ಸೆಸ್ಕ್ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ನೇತೃತ್ವದಲ್ಲಿ ವಿದ್ಯುತ್ ಗುತ್ತಿಗೆದಾರರು ಗುರುವಾರ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಸಕಲೇಶಪುರ: ಅಧಿಕಾರಿಗಳ ಅತಿಯಾದ ಭ್ರಷ್ಟಚಾರದಿಂದಾಗಿ ತಾಲೂಕಿನ ಸೆಸ್ಕ್ ವ್ಯವಸ್ಥೆ ಹದಗೆಟ್ಟಿದೆ ಎಂದು ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ ಆರೋಪಿಸಿದರು.
ಗುರುವಾರ ಸೆಸ್ಕ್ ಕಚೇರಿ ಒಳಾಂಗಣದಲ್ಲಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿ ಮಾತನಾಡಿದ ಮಾಜಿ ಶಾಸಕರು, ಕಾರ್ಯಪಾಲಕ ಇಂಜಿನಿಯರ್ ಹಾಗೂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅತಿಯಾದ ಭ್ರಷ್ಟಚಾರದಿಂದಾಗಿ ಕಳೆದ ಒಂದು ವಾರದಿಂದ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಣ್ಮರೆಯಾಗಿದೆ. ಈ ಸಂಬಂಧ ದೂರು ನೀಡಲು ಕರೆ ಮಾಡಿದರೂ ಸ್ವೀಕರಿಸುವುದಿಲ್ಲ. ಸ್ವೀಕರಿಸಿದರು ಉಡಾಫೆಯಿಂದ ಮಾತನಾಡುತ್ತಾರೆ ಎಂದು ಆರೋಪಿಸಿದರು.
ಅಲ್ಲದೆ ತಾಲೂಕಿನ ಸೆಸ್ಕ್ ಇಲಾಖೆಗೆ ಬರುವ ದೊಡ್ಡ ಕಾಮಗಾರಿಗಳನ್ನು ಕಮಿಷನ್ ಪಡೆದು ಹೊರಭಾಗದ ಗುತ್ತಿಗೆದಾರರಿಗೆ ನೀಡುತ್ತಿದ್ದಾರೆ. ಇದರಿಂದಾಗಿ ಮಳೆಗಾಲದಲ್ಲಿ ಮುರಿದ ವಿದ್ಯುತ್ ಕಂಬಗಳನ್ನು ದುರಸ್ತಿಪಡಿಸಲು ಸ್ಥಳೀಯ ಗುತ್ತಿಗೆದಾರರು ಲಭ್ಯವಾಗದ ಕಾರಣ ವಾರಗಳೇ ಕಳೆದರೂ ಗ್ರಾಮೀಣ ಬಾಗಕ್ಕೆ ವಿದ್ಯುತ್ ನೀಡಲಾಗುತ್ತಿಲ್ಲ. ಆದ್ದರಿಂದ ಸರ್ಕಾರ ಈ ಇಬ್ಬರೂ ಅಧಿಕಾರಿಗಳ ವಿರುದ್ಧ ಲೋಕಾಯುಕ್ತರಿಂದ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಈ ಪ್ರತಿಭಟನೆ ಕೇವಲ ಆರಂಭವಷ್ಟೇ. ನಮ್ಮ ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಬಳಿಕ ಮನವಿಯನ್ನು ಇಂಧನ ಸಚಿವರಿಗೆ ರವಾನಿಸಲಾಯಿತು.
ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಪ್ರೇಮನಾಥ್, ನಗರ ಪ್ರಾಧಿಕಾರದ ಸದಸ್ಯರಾದ ದೇವರಾಜ್, ಚರಣ್ ಇದ್ದರು.