ್ರ ಸಚಿವರಿಗೆ ಸಂಸದ ಶ್ರೇಯಸ್ ಎಂ.ಪಟೇಲ್ ಮನವಿ
- ಬಿಳಿ ಸುಳಿ ರೋಗದಿಂದ ತೀವ್ರ ನಷ್ಟ
ಹಾಸನ: ಸಂಸದ ಶ್ರೇಯಸ್ ಎಂ.ಪಟೇಲ್ ಶುಕ್ರವಾರ ಕೇಂದ್ರ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಿ ಹಾಸನ ಜಿಲ್ಲೆಯಲ್ಲಿ ಬಿಳಿ ಸುಳಿ ರೋಗದಿಂದ ತೀವ್ರ ನಷ್ಟ ಅನುಭವಿಸಿರುವ ಮುಸುಕಿನ ಜೋಳ ಬೆಳೆದ ರೈತರಿಗೆ ವಿಶೇಷ ನೆರವು ನೀಡುವಂತೆ ಮನವಿ ಮಾಡಿದರು.
ಹಾಗೆಯೇ ಜಿಲ್ಲೆಯ ರೈತರಿಗೆ ಆರ್ಥಿಕವಾಗಿ ಹೊರೆಯಾಗಿರುವ ಎನ್.ಪಿ.ಕೆ ಹಾಗೂ ಕಾಂಪ್ಲೆಕ್ಸ್ ರಸಗೊಬ್ಬರ ಬೆಲೆಯನ್ನು ಇಳಿಕೆ ಮಾಡುವಂತೆ ಇದೇ ವೇಳೆ ಸಚಿವರಲ್ಲಿ ವಿನಂತಿಸಿದರು.
ಜಿಲ್ಲೆಯ ವಿವಿಧೆಡೆ ಮುಸುಕಿನ ಜೋಳಕ್ಕೆ ವ್ಯಾಪಕವಾಗಿ ಬಿಳಿಸುಳಿ ರೋಗ ಕಾಣಿಸಿಕೊಂಡಿದ್ದರಿಂದ ಬಿತ್ತಿದ ಬೆಳೆ ಹಾಗೆಯೇ ಒಣಗಿ ಹೋಗಿ ಸಾವಿರಾರು ರೈತರು ಭಾರಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಮನವರಿಕೆ ಮಾಡಿದರು.
ಪ್ರಸ್ತುತ ರಾಜ್ಯ ಸರ್ಕಾರದ ಬೀಜ ವಿತರಣಾ ಯೋಜನೆಯಡಿ ಜೋಳದ ಬಿತ್ತನೆ ಬೀಜಗಳಿಗೆ ಪ್ರತಿ ಕೆ.ಜಿ.ಗೆ 20 ರೂ.ಸಹಾಯಧನ ನೀಡಲಾಗುತ್ತಿದೆ. ಆದರೆ, ಬೆಳೆ ನಷ್ಟದಿಂದ ಸಂಕಷ್ಟದಲ್ಲಿರುವ ರೈತರಿಗೆ ಇದು ಸಾಕಾಗುವುದಿಲ್ಲ ಎಂದು ಉಲ್ಲೇಖಿಸಿ, ಹೆಚ್ಚುವರಿ 50 ರೂ. ಸಹಾಯಧನವನ್ನು ವಿಶೇಷ ನೆರವಿನ ರೂಪದಲ್ಲಿ ನೀಡುವಂತೆ ಕೇಂದ್ರ ಸಚಿವರಲ್ಲಿ ಮನವಿ ಮಾಡಿದರು. ಅದೇ ರೀತಿ ಸಸ್ಯ ಸಂರಕ್ಷಣಾ ಯೋಜನೆಯಡಿ ಸಸ್ಯ ಸಂರಕ್ಷಣಾ ರಾಸಾಯನಿಕಗಳಿಗೆ ನೀಡಲಾಗುತ್ತಿರುವ ಶೇ.50 ರಷ್ಟು ಸಹಾಯಧನವನ್ನು ಹೆಚ್ಚಿಸಿ, ರೈತರಿಗೆ ಇನ್ನಷ್ಟು ಆರ್ಥಿಕ ನೆರವು ನೀಡಬೇಕೆಂದು ಕೋರಿದರು.
