ಹಾಸನ ನಗರದ ರಿಂಗ್ ರಸ್ತೆ ಬಳಿಯ ತಮ್ಮ ನಿವಾಸದಲ್ಲೇ ಮೊಬೈಲ್ ಮೂಲಕ ಸ್ವಯಂ ನೋಂದಣಿಯನ್ನು ಶಾಸಕ ಸ್ವರೂಪ್ ಪ್ರಕಾಶ್ ಮಾಡಿ ಜನಗಣತಿಗೆ ಚಾಲನೆ ನೀಡಿದರು. ಪಾಲಿಕೆ ಆಯುಕ್ತ ಕೃಷ್ಣಮೂರ್ತಿ, ಇಂಜಿನಿಯರ್ ಸತ್ಯನಾರಾಯಣ್ ಇತರರು ಇದ್ದರು. 
ಹಾಸನ

ಜನಗಣತಿಯಲ್ಲಿ ನಿಖರವಾದ ಮಾಹಿತಿ ನೀಡಿ

ಪ್ರಮುಖ ಮುಖ್ಯಾಂಶಗಳು

  • ಜನಗಣತಿಯಲ್ಲಿ ನಿಖರವಾದ ಮಾಹಿತಿ ನೀಡಿ
  • ಶಾಸಕ ಸ್ವರೂಪ್ ಪ್ರಕಾಶ್ ಮನವಿ
  • ಮೊಬೈಲ್‌ನಲ್ಲಿ ನೋಂದಣಿ ಮೂಲಕ ಚಾಲನೆ
ಹಾಸನ: ದೇಶದ ಅಭಿವೃದ್ಧಿ ಯೋಜನೆಗಳಿಗೆ ಆಧಾರವಾಗಿರುವ ಜನಗಣತಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಯಾಗಿರುವ ಡಿಜಿಟಲ್ ಜನಗಣತಿಗೆ ಬುಧವಾರ ನಗರದ ರಿಂಗ್ ರಸ್ತೆ ಬಳಿ ಇರುವ ತಮ್ಮ ನಿವಾಸದಲ್ಲೇ ಮೊಬೈಲ್ ಮೂಲಕ ಸ್ವಯಂ ನೋಂದಣಿ ಮಾಡುವ ಮೂಲಕ ಶಾಸಕ ಸ್ವರೂಪ್ ಪ್ರಕಾಶ್ ಮಾಡಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಡಿಜಿಟಲ್ ವಿಧಾನವನ್ನು ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಜನಗಣತಿ ಕಾರ್ಯವನ್ನು ಎರಡು ಹಂತಗಳಲ್ಲಿ ಕೈಗೊಳ್ಳಲಾಗುತ್ತದೆ. ಮೊದಲ ಹಂತದಲ್ಲಿ ಮನೆ ಗಣತಿ ಮತ್ತು ಮನೆಪಟ್ಟಿ ಸಂಗ್ರಹಣೆ ನಡೆಯಲಿದ್ದು, ಎರಡನೇ ಹಂತದಲ್ಲಿ ವೈಯಕ್ತಿಕ ವಿವರಗಳ ಸಂಗ್ರಹಣೆ ನಡೆಯಲಿದೆ. 2011ರ ನಂತರ ನಡೆಯುತ್ತಿರುವ ಈ ಜನಗಣತಿ ಸಂಪೂರ್ಣ ಡಿಜಿಟಲ್ ಮಾದರಿಯಲ್ಲಿ ಜರುಗುತ್ತಿರುವುದು ವಿಶೇಷವಾಗಿದೆ. ಇದು ಮಾಹಿತಿ ಸಂಗ್ರಹಣೆಯಲ್ಲಿ ವೇಗ, ನಿಖರತೆ ಹಾಗೂ ಪಾರದರ್ಶಕತೆ ಹೆಚ್ಚಿಸಲಿದೆ ಎಂದರು.
ತಂತ್ರಜ್ಞಾನ ಬಳಸಿಕೊಂಡು ಮೊಬೈಲ್ ಆಪ್ ಮತ್ತು ಸ್ವಯಂ ಗಣತಿ ಪೋರ್ಟಲ್ ಮೂಲಕ ನಾಗರಿಕರು ತಮ್ಮ ಮಾಹಿತಿಯನ್ನು ಸ್ವತಃ ಆನ್‌ಲೈನ್‌ನಲ್ಲಿ ನೋಂದಾಯಿಸಬಹುದಾಗಿದೆ. ಇದರಿಂದ ಜನರಿಗೆ ಸುಲಭವಾಗುವುದರ ಜತೆಗೆ ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ಶಿಕ್ಷಕರು ಮತ್ತು ಸಿಬ್ಬಂದಿ ಮೇಲಿನ ಹೊರೆ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ವಿವರಿಸಿದರು.
