ಸಾಲಗಾಮೆ ಹೋಬಳಿ ಸೊಪ್ಪಿನಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಕುಟುಂಬಗಳು ಮನೆಗೆ ಹೋಗಿ ಬರುವ ದಾರಿಗೆ ಸವರ್ಣೀಯವರಿಂದ ಅಡ್ಡಿಪಡಿಸುತ್ತಿದ್ದು, ರಸ್ತೆ ಬಿಡಿಸಿಕೊಡುವಂತೆ ಆಗ್ರಹಿಸಿ ಭೀಮ್ ಆರ್ಮಿ ಸಂಘಟನೆಯಿಂದ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು. 
ಹಾಸನ

ಭೀಮ್ ಆರ್ಮಿ ಸಂಘಟನೆಯಿಂದ ಪ್ರತಿಭಟನೆ

ಪ್ರಮುಖ ಮುಖ್ಯಾಂಶಗಳು

  • ಭೀಮ್ ಆರ್ಮಿ ಸಂಘಟನೆಯಿಂದ ಪ್ರತಿಭಟನೆ
  • ಪರಿಶಿಷ್ಟ ಜಾತಿಯ ಕುಟುಂಬಗಳು ಓಡಾಡಲು ದಾರಿಗೆ ಆಗ್ರಹ
ಹಾಸನ: ತಾಲೂಕಿನ ಸಾಲಗಾಮೆ ಹೋಬಳಿ ಸೊಪ್ಪಿನಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಕುಟುಂಬಗಳು ಮನೆಗೆ ಹೋಗಿ ಬರುವ ದಾರಿಗೆ ಸವರ್ಣೀಯರು ಅಡ್ಡಿಪಡಿಸುತ್ತಿದ್ದು, ರಸ್ತೆ ಬಿಡಿಸಿಕೊಡುವಂತೆ ಆಗ್ರಹಿಸಿ ಭೀಮ್ ಆರ್ಮಿ ಸಂಘಟನೆ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಭೀಮ್ ಆರ್ಮಿ ಸಂಘಟನೆ ಜಿಲ್ಲಾಧ್ಯಕ್ಷ ಎಚ್.ಎಸ್. ಪ್ರದೀಪ್, ಗ್ರಾಮದಲ್ಲಿ ಸುಮಾರು 25-30 ವರ್ಷಗಳಿಂದ ಸರ್ಕಾರಿ ಅನುದಾನದಲ್ಲಿ ನಿರ್ಮಿತ ಮನೆಯಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿಯ ಸ್ವಾಮಿ, ರಾಮಯ್ಯ ಮತ್ತು ರಮೇಶ್ ರಾಮಯ್ಯ ಅವರ ಕುಟುಂಬಗಳು ಗಂಭೀರ ತೊಂದರೆ ಎದುರಿಸುತ್ತಿವೆ. ಇವರ ಮನೆಗಳಿಗೆ ಹೋಗುವ ದಾರಿಗೆ ಗ್ರಾಮದ ಶಿವಪ್ರಕಾಶ್, ಶಂಕರೇಗೌಡ ಹಾಗೂ ಶಿವಲಿಂಗ ದೊಡ್ಡಗೌಡ ಮತ್ತು ಅವರ ಕುಟುಂಬದವರು ತಡೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮಕ್ಕಳು ಶಾಲೆಗೆ ಹೋಗಲು ದಾರಿ ಬಿಡದೆ ತೊಂದರೆ ನೀಡುತ್ತಿದ್ದು, ಹಲವಾರು ಬಾರಿ ಮಕ್ಕಳ ಮೇಲೆ ಕೈ ಮಾಡಿದ್ದಾರೆ. ಮಹಿಳೆಯರನ್ನು ಅವಾಚ್ಯವಾಗಿ ನಿಂದನೆ ಮಾಡಲಾಗಿದೆ. ಮನೆ ಹತ್ತಿರದ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಸಾಗಣೆ ಮಾಡಲು ಸಹ ಅಡ್ಡಿಪಡಿಸಿರುವುದರಿಂದ ಬೆಳೆ ಹಾನಿಯಾಗಿವೆ. ಇದಲ್ಲದೆ ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು ಮಾಡಲಾಗಿದೆ ಎಂದು ದೂರಿದರು.
ನಿತ್ಯ ನಡೆಯುತ್ತಿರುವ ಈ ರೀತಿಯ ಅಡೆ ತಡೆಗಳಿಂದಾಗಿ ದಲಿತ ಕುಟುಂಬಗಳು ತಮ್ಮ ಮನೆಗಳಿಗೆ ಹೋಗುವುದಕ್ಕೂ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ವೆ ನಂ.2 ರಲ್ಲಿ ಇರುವ ಸುಮಾರು 1 ಗುಂಟೆ ಖಾರಾಬು ಜಾಗವನ್ನು ರಸ್ತೆಗಾಗಿ ಬಳಸುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹಿಸಿದರು.
ಸಂಘಟನೆಯ ಉಪಾಧ್ಯಕ್ಷ ನವೀನ್ ಕುಮಾರ್, ವರುಣ್ ಕುಮಾರ್, ಚನ್ನರಾಯ ಪಟ್ಟಣ ತಾಲೂಕು ಉಪಾಧ್ಯಕ್ಷ ಸಂತೋಷ್, ತಾಲೂಕು ಅಧ್ಯಕ್ಷ ರವಿ, ಸಿದ್ದೇಶ್, ಕಿರಣ್ ಇದ್ದರು.