ಹಾಸನ ಜಿಲ್ಲೆ ಕಾರೆಕೆರೆ ಕೃಷಿ ಮಹಾವಿದ್ಯಾಲಯ ಮತ್ತು ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ(ಯುಎಎಸ್) ವ್ಯಾಪ್ತಿಯಲ್ಲಿ ಹೆಚ್ಚುವರಿ ಹಾಸ್ಟೆಲ್ ನಿರ್ಮಾಣ ಮತ್ತು ಬೀಜ ಆರೋಗ್ಯ ಪರೀಕ್ಷಾ ಪ್ರಯೋಗಾಲಯ ನಿರ್ಮಾಣಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವಂತೆ ದೆಹಲಿಯಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮನವಿ ಸಲ್ಲಿಸಿದರು. ಎಚ್.ಡಿ.ರೇವಣ್ಣ ಇದ್ದರು.
- ಕಾರೆಕೆರೆ ಕೃಷಿ ಮಹಾವಿದ್ಯಾಲಯಕ್ಕೆ ಅನುದಾನ ಕೊಡಿ
- ಕೇಂದ್ರ ಕೃಷಿ ಸಚಿವರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮನವಿ
- ಯುಎಎಸ್‌ಗೂ ಹಣ ನೀಡುವಂತೆ ಬೇಡಿಕೆ
ಹಾಸನ: ಹಾಸನ ಜಿಲ್ಲೆ ಕಾರೆಕೆರೆ ಕೃಷಿ ಮಹಾವಿದ್ಯಾಲಯ ಮತ್ತು ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ(ಯುಎಎಸ್) ವ್ಯಾಪ್ತಿಯಲ್ಲಿ ಹೆಚ್ಚುವರಿ ಹಾಸ್ಟೆಲ್ ನಿರ್ಮಾಣ ಮತ್ತು ಬೀಜ ಆರೋಗ್ಯ ಪರೀಕ್ಷಾ ಪ್ರಯೋಗಾಲಯ ನಿರ್ಮಾಣಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವಂತೆ ದೆಹಲಿಯಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಗುರುವಾರ ಮನವಿ ಸಲ್ಲಿಸಿದರು.
ಬೆಂಗಳೂರು ಮತ್ತು ಕಾರೆಕೆರೆ ಕೃಷಿ ಕಾಲೇಜುಗಳು, ಕೃಷಿ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆಗೆ ಮೀಸಲಾಗಿರುವ ಪ್ರಮುಖ ಸಂಸ್ಥೆಗಳಾಗಿವೆ. ಕಳೆದ ಹಲವು ದಶಕಗಳಿಂದ ಎರಡೂ ಸಂಸ್ಥೆಗಳು ಕೃಷಿ ಅಭಿವೃದ್ಧಿಯಲ್ಲಿ ಗಮನಾರ್ಹ ಕೊಡುಗೆ ನೀಡಿವೆ. ಬೆಂಗಳೂರು ವಿವಿ ಮಳೆಯಾಶ್ರಿತ ಹವಾಮಾನಕ್ಕೆ ಸೂಕ್ತವಾದ ಹಾಗೂ ಹೆಚ್ಚಿನ ಇಳುವರಿ ನೀಡುವ ಬೆಳೆಗಳನ್ನು ಅಭಿವೃದ್ಧಿಪಡಿಸಿದೆ. ಜತೆಗೆ ನೀರಾವರಿ, ಪರಿಸರ ವ್ಯವಸ್ಥೆಗಳು ಮತ್ತು ಹಲವಾರು ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿ ಗಳಿಸಿದೆ. ಈ ಸಂಸ್ಥೆಗಳು 3,499 ಪದವಿ ಪೂರ್ವ ವಿದ್ಯಾರ್ಥಿಗಳು, 746 ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು 279 ಡಾಕ್ಟರೇಟ್ ಪಡೆದವರು ಸೇರಿ ಒಟ್ಟು 4,524 ವಿದ್ಯಾರ್ಥಿಗಳ ಸಾಮರ್ಥ್ಯ ಹೊಂದಿವೆ ಎಂದರು.
ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಹೆಚ್ಚಳ ಆಗುತ್ತಿದ್ದು, ಪ್ರಸ್ತುತ ಹಾಸ್ಟೆಲ್ ಮೂಲ ಸೌಕರ್ಯ ಅಗತ್ಯವಾಗಿದೆ. ಹಾಸ್ಟೆಲ್ ಸೌಕರ್ಯ ಇಲ್ಲದೆ ಅನೇಕ ವಿದ್ಯಾರ್ಥಿಗಳು ಅಲೆದಾಡುವಂತಾಗಿದೆ. ಕ್ಯಾಂಪಸ್‌ನ ಹೊರಗಿನ ವಸತಿ, ಸಾಮಾನ್ಯವಾಗಿ ದುಬಾರಿ ಮತ್ತು ಅನನುಕೂಲವಾಗಿದೆ. ವಿದ್ಯಾರ್ಥಿಗಳ ಸುರಕ್ಷತೆ ಖಚಿತಪಡಿಸಿಕೊಳ್ಳಲು ಸಾಕಷ್ಟು ಹಾಸ್ಟೆಲ್ ಸೌಲಭ್ಯಗಳು ಅಗತ್ಯವಿದೆ. ಇದರಿಂದ ಅನುಕೂಲಕರ ಶೈಕ್ಷಣಿಕ ವಾತಾವರಣ ಸಿಗಲಿದೆ. ವರ್ಧಿತ ವಸತಿ ಮೂಲ ಸೌಕರ್ಯ, ವಿಶೇಷವಾಗಿ ಗ್ರಾಮೀಣ ಮತ್ತು ಆರ್ಥಿಕವಾಗಿ ದುರ್ಬಲ ವಿದ್ಯಾರ್ಥಿಗಳಿಗೆ ಪ್ರಯೋಜನ ನೀಡುತ್ತದೆ. ಹಾಗೆಯೇ ಗುಣಮಟ್ಟದ ಬೀಜವು ಸುಸ್ಥಿರ ಕೃಷಿ ಉತ್ಪಾದನೆಯ ಅಡಿಪಾಯವಾಗಿದೆ. ಬೀಜದಿಂದ ರೋಗ ಹರಡುವುದನ್ನು ತಡೆಯಲು ವೈಜ್ಞಾನಿಕ ಪರೀಕ್ಷೆ ಮೂಲಕ ಬೀಜದ ಆರೋಗ್ಯ ಖಚಿತ ಪಡಿಸಿಕೊಳ್ಳುವುದು ಬಹಳ ಮುಖ್ಯ ಎಂದಿದ್ದಾರೆ.
ರೋಗ ಮತ್ತು ಬೆಳೆ ಉತ್ಪಾದಕತೆ ಉನ್ನತ ಗುಣಮಟ್ಟ ಕಾಪಾಡಿಕೊಳ್ಳಲು ಹವಾಮಾನದ ಪ್ರಸ್ತುತ ಸನ್ನಿವೇಶದಲ್ಲಿ ಕೀಟಗಳು ಮತ್ತು ರೋಗಗಳ ಸಂಭವ ಹೆಚ್ಚುತ್ತಿದೆ ಮತ್ತು ಪ್ರಮಾಣಿಕೃತ ವಿಭಾಗಗಳಿಗೆ ಹೆಚ್ಚುತ್ತಿರುವ ಬೇಡಿಕೆ. ಸುಸಜ್ಜಿತ ಬೀಜ ಆರೋಗ್ಯ ಟೆಸ್ಟಿಂಗ್ ಪ್ರಯೋಗಾಲಯದ ಅವಶ್ಯಕತೆ ಇದೆ. ಪ್ರಸ್ತಾವಿತ ಪ್ರಯೋಗಾಲಯ ಬೀಜದಿಂದ ಹರಡುವ ರೋಗಕಾರಕಗಳನ್ನು ಪತ್ತೆಹಚ್ಚಲು, ಬೀಜದ ಮೌಲ್ಯಮಾಪನ ಸುಲಭಗೊಳಿಸುತ್ತದೆ.
ರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಪ್ರಮಾಣೀಕರಣ ಬೆಂಬಲ ನೀಡುತ್ತದೆ. ಇದು ವಿದ್ಯಾರ್ಥಿಗಳು, ವಿಜ್ಞಾನಿಗಳು ಮತ್ತು ಕ್ಷೇತ್ರ ಕಾರ್ಯನಿರ್ವಾಹಕರಿಗೆ ತರಬೇತಿ ಮತ್ತು ಸಂಶೋಧನಾ ಸೌಲಭ್ಯವಾಗಿ ಕಾರ್ಯನಿರ್ವಹಿಸುತ್ತದೆ. ಇದರಿಂದಾಗಿ ಶೈಕ್ಷಣಿಕ ಮತ್ತು ವಿಸ್ತರಣಾ ಚಟುವಟಿಕೆ ಬಲಪಡಿಸಲು ಪ್ರಯೋಗಾಲಯ ಪ್ರಯೋಜನವಾಗಲಿದೆ. ವಿಶ್ವಾಸಾರ್ಹ ಮತ್ತು ಸಮಯೋಚಿತ ಪರೀಕ್ಷೆ ಒದಗಿಸುವ ಮೂಲಕ ರೈತರು, ಬೀಜ ಉತ್ಪಾದಕರು ಮತ್ತು ಕೃಷಿ-ಉದ್ಯಮಿಗಳು, ಬೀಜದ ಗುಣಮಟ್ಟ, ಈ ಉಪಕ್ರಮ ಬೆಳೆಗಳ ಇಳುವರಿ ಹೆಚ್ಚಿಸಲು, ರಾಷ್ಟ್ರೀಯ ಆಹಾರ ಭದ್ರತಾ ಉದ್ದೇಶ ಸುಧಾರಿಸಲು ಮತ್ತು ಬೆಂಬಲಿಸಲು ಗಣನೀಯವಾಗಿ ಕೊಡುಗೆ ನೀಡುತ್ತದೆ.
ಹಾಗಾಗಿ, ಯುಎಎಸ್ ಮತ್ತು ಹಾಸನಕ್ಕೆ ಹಣ ಮಂಜೂರು ಮಾಡಬೇಕೆಂಬ ನನ್ನ ಮನವಿ ಪರಿಗಣಿಸಿ 6 ದಶಕಗಳಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ನನ್ನ ಸ್ವಂತ ಊರಾದ ಹಾಸನದ ಕಾರೆಕೆರೆಯಲ್ಲಿ ಯುಜಿ ಬಾಲಕರು ಮತ್ತು ಬಾಲಕಿಯರ ಹಾಸ್ಟೆಲ್, ಬೀಜ ಆರೋಗ್ಯ ಪರೀಕ್ಷಾ ಪ್ರಯೋಗಾಲಯ ನಿರ್ಮಾಣಕ್ಕೆ ಹಣ ಬಿಡುಗಡೆಗೆ ಮನವಿ ಮಾಡಿದರು. ಈ ವೇಳೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಇದ್ದರು.
ಬೆಂಗಳೂರು ಕೃಷಿ ವಿವಿಯಲ್ಲಿ ಪಿಜಿ ಮಹಿಳಾ ಹಾಸ್ಟೆಲ್‌ಗೆ 18.75 ಕೋಟಿ ರೂ., ಕಾರೆಕೆರೆಯಲ್ಲಿ ಬೀಜ ಆರೋಗ್ಯ ಪರೀಕ್ಷಾ ಪ್ರಯೋಗಾಲಯಕ್ಕೆ 10 ಕೋಟಿ ರೂ., ಯುಜಿ ಬಾಯ್ಸ ಮತ್ತು ಹುಡುಗಿಯರ ಹಾಸ್ಟೆಲ್ ನಿರ್ಮಾಣಕ್ಕೆ ತಲಾ 10 ರಂತೆ 20 ಕೋಟಿ ರೂ. ಸೇರಿ ಒಟ್ಟು 48.75 ಕೋಟಿ ರೂ. ಬಿಡುಗಡೆಗೆ ಶಿಫಾರಸು ಮಾಡುವಂತೆ ದೇವೇಗೌಡರು ಮನವಿ ಮಾಡಿದರು.