ಸರ್ಕಾರದ ರೈತ ವಿರೋಧ ನೀತಿ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೇಲೂರಿನಲ್ಲಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಮುಖಂಡರಾದ ಭೋಗ ಮಲ್ಲೇಶ್, ಸ್ವಾಮಿಗೌಡ, ಬಸವರಾಜ್, ಕುಮಾರ್, ಸುರೇಶ್, ಶ್ರೀನಿವಾಸ್ ಸೇರಿದಂತೆ ಇತರರಿದ್ದರು.  
ಹಾಸನ

ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡನೆ

ಎ. ಆರ್. ರಘುರಾಮ
ಬೇಲೂರು : ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿವರೆಗೆ ಸೋಮವಾರ ಟ್ರ್ಯಾಕ್ಟರ್ ಹಾಗೂ ಕಾಲ್ನಡಿಗೆ ಜಾಥಾ ನಡೆಸಿದ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭ ಮಾತನಾಡಿದ ರೈತ ಸಂಘದ ತಾಲೂಕು ಅಧ್ಯಕ್ಷ ಭೋಗ ಮಲ್ಲೇಶ್,
ತಾಲೂಕಿನಲ್ಲಿ ಮಳೆ ಕೈಕೊಟ್ಟಿದ್ದು, ಬೆಳೆಗಳೆಲ್ಲ ನಾಶವಾಗುತ್ತಿವೆ. ಈ ಸಂದರ್ಭ ಸರ್ಕಾರ ತಾಲೂಕನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಆಗ್ರಹಿಸಿದರು. ಸೆಸ್ಕ್ ನಿಂದ ಸರಿಯಾಗಿ ವಿದ್ಯುತ್ ಸಂಪರ್ಕ ನೀಡದೆ ರೈತರನ್ನು ಗೊಳಾಡಿಸಲಾಗುತ್ತಿದೆ. ಶಾಸಕರಿಗೆ ಇದೆಲ್ಲ ಕಾಣುತ್ತಿದ್ದರೂ ಅಧಿಕಾರಿಗಳಿಗೆ ಸೂಚನೆ ನೀಡದೇ ಮೌನವಾಗಿದ್ದಾರೆ. ಯಾವುದೂ ತಮಗೆ ಸಂಬಂಧವಿಲ್ಲ ಎಂಬಂತೆ ನಟಿಸುತ್ತಿದ್ದಾರೆ. ಜೋಳಕ್ಕೆ ಬಿಳಿ ಸುಳಿ ರೋಗ ಹರಡಿ ಫಸಲು ಹಾಳಾಗುತ್ತಿದ್ದೂ ಸರ್ಕಾರದಿಂದ ಪರಿಹಾರ ಕೊಡಿಸುವಲ್ಲಿ ಕ್ರಮ ವಹಿಸುತ್ತಿಲ್ಲ ಎಂದು ದೂರಿದರು.
ಕಾಲುವೆಯಲ್ಲಿ ಹೂಳು ತೆಗೆದಿಲ್ಲ:
ಹಳೇಬೀಡು ಮಾದಿಹಳ್ಳಿ ಏತ ನೀರಾವರಿ ಕಾಲುವೆಯಲ್ಲಿ ಹೂಳು ತೆಗೆಯದೆ ನೀರು ಬಿಟ್ಟಿರುವುದರಿಂದ ಬೆಳೆಗಳು ರೋಗಕ್ಕೆ ತುತ್ತಾಗುತ್ತಿವೆ, ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ, ಕೂಡಲೇ ರೈತರ ಸಂಕಷ್ಟ ಪರಿಹರಿಸಲು ಮುಂದಾಗಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟಕ್ಕೆ ಮುಂದಾಗ ಬೇಕಾಗುತ್ತದೆ ಎಂದು ಭೋಗ ಮಲ್ಲೇಶ್ ಎಚ್ಚರಿಸಿದರು.
