ಹಾಸನದ ಬಿಜಿಎಸ್ ಶಾಲೆಯಲ್ಲಿ ಪುಟಾಣಿ ಮಕ್ಕಳಿಗಾಗಿ ವಿದ್ಯಾರಂಭ ಅಕ್ಷರಭ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಂಭುನಾಥ ಸ್ವಾಮೀಜಿ ಇತರರಿದ್ದರು. 
ಹಾಸನ

ಮಕ್ಕಳಿಗೆ ಉತ್ತಮ ಶಿಕ್ಷಣದೊಂದಿಗೆ ಸಂಸ್ಕಾರ ನೀಡಿ

ಪ್ರಮುಖ ಮುಖ್ಯಾಂಶಗಳು

  • ಮಕ್ಕಳಿಗೆ ಉತ್ತಮ ಶಿಕ್ಷಣದೊಂದಿಗೆ ಸಂಸ್ಕಾರ ನೀಡಿ
  • ಪಾಲಕರಿಗೆ ಶ್ರೀ ಶಂಭುನಾಥ ಸ್ವಾಮೀಜಿ ಸಲಹೆ

ಹಾಸನ:

ಮಕ್ಕಳ ವ್ಯಕ್ತಿತ್ವ ನಿರ್ಮಾಣದ ಅಡಿಪಾಯ ಬಾಲ್ಯದಲ್ಲಿಯೇ ಆಗುವುದರಿಂದ ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ನೀಡಬೇಕು ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿ ಸಲಹೆ ನೀಡಿದರು.

ನಗರದ ಬಿಜಿಎಸ್ ಶಾಲೆಯಲ್ಲಿ ಮಕ್ಕಳಿಗಾಗಿ ಗುರುವಾರ ಆಯೋಜಿಸಿದ್ದ ವಿದ್ಯಾರಂಭ ಅಕ್ಷರಭ್ಯಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮನೆಯೇ ಮೊದಲ ಪಾಠಶಾಲೆ ಹಾಗೂ ತಾಯಿಯೇ ಮೊದಲ ಗುರು ಎಂಬ ಮಾತಿನ ಮಹತ್ವವನ್ನು ಪಾಲಕರು ಅರಿಯಬೇಕು. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎಂಬ ಗಾದೆಯನ್ನು ಉಲ್ಲೇಖಿಸಿದ ಸ್ವಾಮೀಜಿ, ಬಾಲ್ಯದಲ್ಲಿಯೇ ಮಕ್ಕಳನ್ನು ಶಿಸ್ತು, ಸನ್ನಡತೆ, ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳೊಂದಿಗೆ ಬೆಳೆಸಿದರೆ ಮುಂದಿನ ದಿನಗಳಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ ಎಂದರು.

ಪ್ರತಿಯೊಬ್ಬ ಮಹಿಳೆ ಕುಟುಂಬದ ಜವಾಬ್ದಾರಿಗಳನ್ನು ನಿರ್ವಹಿಸುವುದರ ಜತೆಗೆ ಮಕ್ಕಳಿಗೆ ಸಂಸ್ಕಾರದ ಬೀಜ ಬಿತ್ತುವ ಮೊದಲ ಗುರುವಾಗಬೇಕು. ಮಕ್ಕಳಲ್ಲಿ ಸತ್ಯ, ಪ್ರಾಮಾಣಿಕತೆ, ಹಿರಿಯರ ಬಗ್ಗೆ ಗೌರವ, ಕರುಣೆ ಹಾಗೂ ಸಾಮಾಜಿಕ ಹೊಣೆಗಾರಿಕೆಯಂತಹ ಮೌಲ್ಯಗಳನ್ನು ಬಾಲ್ಯದಿಂದಲೇ ಬೆಳೆಸುವುದು ಪಾಲಕರ ಕರ್ತವ್ಯ ಎಂದರು.
ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭವ ಎಂಬ ಭಾರತೀಯ ಸಂಸ್ಕೃತಿಯ ಶಾಶ್ವತ ಮೌಲ್ಯಗಳನ್ನು ಮಕ್ಕಳ ಜೀವನದಲ್ಲಿ ಅಳವಡಿಸಬೇಕು ಎಂದರು.
ದಾನಗಳಲ್ಲಿ ವಿದ್ಯಾದಾನವೇ ಶ್ರೇಷ್ಠ. ಹೊಲಕ್ಕೆ ಬಿತ್ತಿದ ಬೆಳೆ ಹೇಗೆ ಫಲ ನೀಡುತ್ತದೆಯೋ, ತಲೆಗೆ ಅಚ್ಚಿದ ಅಕ್ಷರ ಜೀವನಪೂರ್ತಿ ಮನುಷ್ಯನಿಗೆ ದಾರಿದೀಪವಾಗಿರುತ್ತದೆ. ಆದ್ದರಿಂದ ಮಕ್ಕಳಿಗೆ ನೀಡುವ ಶಿಕ್ಷಣ ಮತ್ತು ಸಂಸ್ಕಾರವೇ ಅವರ ಭವಿಷ್ಯದ ಅಮೂಲ್ಯ ಸಂಪತ್ತಾಗಿದೆ ಎಂದು ಸ್ವಾಮೀಜಿ ಹೇಳಿದರು.
ನಂತರ ಪುಟಾಣಿ ಮಕ್ಕಳ ಕೈಹಿಡಿದು ಅಕ್ಷರಾಭ್ಯಾಸ ಮಾಡಿಸಿ, ಸರಸ್ವತಿ ದೇವಿಯ ಕೃಪೆಯಿಂದ ಮಕ್ಕಳು ಜ್ಞಾನವಂತರಾಗಿ, ಸಂಸ್ಕಾರವಂತರಾಗಿ, ಸಮಾಜಕ್ಕೆ ಮಾದರಿಯಾಗುವ ವ್ಯಕ್ತಿಗಳಾಗಿ ಬೆಳೆಯಲಿ ಎಂದು ಆಶೀರ್ವದಿಸಿದರು.