ಜಿಲ್ಲಾಡಳಿತ ಆದೇಶ ಹಿನ್ನೆಲೆ ಆವರಣದ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. 
ಹಾಸನ

ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆಗೆ ನಿಷೇಧ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆಗೆ ನಿಷೇಧ
  • ಕಚೇರಿಗೆ ಬರುವ ಸಾರ್ವಜನಿಕರಿಗೆ ತೊಂದರೆ
  • ಭದ್ರತೆ ದೃಷ್ಟಿಯಿಂದ ಕ್ರಮ ಜಿಲ್ಲಾಡಳಿತ ಸ್ಪಷ್ಟನೆ
ಹಾಸನ: ಜಿಲ್ಲಾಧಿಕಾರಿಗಳ ಸಭಾ ಸಮುಚ್ಚಯದ ಮುಂಭಾಗದಲ್ಲಿ ಇನ್ನು ಮುಂದೆ ಯಾವುದೇ ಪ್ರತಿಭಟನೆ, ಧರಣಿ ಹಾಗೂ ಅಹೋರಾತ್ರಿ ಹೋರಾಟಗಳಿಗೆ ಅವಕಾಶ ಇರುವುದಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಡಿಸಿ ಆದೇಶದಂತೆ ಶನಿವಾರ ಪೊಲೀಸರು ಧರಣಿ ನಿರತರನ್ನು ಅಂಬೇಡ್ಕರ್ ಪ್ರತಿಮೆ ಹಿಂಭಾಗದ ಸ್ಥಳಕ್ಕೆ ಸ್ಥಳಾಂತರಿಸಿದರು. ಈ ವೇಳೆ ಹೆಚ್ಚಿನ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿತ್ತು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮೊದಲಿನಿಂದಲೂ ವಿವಿಧ ಸಂಘಟನೆಗಳು, ಸಾರ್ವಜನಿಕರು ಹಾಗೂ ರೈತರು ಧರಣಿ, ಪ್ರತಿಭಟನೆ ನಡೆಸಲು ಅವಕಾಶ ಕಲ್ಪಿಸಲಾಗುತ್ತಿತ್ತು. ಈ ಹಿಂದೆಯೂ ಜಿಲ್ಲಾಧಿಕಾರಿಗಳಿಂದ ಕೆಲವೊಮ್ಮೆ ನಿಷೇಧ ಹೇರಲಾಗಿದ್ದರೂ ನಂತರ ಮತ್ತೆ ಅವಕಾಶ ನೀಡಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಭಟನಾಕಾರರು ಅಲ್ಲಿಯೇ ಒಲೆ ಹಚ್ಚಿ ಸೌದೆ ಬಳಸಿ ಅಡುಗೆ ಮಾಡುವ ಪ್ರಕರಣಗಳು ನಡೆಯುತ್ತಿತ್ತು. ಯಾವುದೇ ಸಣ್ಣ ನಿರ್ಲಕ್ಷೃವೂ ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು ಎಂಬ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಇದೇ ಸ್ಥಳವು ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಹಲವು ಸರ್ಕಾರಿ ಕಚೇರಿಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಆಗಿರುವುದರಿಂದ ಸಾರ್ವಜನಿಕರು ತಮ್ಮ ಕಚೇರಿ ಕೆಲಸಗಳಿಗೆ ಆಗಮಿಸುವ ವೇಳೆ ತೊಂದರೆ ಅನುಭವಿಸುತ್ತಿದ್ದರು. ಸರ್ಕಾರಿ ಅರ್ಜಿಗಳ ಸಲ್ಲಿಕೆ, ವಿವಿಧ ದಾಖಲೆಗಳ ಕೆಲಸ, ಸಾರ್ವಜನಿಕರ ಓಡಾಟ ಹಾಗೂ ತುರ್ತು ಆಡಳಿತ ಕಾರ್ಯಗಳಿಗೆ ಅಡಚಣೆ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಭಟನೆಗಳನ್ನು ನಿಗದಿತ ಸ್ಥಳದಲ್ಲಿಯೇ ನಡೆಸುವಂತೆ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ವಿಚಾರ ಗಂಭೀರವಾಗಿ ಚರ್ಚೆಗೆ ಬಂದಿದ್ದು, ಸಾರ್ವಜನಿಕರಿಗೆ ಹಾಗೂ ಆಡಳಿತ ವ್ಯವಸ್ಥೆಗೆ ತೊಂದರೆ ಆಗದಂತೆ ಸೂಕ್ತ ನಿಯಮ ರೂಪಿಸುವ ಕುರಿತು ನಿರ್ಧಾರ ಕೈಗೊಳ್ಳಲಾಯಿತು.
ಪ್ರತಿಭಟನೆಗೆ ಅವಕಾಶ ನೀಡುವುದರ ಜತೆಗೆ ಭದ್ರತೆ, ಸಾರ್ವಜನಿಕ ಸೌಲಭ್ಯ ಹಾಗೂ ಆಡಳಿತ ವ್ಯವಸ್ಥೆಗೆ ಧಕ್ಕೆಯಾಗದಂತೆ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಅದರಂತೆ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸುವುದನ್ನು ನಿಷೇಧಿಸಿ, ಇದೇ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಹಿಂಭಾಗದಲ್ಲಿ ಹೋರಾಟ ನಡೆಸಲು ಸೂಚನೆ ನೀಡಲಾಗಿದೆ. ಈ ಆದೇಶದ ಅನ್ವಯ, ಹಕ್ಕುಪತ್ರಗಳನ್ನು ವಿತರಿಸಿ ನಾಲ್ಕು ವರ್ಷಗಳಾದರೂ ಖಾತೆ ಮಾಡಿಕೊಡದೆ ವಿಳಂಬ ಮಾಡುತ್ತಿರುವುದಾಗಿ ಆರೋಪಿಸಿ ಅರಕಲಗೂಡು ತಾಲೂಕಿನ ರಾಮನಾಥಪುರ ಗ್ರಾಮದ ವಸತಿರಹಿತರು ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿಯನ್ನು ಅಂಬೇಡ್ಕರ್ ಪ್ರತಿಮೆ ಬಳಿಗೆ ಸ್ಥಳಾಂತರಿಸಲಾಯಿತು.
ಸ್ಥಳಾಂತರದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟುನಿಟ್ಟಿನ ಬಂದೋಬಸ್ತ್ ಕೈಗೊಂಡಿದ್ದರು. ಪ್ರತಿಭಟನಾಕಾರರಿಗೂ ಹೊಸ ಸ್ಥಳದಲ್ಲಿ ಧರಣಿ ಮುಂದುವರಿಸಲು ಅವಕಾಶ ಕಲ್ಪಿಸಲಾಗಿದ್ದು, ಶಾಂತಿಯುತವಾಗಿ ಹೋರಾಟ ನಡೆಸುವಂತೆ ಸೂಚಿಸಲಾಗಿದೆ. ಜಿಲ್ಲಾಡಳಿತದ ಈ ಕ್ರಮ ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದ್ದು, ಭದ್ರತೆ ಮತ್ತು ಆಡಳಿತ ಸುಗಮತೆಗೆ ಇದು ಅಗತ್ಯ ಕ್ರಮ ಎಂದು ಕೆಲವರು ಅಭಿಪ್ರಾಯಪಟ್ಟರೆ, ಪ್ರತಿಭಟನಾ ಸ್ಥಳದ ಬದಲಾವಣೆ ಕುರಿತು ಕೆಲ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ.