ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಆಶ್ರಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಚಾಲನೆ ನೀಡಲಾಯಿತು. ಸಿಇಒ ಶುಭಂ ಶುಕ್ಲ, ಅಪರ ಜಿಲ್ಲಾಧಿಕಾರಿ ಜಗದೀಶ್ ಗಂಗಣ್ಣನವರ್, ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಸೌರಭ್‌ಕುಮಾರ್, ಚಂದ್ರಶೇಖರ್, ತಹಸೀಲ್ದಾರ್ ಗೀತಾ, ಮಹಾನಗರ ಪಾಲಿಕೆಯ ಆಯುಕ್ತರಾದ ಕೃಷ್ಣಮೂರ್ತಿ ಇತರರಿದ್ದರು.
- ಗೊಂದಲವಿಲ್ಲದಂತೆ ಜನರಿಗೆ ಎಸ್‌ಐಆರ್ ಮಾಹಿತಿ ನೀಡಿ
- ಇಂದಿನಿಂದ ವಿಶೇಷ ಪರಿಷ್ಕರಣೆ
- ಜಿಪಂ ಸಿಇಒ ಶುಭಂ ಶುಕ್ಲ ಸಲಹೆ
ಹಾಸನ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದೇಶದ 18 ರಾಜ್ಯಗಳಲ್ಲಿ ಜೂ.30 ರಿಂದ ಜುಲೈ 29ರವರೆಗೆ ಮತದಾರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ನಾಗರಿಕರಿಗೆ ಎಸ್‌ಐಆರ್ ಬಗ್ಗೆ ಸೂಕ್ತ ಮಾಹಿತಿಯನ್ನು ನೀಡುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶುಭಂ ಶುಕ್ಲ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಆಶ್ರಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಮಟ್ಟದಲ್ಲಿಯೂ ಜಾಗೃತಿ ಮೂಡಿಸಲು ಸ್ವಯಂ ಸೇವಕರನ್ನು ನೇಮಕ ಮಾಡಲಾಗಿದ್ದು ಎಸ್‌ಐಆರ್ ಬಗ್ಗೆ ಗೊಂದಲಗಳು ಉಂಟಾದಲ್ಲಿ ಸಹಾಯವಾಣಿ ಸಂಖ್ಯೆ 1950 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರಿಗೆ ಸಹಾಯಕವಾಗುವಂತೆ ಚುನಾವಣಾ ಆಯೋಗದ ಇಸಿಐ ವೆಬ್‌ಸೈಟ್ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿಯೂ ಸಹ ಎಸ್‌ಐಆರ್ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಜಗದೀಶ್ ಗಂಗಣ್ಣನವರ್ ಮಾತನಾಡಿ, ಮತದಾರ ಪಟ್ಟಿಯಲ್ಲಿ ಅನರ್ಹ ಮತದಾರರನ್ನು ತೆಗೆದು ಹಾಕಿ ಅರ್ಹ ಮತದಾರರ ಹೆಸರನ್ನು ಕಡ್ಡಾಯವಾಗಿ ಮತದಾರರ ಪಟ್ಟಿಗೆ ಸೇರಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ದೇಶಾದ್ಯಂತ ಜೂ.30 ರಿಂದ ಜು.29ರವರೆಗೆ ಎಸ್‌ಐಆರ್ ನಡೆಯುತ್ತಿದ್ದು, ಜಿಲ್ಲೆಯಲ್ಲಿ 1968 ಬಿಎಲ್‌ಒಗಳನ್ನು ನೇಮಕ ಮಾಡಲಾಗಿದೆ. ಪ್ರತಿಯೊಬ್ಬ ಮತದಾರರ ಮನೆಗಳಿಗೆ ಭೇಟಿ ನೀಡಿ ನಿಗದಿತ ನಮೂನೆಯನ್ನು ಒಬ್ಬ ಮತದಾರರಿಗೆ ದ್ವಿಪ್ರತಿ ನಮೂನೆಯನ್ನು ನೀಡಲಾಗುತ್ತಾದೆ. ಭರ್ತಿ ಮಾಡಿದ ನಮೂನೆಯ ಒಂದು ಪ್ರತಿಯನ್ನು ಮತದಾರರಿಗೆ ನೀಡಬೇಕು. ಇನ್ನೊಂದು ನಮೂನೆಯನ್ನು ಬಿಎಲ್‌ಒಗಳಿಗೆ ನೀಡಬೇಕು. ಮಾಹಿತಿಯನ್ನು ಪರೀಶಿಲಿಸಿದ ನಿಗದಿತ ನಮೂನೆಯು ಮತದಾರ ಪಟ್ಟಿಗೆ ಸೇರ್ಪಡೆಯಾಗಲಿದೆ. ಯಾವ ಮತದಾರರ ಹೆಸರು ಕರಡು ಮತದಾರರ ಪಟ್ಟಿಗೆ ಸೇರ್ಪಡೆಯಾಗದೆ ಇರುವ ಮತದಾರರಿಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಒಂದು ತಿಂಗಳು ಕಾಲಾವಕಾಶವನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಸೌರಭ್ ಕುಮಾರ್ ಮಾತನಾಡಿ, ಮತದಾನ ಅಧಿಕಾರ ಒಂದು ಸಾಂವಿಧಾನಿಕ ಅಧಿಕಾರವಾಗಿದ್ದು ಅರ್ಹ ಮತದಾರರನ್ನು ಮತದಾನ ಪಟ್ಟಿಗೆ ಸೇರ್ಪಡೆ ಮಾಡಿ ಅನರ್ಹ ಮತದಾರರನ್ನು ಮತದಾನ ಪಟ್ಟಿಯಿಂದ ಕೈ ಬಿಡುವ ಮೂಲಕ ಉತ್ತಮ ಮತದಾರ ಪಟ್ಟಿಯನ್ನು ರಚನೆ ಮಾಡಬಹುದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್, ತಹಸೀಲ್ದಾರ್ ಗೀತಾ, ಮಹಾನಗರ ಪಾಲಿಕೆಯ ಆಯುಕ್ತರಾದ ಕೃಷ್ಣಮೂರ್ತಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.