ಹಾಸನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರೈತ ಪರ್ವ ಮುಖಂಡರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಮೀಸೆ ಮಂಜಣ್ಣ, ಶಿವಣ್ಣ ಸಪ್ಪಿನಹಳ್ಳಿ, ಕೆ.ಎನ್. ರಾಮಚಂದ್ರ, ನಂದ ಕುಮಾರ್, ಪ್ರಕಾಶ್, ರಘು ಇತರರಿದ್ದರು.
- ರಸಗೊಬ್ಬರ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ
- ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ರೈತ ಸಂಘದ ಮುಖಂಡರು
ಹಾಸನ: ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಚುರುಕುಗೊಂಡಿರುವ ಸಂದರ್ಭದಲ್ಲಿ ಜಿಲ್ಲೆಯಲ್ಲಿ ರಸಗೊಬ್ಬರಗಳ ಕೊರತೆ ತೀವ್ರವಾಗಿದೆ ಆರೋಪಿಸಿ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರೈತ ಪರ್ವದ ಮುಖಂಡರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಸಂಘದ ಮುಖಂಡ ಮೀಸೆ ಮಂಜಣ್ಣ ಮಾತನಾಡಿ, ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ರೈತರು ತಮ್ಮ ಜಮೀನುಗಳಲ್ಲಿ ಬಿತ್ತನೆ ಕಾರ್ಯ ಕೈಗೊಂಡಿದ್ದು, ಅನೇಕರು ತಮ್ಮ ಚಿನ್ನಾಭರಣ ಗಿರವಿ ಇಟ್ಟು ಅಥವಾ ಸಾಲ ಮಾಡಿ ಬಿತ್ತನೆ ಬೀಜ, ಕೀಟನಾಶಕ ಹಾಗೂ ಇತರ ಕೃಷಿ ಸಾಮಗ್ರಿ ಖರೀದಿಸುತ್ತಿದ್ದಾರೆ. ಆದರೆ, ಅಗತ್ಯ ಪ್ರಮಾಣದಲ್ಲಿ ರಸಗೊಬ್ಬರ ದೊರೆಯದಿರುವುದು ರೈತರಲ್ಲಿ ತೀವ್ರ ಆತಂಕ ಉಂಟು ಮಾಡಿದೆ ಎಂದರು.
ಪ್ರಸ್ತುತ ಸರ್ಕಾರಿ ಮಾರಾಟ ಕೇಂದ್ರಗಳು ಹಾಗೂ ಸಹಕಾರ ಸಂಘಗಳಲ್ಲಿ ಒಂದು ಎಕರೆಗೆ ಕೇವಲ 1 ಚೀಲ ರಸಗೊಬ್ಬರ ಮಾತ್ರ ವಿತರಿಸಲಾಗುತ್ತಿದ್ದು, ಇದು ಯಾವುದೇ ಬೆಳೆಗೆ ಸಾಕಾಗುವುದಿಲ್ಲ. ಭತ್ತ, ಮೆಕ್ಕೆಜೋಳ, ಶುಂಠಿ, ಅರಿಶಿಣ, ಕಬ್ಬು ಸೇರಿದಂತೆ ವಿವಿಧ ಬೆಳೆಗಳಿಗೆ ಹೆಚ್ಚಿನ ಪ್ರಮಾಣದ ರಸಗೊಬ್ಬರ ಅಗತ್ಯವಿದೆ ಎಂದರು.
ರಸಗೊಬ್ಬರ ಕೊರತೆ ದುರುಪಯೋಗಪಡಿಸಿಕೊಂಡು ಕೆಲ ಖಾಸಗಿ ಮಾರಾಟಗಾರರು ಹೆಚ್ಚಿನ ದರ ವಸೂಲಿ ಮಾಡುವ ಹಾಗೂ ರೈತರ ಮೇಲೆ ಅನಗತ್ಯ ಷರತ್ತು ವಿಧಿಸುವ ಬಗ್ಗೆ ದೂರು ಕೇಳಿಬರುತ್ತಿವೆ. ಜಿಲ್ಲಾಡಳಿತ ತಕ್ಷಣ ಮಧ್ಯ ಪ್ರವೇಶಿಸಿ ಜಿಲ್ಲೆಗೆ ಅಗತ್ಯ ಪ್ರಮಾಣದಲ್ಲಿ ರಸಗೊಬ್ಬರ ಪೂರೈಸಲು ಕ್ರಮ ಕೈಗೊಳ್ಳಬೇಕು. ರೈತರಿಗೆ ಯಾವುದೇ ಮಿತಿ ವಿಧಿಸದೆ ಬೆಳೆಗಳ ಅವಶ್ಯಕತೆಗೆ ಅನುಗುಣವಾಗಿ ಸಮರ್ಪಕ ಪ್ರಮಾಣದಲ್ಲಿ ರಸಗೊಬ್ಬರ ವಿತರಿಸಬೇಕು. ಜತೆಗೆ ಕೃತಕ ಅಭಾವ ಸೃಷ್ಟಿ ಹಾಗೂ ಅಕ್ರಮ ದಾಸ್ತಾನು ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಸಂಘದ ತಾಲೂಕು ಅಧ್ಯಕ್ಷ ಶಿವಣ್ಣ ಸಪ್ಪಿನಹಳ್ಳಿ, ರೈತ ಪರ್ವದ ಕೆ.ಎನ್. ರಾಮಚಂದ್ರ, ನಂದ ಕುಮಾರ್, ಪ್ರಕಾಶ್, ರಘು, ಸುರೇಶ್, ಮಂಜೇಗೌಡ, ವಿಜಯ್, ಚನ್ನೇಗೌಡ, ಮಮತೇಶ್ ಇದ್ದರು.