ಹಾಸನ-ಪಿರಿಯಾಪಟ್ಟಣ ಮಾರ್ಗದ ರಸ್ತೆಗೆ ಕಳಪೆ ಡಾಂಬರು ಹಾಕಿ ಕಿತ್ತು ಬರುತ್ತಿರುವುದನ್ನು ತೋರಿಸಿ ಶನಿವಾರ ಕರವೇ ಕಾರ್ಯಕರ್ತರು ಅರಕಲಗೂಡಿನಲ್ಲಿ ತಾಲೂಕಿನ ನೇರಲಹಳ್ಳಿ ಬಳಿ ಪ್ರತಿಭಟನೆ ನಡೆಸಿದರು. 
ಹಾಸನ

ರಸ್ತೆ ಕಳಪೆ ಕಾಮಗಾರಿ ಖಂಡಿಸಿ ಪ್ರತಿಭಟನೆ

ಅರಕಲಗೂಡು: ತಾಲೂಕಿನ ನೇರಲಹಳ್ಳಿ ಬಳಿ ಕಳಪೆ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಆರೋಪಿಸಿ ಕರವೇ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಜಿಪಂ ಮಾಜಿ ಸದಸ್ಯ ಎಸ್.ಪಿ.ರೇವಣ್ಣ ಮಾತನಾಡಿ, ಹಾಸನ-ಪಿರಿಯಾಪಟ್ಟಣ ಮಾರ್ಗದ ರಸ್ತೆ ಗುತ್ತಿಗೆದಾರ ಕಳಪೆ ಕಾಮಗಾರಿ ನಡೆಸಿದ್ದು ಡಾಂಬರು ಕಿತ್ತುಬರುತ್ತಿದೆ. ಕಳೆದ ತಿಂಗಳ ನೇರಲಹಳ್ಳಿ ಬಳಿ ಹಾಕಿರುವ ಡಾಂಬರು ಸಂಪೂರ್ಣ ಕಿತ್ತು ಬರುತ್ತಿದೆ. ಈ ಮಾರ್ಗದಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತಿವೆ. ರಸ್ತೆ ಹಾಳಾಗಿರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗಿದೆ. ಕಳೆದ ತಿಂಗಳು ಮುಗಳೂರು ಬಳಿ ಕಿತ್ತು ಹಾಳಾಗಿತ್ತು. ಇದೀಗ ನೇರಲಹಳ್ಳಿ ಬಳಿ ಕಳಪೆ ಕಾಮಗಾರಿ ನಡೆಸಿದ್ದು ಹೇಳುವವರು ಕೇಳುವವರೇ ಇಲ್ಲವಾಗಿದ್ದಾರೆ. ಗುತ್ತಿಗೆದಾರನ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಕಳಪೆ ಡಾಂಬರು ಎದ್ದು ಬರುತ್ತಿರುವುದನ್ನು ತೋರಿಸಿ ಪ್ರತಿಭಟನಾಕಾರರು ಗುತ್ತಿಗೆದಾರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕರವೇ ಮುಖಂಡರಾದ ಸೋಮು, ಅಭಿಷೇಕ್, ಚಿನ್ನು, ಧರ್ಮ ಇತರರು ಪಾಲ್ಗೊಂಡಿದ್ದರು.