ಮುಂಗಾರು ಹಂಗಾಮಿನಲ್ಲಿ ಹಾಸನ ಜಿಲ್ಲೆಯ ರೈತರಿಗೆ ಸುಮಾರು 1,64,187 ಮೆಟ್ರಿಕ್ ಟನ್ ರಸಗೊಬ್ಬರದ ಅವಶ್ಯಕತೆ ಇದ್ದು, ಅದರಲ್ಲಿ ಸುಮಾರು 75,137 ಮೆಟ್ರಿಕ್ ಟನ್ ಎನ್‌ಪಿಕೆ ಮತ್ತು ಕಾಂಪ್ಲೆಕ್ಸ್ ರಸಗೊಬ್ಬರವನ್ನು ರೈತರು ಬಳಕೆ ಮಾಡುತ್ತಿದ್ದಾರೆ. ವಿವಿಧ ಕಂಪನಿಗಳ ಎನ್‌ಪಿಕೆ ಹಾಗೂ ಕಾಂಪ್ಲೆಕ್ಸ್ ರಸಗೊಬ್ಬರಗಳ ಬೆಲೆ ಪ್ರತಿ ಚೀಲಕ್ಕೆ 250 ರಿಂದ 300 ರೂ.ವರೆಗೆ ಏರಿಕೆಯಾಗಿದ್ದು, ಇದರಿಂದ ರೈತರ ಬೆಳೆಗಳ ಉತ್ಪಾದನಾ ವೆಚ್ಚ ಹೆಚ್ಚಾಗಿ ಆರ್ಥಿಕ ಸಂಕಷ್ಟ ಉಂಟಾಗಿದೆ ಎಂದು ಸಚಿವರ ಗಮನಕ್ಕೆ ತಂದರು.
ಎನ್‌ಪಿಕೆ ಮತ್ತು ಕಾಂಪ್ಲೆಕ್ಸ್ ರಸಗೊಬ್ಬರಗಳ ಬೆಲೆ ಕಡಿತಗೊಳಿಸುವ ಮೂಲಕ ರೈತರಿಗೆ ಅಗತ್ಯ ನೆರವು ನೀಡಬೇಕು ಎಂದು ಕೇಂದ್ರ ಸಚಿವರಿಗೆ ಸಂಸದರು ಮನವಿ ಮಾಡಿದರು. ಹಾಗೆಯೇ ಜಿಲ್ಲೆಯ ಗ್ರಾಮ ಪಂಚಾಯಿತಿಗಳಿಗೆ 15ನೇ ಹಣಕಾಸು ಆಯೋಗದಿಂದ ಬಾಕಿ ಇರುವ 94.98 ಕೋಟಿ ರೂ. ಅನುದಾನವನ್ನು ತುರ್ತಾಗಿ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
2025-26ನೇ ಸಾಲಿನ 15ನೇ ಹಣಕಾಸು ಆಯೋಗದಿಂದ 94.98 ಕೋಟಿ ಅನುದಾನ ಬಿಡುಗಡೆ ಆಗದೇ ಇರುವುದರಿಂದ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರು, ರಸ್ತೆ, ಸ್ವಚ್ಛತೆ, ಬೀದಿ ದೀಪ ಸೇರಿದಂತೆ ದಿನ ನಿತ್ಯದ ಮೂಲ ಸೌಕರ್ಯಗಳ ನಿರ್ವಹಣೆ ಕಷ್ಟವಾಗಿದೆ. ಸ್ಥಳೀಯ ಸಂಸ್ಥೆಗಳು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕಾರಣ ಕೂಡಲೇ ಅನುದಾನ ಬಿಡುಗಡೆ ಮಾಡಲು ಸಂಬಂಧಪಟ್ಟ ಇಲಾಖೆಗಳಿಗೆ ಶಿಫಾರಸು ಮಾಡುವಂತೆ ಕೋರಿಕೊಂಡರು.