ತಡೆಗೋಡೆ ಕುಸಿದು ಹಾನಿಗೊಳಗಾದ ಸಕಲೇಶಪುರ ಪಟ್ಟಣದ ಅರೇಹಳ್ಳಿ ಬೀದಿ ಪ್ರದೇಶಕ್ಕೆ ಸಂಸದ ಶ್ರೇಯಸ್ ಪಟೇಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. 
ಹಾಸನ

ತಡೆಗೋಡೆಬಿದ್ದು ಹಾನಿಗೊಳಗಾದವರಿಗೆ ಪರಿಹಾರ ನೀಡಿ

ಸಕಲೇಶಪುರ: ಅತಿವೃಷ್ಟಿಯಿಂದ ಅನಾಹುತಕ್ಕೆ ಒಳಗಾಗುವವರಿಗೆ ತ್ವರಿತವಾಗಿ ಪರಿಹಾರ ನೀಡಲು ತಾಲೂಕು ಆಡಳಿತ ಕ್ರಮ ಕೈಗೊಳ್ಳ ಬೇಕು ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿದರು.
ಪಟ್ಟಣದ ಅರೇಹಳ್ಳಿ ಬೀದಿ ಸಮೀಪ ತಡೆಗೋಡೆ ಕುಸಿದು ಹಾನಿಗೊಂಡಿದ್ದ ಮನೆಗಳನ್ನು ಸೋಮವಾರ ವೀಕ್ಷಿಸಿ ಮಾತನಾಡಿದ ಅವರು, ಮಲೆನಾಡಿನಲ್ಲಿ ಅತಿವೃಷ್ಟಿಯಿಂದ ಹಾನಿ ಸಂಭವಿಸುವುದು ಸಾಮಾನ್ಯವಾಗಿದೆ. ಆದರೆ, ಇಲ್ಲಿ ಸಂಭವಿಸಿರುವ ತಡೆಗೊಡೆ ಕುಸಿತ ಮಾನವ ನಿರ್ಮಿತವಾಗಿದ್ದು, ತಾಲೂಕು ಆಡಳಿತ ಸಮಗ್ರವಾಗಿ ಪರಿಶೀಲನೆ ನಡೆಸಿ ತಪ್ಪಿತಸ್ಥರಿಂದ ಪರಿಹಾರ ಒದಗಿಸಬೇಕು. ಹಾನಿಗೊಳಗಾಗಿರುವ ಕುಟುಂಬಗಳಿಗೆ ಅಗತ್ಯವಿದ್ದರೆ ವಾಸ್ತವ್ಯ ಕಲ್ಪಿಸಬೇಕು. ಇದಲ್ಲದೆ ಮಳೆಗಾಲ ಮುಕ್ತಾಯಗೊಳ್ಳುವವರೆಗೂ ಆಯಾಕಟ್ಟಿನ ಅಧಿಕಾರಿಗಳು ಕೇಂದ್ರ ಸ್ಥಾನಬಿಟ್ಟು ತೆರಳಬಾರದು. ಹಾನಿಗೊಳಗಾದ ಪ್ರದೇಶಗಳನ್ನು ತುರ್ತಾಗಿ ದುರಸ್ತಿಪಡಿಸುವ ಮೂಲಕ ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಈ ವೇಳೆ ಪ್ರಾಧಿಕಾರದ ಅಧ್ಯಕ್ಷ ಸಯ್ಯದ್ ಮುಫೀಜ್, ಉಪವಿಭಾಗಾಧಿಕಾರಿ ಹುಲ್ಲಮನಿ ತಿಮ್ಮಣ್ಣ, ತಹಸೀಲ್ದಾರ್ ಸುಪ್ರೀತಾ, ಇಒ ಗಂಗಾಧರ್ ಇತರರು ಉಪಸ್ಥಿತರಿದ್ದರು.