ಭೂಮಿ ವಶಪಡಿಸಿಕೊಳ್ಳಬೇಡಿ:
ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸ್ವಾಮಿಗೌಡ ಮಾತನಾಡಿ, ತಾಲೂಕಿನಲ್ಲಿ 2004 ರಿಂದ ಈಚೆಗೆ ಐವತ್ತೂ ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವ ಬಡ ರೈತರ ಜಮೀನನ್ನು ಮತ್ತೆ ಸರ್ಕಾರ ವಶಪಡಿಸಿಕೊಳ್ಳಲು ಹವಣಿಸುತ್ತಿರುವುದು ತಪ್ಪು ನಡೆ ಎಂದರು. ರೈತರ ಹೆಸರಿನಲ್ಲಿ ಪಹಣಿ, ಸಾಗುವಳಿ ಚೀಟಿ ನೀಡಿದ್ದರೂ ತನಿಖೆ ಹೆಸರಿನಲ್ಲಿ ರೈತರನ್ನು ಕಳ್ಳರಂತೆ ಬಿಂಬಿಸಲಾಗುತ್ತಿದೆ. ಆದರೂ ಶಾಸಕರು ಮೌನ ವಹಿಸಿದ್ದಾರೆ. ರೈತರ ಭೂಮಿಯನ್ನು ವಶಕ್ಕೆ ಪಡೆದು ಅನ್ನದಾತರನ್ನು ಬೀದಿಗೆ ತರುವ ಮತ್ತು ಸಿರಿವಂತರ ಹಿತಾಸಕ್ತಿ ಕಾಪಾಡುವ ಹುನ್ನಾರ ನಡೆಯುತ್ತಿದೆ ಎಂದು ದೂರಿದರು.
ರೈತರ ಸಹನೆ ಪರೀಕ್ಷೆ ಮಾಡಬಾರದು:
ಯಾವುದೇ ಸರ್ಕಾರ ರೈತರ ಸಹನೆ ಪರೀಕ್ಷೆ ಮಾಡಬಾರದು. ರೈತರನ್ನು ಕೆಣಕಿದರೆ ಯಾವುದೇ ಸರ್ಕಾರ ಉಳಿಯಲಾರದು. ಹಾಗಾಗಿ ಕೃಷಿಕರನ್ನು ಹತ್ತಿಕ್ಕುವ ಕೆಲಸವನ್ನು ಕೂಡಲೇ ಕೈಬಿಡಬೇಕು. ಬಗರ್ ಹುಕುಂ ಸಾಗುವಳಿ ಹಾಗೂ ಪಹಣಿ ಹೊಂದಿರುವ ರೈತರಿಗೆ ಭೂಮಿ ಉಳುಮೆ ಮಾಡಲು ಬಿಡಬೇಕು ಎಂದು ಸ್ವಾಮಿಗೌಡ ಹೇಳಿದರು.
ಮಲೆನಾಡು ಭಾಗದಲ್ಲಿ ಆನೆಗಳ ಹಾವಳಿ ಹೆಚ್ಚಾಗಿದೆ. ಆನೆ ಹಾಗೂ ಮಾನವ ಸಂಘರ್ಷಕ್ಕೆ ಇತಿಶ್ರೀ
ಹಾಡಬೇಕು, ಆನೆಗಳನ್ನು ಜಿಲ್ಲೆಯಿಂದ ಹೊರಗಿನ ಕಾಡುಗಳಿಗೆ ಅಟ್ಟಬೇಕು. ಶಾಸಕರು ತಾಲೂಕಿನ ಜ್ವಲಂತ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಬೇಕು ಎಂದವರು ಆಗ್ರಹಿಸಿದರು.
ತಾಲೂಕು ರೈತ ಸಂಘದ ಕಾರ್ಯದರ್ಶಿ ಬಸವರಾಜ್, ಕುಮಾರ್, ಸುರೇಶ್, ಶ್ರೀನಿವಾಸ್ ಸೇರಿದಂತೆ ಇತರರಿದ್ದರು.