ಮನೆಗಣತಿ ಹಂತದಲ್ಲಿ ಪ್ರತಿಯೊಂದು ಮನೆಯ ಭೌತಿಕ ಸ್ಥಿತಿ, ವಾಸಿಸುವ ಪರಿಸ್ಥಿತಿ, ಮೂಲಸೌಕರ್ಯಗಳು, ಕುಟುಂಬ ಸದಸ್ಯರ ವಿವರಗಳು ಸೇರಿದಂತೆ ಹಲವು ಪ್ರಮುಖ ಮಾಹಿತಿಗಳನ್ನು ದಾಖಲಿಸಲಾಗುತ್ತದೆ. ಈ ಮಾಹಿತಿಗಳು ಭವಿಷ್ಯದ ಸರ್ಕಾರಿ ಯೋಜನೆಗಳು, ಸೌಲಭ್ಯಗಳ ವಿತರಣೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮಾರ್ಗದರ್ಶಿಯಾಗಲಿವೆ ಎಂದು ಹೇಳಿದರು.
ನಗರ ಪ್ರದೇಶಗಳ ಜತೆಗೆ ಗ್ರಾಮೀಣ ಭಾಗಗಳಲ್ಲಿಯೂ ಗಣತಿ ಕಾರ್ಯ ಈಗಾಗಲೇ ಆರಂಭಗೊಂಡಿದ್ದು, ಎಲ್ಲ ವರ್ಗದ ಜನರು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಡಿಜಿಟಲ್ ವಿಧಾನವನ್ನು ಬಳಸಿಕೊಂಡು ಸ್ವಯಂ ನೋಂದಣಿ ಮಾಡಿಕೊಳ್ಳುವುದರಿಂದ ಸಮಯ ಉಳಿಯುವುದರ ಜತೆಗೆ ಪ್ರಕ್ರಿಯೆ ಸುಗಮವಾಗಲಿದೆ ಎಂದರು.
ಏ.15ರ ನಂತರ ಶಿಕ್ಷಕರು ಮನೆಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಣೆ ಕಾರ್ಯ ಕೈಗೊಳ್ಳಲಿದ್ದು, ಒಟ್ಟು 33 ಪ್ರಮುಖ ಅಂಶಗಳ ಮಾಹಿತಿಯನ್ನು ಒದಗಿಸುವ ಮೂಲಕ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಯಾವುದೇ ತಪ್ಪು ಮಾಹಿತಿಯನ್ನು ನೀಡದೇ, ನಿಖರ ಮಾಹಿತಿಯನ್ನು ಒದಗಿಸುವುದು ಎಲ್ಲ ನಾಗರಿಕರ ಜವಾಬ್ದಾರಿ ಎಂದರು.
ನಗರಪಾಲಿಕೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಗಣತಿ ಕಾರ್ಯ ಸಮರ್ಪಕವಾಗಿ ನಡೆಯುತ್ತಿದ್ದು, ಸಂಬಂಧಿತ ಸಿಬ್ಬಂದಿಗೆ ಅಗತ್ಯ ಮಾರ್ಗದರ್ಶನ ನೀಡಲಾಗಿದೆ. ಜನಗಣತಿ ಯಶಸ್ವಿಯಾಗಲು ಸಾರ್ವಜನಿಕರ ಸಕ್ರಿಯ ಸಹಕಾರ ಅತ್ಯಗತ್ಯವಾಗಿದ್ದು, ಪ್ರತಿಯೊಬ್ಬರೂ ಈ ಕಾರ್ಯದಲ್ಲಿ ಭಾಗವಹಿಸಿ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಬೇಕು ಎಂದು ಶಾಸಕ ಸ್ವರೂಪ್ ಪ್ರಕಾಶ್ ಒತ್ತಾಯಿಸಿದರು.
ಈ ವೇಳೆ ಮಹಾನಗರ ಪಾಲಿಕೆ ಆಯುಕ್ತ ಕೃಷ್ಣಮೂರ್ತಿ, ಇಂಜಿನಿಯರ್ ಸತ್ಯನಾರಾಯಣ್ ಇತರರು ಇದ್ದರು.