ಅರಕಲಗೂಡಿನಲ್ಲಿ ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ತಹಸೀಲ್ದಾರ್ ಕೆ.ಸಿ ಸೌಮ್ಯಾ ಅವರಿಗೆ ಮನವಿ ಸಲ್ಲಿಸಿದರು. ರಾಘವೇಂದ್ರಗೌಡ, ಯೋಗಣ್ಣ, ತಮ್ಮೇಗೌಡ ಇತರರಿದ್ದರು. 
ಹಾಸನ

ಸುವರ್ಣ ಕರ್ನಾಟಕ ಸೇನೆಯಿಂದ ಪ್ರತಿಭಟನೆ

ಶಿವಶಂಕರ್ ಎಂ. ಹೆಬ್ಬಳ್ಳ
ಅರಕಲಗೂಡು: ಕಂದಾಯ ಇಲಾಖೆಯಲ್ಲಿ ರೈತರ ಕೆಲಸಗಳನ್ನು ಸರಿಯಾಗಿ ಮಾಡಿಕೊಡದೆ ಅಧಿಕಾರಿಗಳು ಲೋಪ ಎಸಗುತ್ತಿದ್ದು, ಇದನ್ನು ಸರಿಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿ ಸುವರ್ಣ ಕರ್ನಾಟಕ ಸೇನೆ ಸದಸ್ಯರು ಶುಕ್ರವಾರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಸೇನೆಯ ಸಂಸ್ಥಾಪಕ ಅಧ್ಯ್ಯಕ್ಷ ಡಾ.ಎಸ್.ರಾಘವೇಂದ್ರಗೌಡ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಅಕ್ರಮ ಪೌತಿ ಖಾತೆ, ನಕಲಿ ಜನನ/ಮರಣ ಪ್ರಮಾಣ, ನಕಲಿ ವಂಶವೃಕ್ಷ ನೀಡಲಾಗುತ್ತಿದೆ. ಕೆಲವು ಅಧಿಕಾರಿಗಳು ಹಣದ ಆಸೆಗೆ ತಾಲೂಕಿನವರಲ್ಲದ ಕೆಲವರಿಗೆ ಬೇರೆ ಯಾರದ್ದೋ ಜಮೀನನ್ನು ಇನ್ಯಾರ ಹೆಸರಿಗೋ ಅಕ್ರಮವಾಗಿ ಪೌತಿ ಖಾತೆ ಮಾಡಿಸಿಕೊಟ್ಟಿದ್ದು, ಇದರಿಂದ ಭೂಮಿಯ ನಿಜವಾದ ವಾರಸುದಾರರಿಗೆ ಅನ್ಯಾಯವಾಗಿದೆ. ಅನ್ಯಾಯಕ್ಕೊಳಗಾದ ರೈತರು ಅಧಿಕಾರಿಗಳ ವಿರುದ್ಧ ಧ್ವನಿ ಎತ್ತಲು ಆಗದೆ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಆರೋಪಿಸಿದರು,
ಸಾರ್ವಜನಿಕರಿಗೆ ಸಹಕಾರಿಯಾಗುವಂತೆ ಕರ್ತವ್ಯ ನಿರ್ವಹಿಸಬೇಕಾದ ಕೆಲವು ಅಧಿಕಾರಿಗಳು ಲಂಚದ ಆಮಿಷಕ್ಕೆ ಒಳಗಾಗಿ ಕಡುಬಡವ, ಅನಕ್ಷರಸ್ಥರ ಆಸ್ತಿ ಕಬಳಿಸಲು ಸಂಚು ರೂಪಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ಸಂಬಂಧಪಟ್ಟ ಮೇಲಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಇಲಾಖೆ ಮೇಲೆ ನಂಬಿಕೆಯೇ ಇಲ್ಲದಂತಾಗಿದೆ. ಈ ಸಂಬಂಧ ಸಂಘಟನೆ ವತಿಯಿಂದ ಹಲವಾರು ಭಾರಿ ಮನವಿ ಪತ್ರ ನೀಡಿದ್ದರೂ ಸಹ ಉಪಯೋಗವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಹಸೀಲ್ದಾರ್ ಸೌಮ್ಯಾ ಅವರಿಗೆ ಮನವಿ ಸಲ್ಲಿಸಲಾಯಿತು. ರೈತ ಮುಖಂಡರಾದ ಸೀಬಳ್ಳಿ ಯೋಗಣ್ಣ, ರಮೇಶ್, ಜಗದೀಶ್, ಗೌರಮ್ಮ, ಲಕ್ಷ್ಮಮ್ಮ, ವಸಂತ, ನಿಂಗಮ್ಮ, ರಾಜೇಗೌಡ ಗೋವಿಂದೇಗೌಡ, ಯೋಗೇಶ್ ಗೌಡ, ಪ್ರದೀಪ, ಮಂಜೇಗೌಡ, ನಂದೀಶ್, ತಮ್ಮಣ್ ಗೌಡ, ಲೋಕೇಶ್ , ಎಚ್ ಆರ್ ಜಯಮ್ಮ , ಸಂತೋಷ್ ಕುಮಾರ್, ಶಿಲ್ಪಾ, ಪ್ರದೀಪ್ ಕುಮಾರ್, ಶೀಲಾ, ಯುಕ್ತಿ, ಯದ್ವಿಕ, ತಮ್ಮೇಗೌಡ ಇತರರು ಪಾಲ್ಗೊಂಡಿದ್ದರು.