ನಗರದ ಹೇಮಾವತಿ ಪ್ರತಿಮೆ ಬಳಿ ವಿದ್ಯುತ್ ಕೆಲಸಗಾರರು ವಿಶೇಷ ಕಾರ್ಯಕ್ರಮ ಆಯೋಜಿಸಿದ್ದರು. ಕಾರ್ಮಿಕ ನಿರೀಕ್ಷಕ ಆನಂದ್ ರಾಮ್, ಎಚ್.ಟಿ. ರಾಮೇಗೌಡ, ಆನಂದ್, ಕಾರ್ಯದರ್ಶಿ ಬಾಬು, ಖಜಾಂಚಿ ಹುಸ್ಮಾ ಇದ್ದರು.
- ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡಿ
- ಕಾರ್ಮಿಕ ಮುಖಂಡ ಎಚ್.ಟಿ. ರಾಮೇಗೌಡ ಒತ್ತಾಯ
ಹಾಸನ: ವಿದ್ಯುತ್ ಕಾರ್ಮಿಕ ದಿನಾಚರಣೆ ಅಂಗವಾಗಿ ನಗರದ ಹೇಮಾವತಿ ಪ್ರತಿಮೆ ಬಳಿ ವಿದ್ಯುತ್ ಕೆಲಸಗಾರರು ಬುಧವಾರ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದರು.
ಕಾರ್ಮಿಕ ನಿರೀಕ್ಷಕ ಆನಂದ್ ರಾಮ್ ಕೇಕ್ ಕತ್ತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕಾರ್ಮಿಕರಿಗೆ ಶುಭ ಕೋರಿದರು. ಬಳಿಕ ಬೈಕ್ ಜಾಥದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಕಾರ್ಮಿಕ ನಿರೀಕ್ಷಕ ಆನಂದ್ ರಾಮ್ ಮಾತನಾಡಿ, ಅಸಂಘಟಿತ ಕಾರ್ಮಿಕರು ಬೋರ್ಡ್‌ನಲ್ಲಿ ಕಾರ್ಡ್ ಮಾಡಿಸಿದರೆ ಇಎಸ್‌ಐ, ಪಿಎಫ್ ಸೇರಿದಂತೆ ಸರ್ಕಾರದ ಎಲ್ಲ ಸೌಲಭ್ಯಗಳು ದೊರೆಯಲಿವೆ ಎಂದರು.
ಕಾರ್ಮಿಕ ಮುಖಂಡ ಎಚ್.ಟಿ. ರಾಮೇಗೌಡ ಮಾತನಾಡಿ, ಸಾವಿರಾರು ಕಾರ್ಮಿಕರು ಜೀವದ ಹಂಗು ತೊರೆದು ಮನೆ, ಕೈಗಾರಿಕೆ, ಅಣೆಕಟ್ಟುಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೂ ಸಾಮಾಜಿಕ ಭದ್ರತೆ ಇಲ್ಲದೆ ಸಂಕಷ್ಟದಲ್ಲಿದ್ದಾರೆ.
ಅಪಘಾತದಲ್ಲಿ ಮೃತಪಟ್ಟರೆ ಕುಟುಂಬ ಬೀದಿಗೆ ಬೀಳುತ್ತದೆ. ಹೀಗಾಗಿ ಸೌಲಭ್ಯ ಕಡ್ಡಾಯಗೊಳಿಸಿ.ಪೂರ್ಣ ವೈದ್ಯಕೀಯ ವೆಚ್ಚ ಭರಿಸಬೇಕು. ಇಎಸ್‌ಐ ಯೋಜನೆ ಎಲ್ಲರಿಗೂ ಜಾರಿಯಾಗಬೇಕು. ಪ್ರಸ್ತುತ 8 ಲಕ್ಷ ರೂ. ಕವರ್ ಇದ್ದು, ಅದನ್ನು 10 ಲಕ್ಷ ರೂ.ಗೆ ಹೆಚ್ಚಿಸಬೇಕು. ಆಸ್ಪತ್ರೆ ವೆಚ್ಚಕ್ಕೂ ಕನಿಷ್ಠ 10 ಲಕ್ಷ ರೂ. ನೀಡಬೇಕು ಎಂದು ಒತ್ತಾಯಿಸಿದರು.
ಕಟ್ಟಡ ಪರವಾನಗಿ ವಿಳಂಬದಿಂದ ಕೆಲಸ ಇಲ್ಲದೆ ಕಾರ್ಮಿಕರು ಪರದಾಡುತ್ತಿದ್ದಾರೆ. ಪರವಾನಗಿ ಪ್ರಕ್ರಿಯೆ ಸರಳಗೊಳಿಸಿ ನಿರಂತರ ಉದ್ಯೋಗ ಕಲ್ಪಿಸಬೇಕು. ಸಹಜ ಮರಣ ಪರಿಹಾರದ ಮೊತ್ತವನ್ನೂ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.
ಅಧ್ಯಕ್ಷ ಆನಂದ್, ಕಾರ್ಯದರ್ಶಿ ಬಾಬು, ಖಜಾಂಚಿ ಹುಸ್ಮಾ ಇದ್ದರು.