ಡಿವ್ಯೆಎಸ್‌ಪಿ ಮಾಲತೀಶ್ ವಿರುದ್ಧ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸೋಮವಾರ ರಾತ್ರಿ ಪ್ರತಿಭಟನೆ ನಡೆಸಿದರು.  
ಹಾಸನ

ಬಿಜೆಪಿ, ಹಿಂದೂಪರ ಕಾರ್ಯಕರ್ತರ ಪ್ರತಿಭಟನೆ

ರವಿಕುಮಾರ್ ಪಿ. ಕೆ
ಸಕಲೇಶಪುರ: ಹಿಂದೂ ಕಾರ್ಯಕರ್ತರಿಗೆ ಡಿವೈಎಸ್ಪಿ ಮಾಲತೀಶ್ ಬೆದರಿಕೆ ಒಡ್ಡಿದ್ದಾರೆಂದು ಆರೋಪಿಸಿ ಸೋಮವಾರ ರಾತ್ರಿ ಗ್ರಾಮಾಂತರ ಠಾಣೆ ಎದುರು ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರು ಅಹೋರಾತ್ರಿ ಪ್ರತಿಭಟನೆ ನಡೆಸಿದರು.
ಸೋಮವಾರ ಪಟ್ಟಣದ ಕುಶಾಲನಗರ ಬಡಾವಣೆ ಮಸೀದಿಯೊಂದರ ಮುಂಭಾಗ ನಡುರಸ್ತೆಯಲ್ಲಿ ಗೋವಿನ ತಲೆಯನ್ನು ಇಡಲಾಗಿದ್ದು, ಇದು ಹಿಂದೂಗಳ ಭಾವನೆಗೆ ಧಕ್ಕೆ ತರುವುದಲ್ಲದೆ ಕೋಮು ಸೌಹಾರ್ದ ಕದಡುವ ಹುನ್ನಾರವಾಗಿದೆ ಎಂದು ಆರೋಪಿಸಿದ ಕಾರ್ಯಕರ್ತರು ಗುರುವಾರ ಕುಶಾಲನಗರ ಚಲೋ ಹಮ್ಮಿಕೊಳ್ಳಲು ನಿಶ್ಚಿಯಸಿ ಪೊಲೀಸರ ಅನುಮತಿಗಾಗಿ ತೆರಳಿದ್ದ ವೇಳೆ ಹಿಂದೂ ಕಾರ್ಯಕರ್ತರಿಗೆ ಬೆದರಿಕೆ ಒಡ್ಡಿದ ಡಿವೈಎಸ್‌ಪಿ, ಸೂಕ್ಷ್ಮ ಪ್ರಕರಣಗಳಲ್ಲಿ ಪ್ರತಿಭಟನೆ ನಡೆಸುವುದು ತಪ್ಪು, ಪೊಲೀಸರ ಕಾವಲಿಲ್ಲದೆ ಕುಶಾಲನಗರ ಬಡಾವಣೆಗೆ ತೆರಳಿದರೆ ರೌಡಿಶೀಟ್ ಹಾಕುವುದಾಗಿ ಬೇದರಿಕೆ ಒಡ್ಡಿದರು.
ಇದರಿಂದ ಕೆರಳಿದ ಹಿಂದೂ ಕಾರ್ಯಕರ್ತರು ಠಾಣೆಯ ಮುಂಭಾಗವೇ ಅಹೋರಾತ್ರಿ ಪ್ರತಿಭಟನೆ ನಡೆಸಿ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಆಗಮಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಸ್ಥಳಕ್ಕಾಗಮಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಡಿವೈಎಸ್‌ಪಿ ನಡೆಯನ್ನು ಖಂಡಿಸಿದ್ದಲ್ಲದೆ ಒಂದು ಕೋಮುವನ್ನು ಒಲೈಸುವ ರೀತಿ ಕರ್ತವ್ಯ ನಿರ್ವಹಿಸುತ್ತಿರುವ ಡಿವೈಎಸ್‌ಪಿ ವಿರುದ್ಧ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಕರಣ ತೀವ್ರರೂಪ ಪಡೆಯತ್ತಿರುವುದನ್ನು ಗಮನಿಸಿದ ಡಿವೈಎಸ್ಪಿ ಮಾಲತೀಶ್ ಪ್ರತಿಭಟನಾಕಾರರ ಸಮೀಪ ಆಗಮಿಸಿ ನನ್ನ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದೆ. ಸಂವಿಧಾನದ ಪ್ರಕಾರವೇ ಕರ್ತವ್ಯ ನಿರ್ವಹಿಸಲಾಗುತ್ತಿದೆ. ಪ್ರಕರಣವನ್ನು ಮುಂದುವರಿಸದೆ ಇಲ್ಲಿಗೆ ಸ್ಥಗಿತಗೊಳಿಸುವಂತೆ ಮನವಿ ಮಾಡಿದರು. ನಂತರ ಪ್ರತಿಭಟನೆಯನ್ನು ಹಿಂದೆ ಪಡೆಯಲಾಯಿತು.
ಈ ವೇಳೆ ವಿಶ್ವ ಹಿಂದೂ ಪರಿಷತ್ ವಿಭಾಗೀಯ ಕಾರ್ಯದರ್ಶಿ ಮಹಿಪಾಲ್, ಬಿಜೆಪಿ ತಾಲೂಕು ಅಧ್ಯಕ್ಷ ವಳಲಹಳ್ಳಿ ಅಶ್ವಥ್, ಕಾರ್ಯದರ್ಶಿ ಸೋಮಶೇಖರ್, ಹಿಂದೂ ಸಂಘಟನೆಯ ಪ್ರಮುಖರಾದ ಕರಡಿಗಾಲ್ ಹರೀಶ್ ಉಪಸ್ಥಿತರಿದ್ದರು.