ಚನ್ನರಾಯಪಟ್ಟಣ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿ ಕೇಂದ್ರಕ್ಕೆ ಶಾಸಕ ಸಿ.ಎನ್. ಬಾಲಕೃಷ್ಣ ರಾಗಿ ರಾಶಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಸಿ.ಎನ್.ಪುಟ್ಟಸ್ವಾಮಿಗೌಡ, ವೆಂಕಟೇಶಮೂರ್ತಿ, ಮರಗೂರು ಅನಿಲ್, ಮೂಡನಹಳ್ಳಿ ಚಂದ್ರಣ್ಣ, ರಮೇಶ್ ಕುಂಬಾರಹಳ್ಳಿ ಇತರರು ಇದ್ದರು.  
ಹಾಸನ

ದಿಡಗದಲ್ಲಿ ಖರೀದಿ ಕೇಂದ್ರ ತೆರೆಯಲು ಪ್ರಸ್ತಾವನೆ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿಕೆ
  • ಚನ್ನರಾಯಪಟ್ಟಣದಲ್ಲಿ ರೈತರಿಂದ ರಾಗಿ ಖರೀದಿಗೆ ಚಾಲನೆ
ಚನ್ನರಾಯಪಟ್ಟಣ: ತಾಲೂಕಿನಲ್ಲಿ ತೆರೆದಿರುವ 6 ಖರೀದಿ ಕೇಂದ್ರಗಳೊಂದಿಗೆ ಹೆಚ್ಚವರಿಯಾಗಿ ದಿಡಿಗದಲ್ಲಿ ಖರೀದಿ ಕೇಂದ್ರ ತೆರೆಯಲು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಶನಿವಾರ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ವತಿಯಿಂದ 2025-26ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ರಾಗಿ ಖರೀದಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾಲೂಕಿನ ಗಡಿ ಭಾಗದ ರೈತರ ಅನುಕೂಲಕ್ಕಾಗಿ ದಿಡಗ ಗ್ರಾಮದಲ್ಲಿ ಖರೀದಿ ಕೇಂದ್ರ ತೆರೆಯಲು ಮನವಿ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿ ಅವರು ರೈತರ ಸಮಸ್ಯೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಖರೀದಿ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳಲಾಗುವುದು, ಪ್ರಸಕ್ತ ವರ್ಷ ಒಳ್ಳೆಯ ಬೆಲೆಯನ್ನು ಸರ್ಕಾರ ನಿಗದಿಪಡಿಸಿ ರಾಗಿ ಖರೀದಿಸುತ್ತಿದೆ. ರೈತರಿಂದ ನೇರವಾಗಿ ಖರೀದಿಸಿ ಅದರ ಹಣವನ್ನು ಯಾವುದೇ ಮಧ್ಯವರ್ತಿಗೆ ಆಸ್ಪದ ನೀಡದೆ ರೈತರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ನೇರವಾಗಿ ಸಂದಾಯ ಮಾಡಲಾಗುತ್ತದೆ. ರೈತರು ರಾಗಿ ಖರೀದಿ ಕೇಂದ್ರಕ್ಕೆ ಗುಣಮಟ್ಟದ ರಾಗಿಯನ್ನು ಸರಬರಾಜು ಮಾಡಲು ಆದ್ಯತೆ ನೀಡಬೇಕು. ತಾಲೂಕಿನಲ್ಲಿ ಖರೀದಿಯಾದ ರಾಗಿಯನ್ನು ಸ್ಥಳೀಯ ಪಡಿತರ ವಿತರಣಾ ವ್ಯವಸ್ಥೆ ಮೂಲಕವೇ ವಿತರಿಸಲಾಗುತ್ತದೆ. ಸಾರ್ವಜನಿಕ ಉಪಯೋಗಕ್ಕೆ ಬರುವ ರಾಗಿ ಶುದ್ಧವಾಗಿರುವಂತೆ ಅಧಿಕಾರಿಗಳು ವಿಶೇಷ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಪ್ರತಿ ಕ್ವಿಂಟಾಲ್ ರಾಗಿಗೆ 4886 ರೂ.ನಿಗದಿ: 2025-26 ನೇ ಸಾಲಿನ ಕನಿಷ್ಠ ಬೆಂಬಲ ಯೋಜನೆಯಡಿ ಪ್ರತಿ ಕ್ವಿಂಟಾಲ್ ರಾಗಿಗೆ 4886 ರೂ.ನಿಗದಿಪಡಿಸಲಾಗಿದೆ. ಪ್ರತಿ ರೈತರಿಂದ ಒಂದು ಎಕರೆಗೆ 10 ಕ್ವಿಂಟಾಲ್‌ನಂತೆ ಗರಿಷ್ಠ 50 ಕ್ವಿಂಟಾಲ್‌ಗಳನ್ನು ಮೀರದಂತೆ ನೋಂದಣಿ ಮಾಡಿಕೊಂಡಿರುವ 14,435 ರೈತರಿಂದ 3,39,388 ಕ್ವಿಂಟಾಲ್ ಉತ್ತಮ ಗುಣಮಟ್ಟದ ರಾಗಿ ಖರೀದಿಸಲಾಗುವುದು. ಪ್ರಸಕ್ತ ಸಾಲಿನ ರಾಗಿ ಖರೀದಿ ಪ್ರಕ್ರಿಯೆಯಲ್ಲಿ ಎರಡು ಬಾರಿ ಬಯೋಮೆಟ್ರಿಕ್ ಬಳಕೆಯಾಗುತ್ತದೆ ಎಂದು ಹೇಳಿದರು.
ಹೋಬಳಿವಾರು ರೈತರ ನೋಂದಣಿ ವಿವರ: ಚನ್ನರಾಯಪಟ್ಟಣ-2627 ರೈತರು, ಹಿರೀಸಾವೆ-2854, ನುಗ್ಗೆಹಳ್ಳಿ-3996, ಶ್ರವಣಬೆಳಗೊಳ-1845, ಉದಯಪುರ- 1287, ಬಾಗೂರು-1826 ಸೇರಿ 14,435 ರೈತರು ರಾಗಿ ಪೂರೈಕೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಖರೀದಿ ಕೇಂದ್ರದಲ್ಲಿ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. ನೋಂದಣಿ ಮಾಡಿಕೊಂಡಿರುವ ಎಲ್ಲ ರೈತರರಾಗಿ ಖರೀದಿ ಮಾಡಲಾಗುವುದು ಎಂದರು.
ರಾಜ್ಯ ಮಾರಾಟ ಮಹಾಮಂಡಳದ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮಿಗೌಡ ಮಾತನಾಡಿ, ಅಧಿಕಾರಿಗಳು ಯಾವುದೇ ಕಾರಣಕ್ಕೂ ವ್ಯಾಪಾರಿಗಳು ಹಾಗೂ ದಲ್ಲಾಳಿಗಳು ಖರೀದಿ ಪ್ರಕ್ರಿಯೆಯಲ್ಲಿ ಮೂಗು ತೂರಿಸದಂತೆ ನೋಡಿಕೊಳ್ಳಬೇಕು. ಅವರಿಂದ ಅಂತರ ಕಾಯ್ದುಕೊಂಡರೇ ಖರೀದಿ ಕೇಂದ್ರಗಳಲ್ಲಿ ಯಾವುದೇ ವ್ಯತ್ಯಾಸಗಳಿಗೆ ಅವಕಾಶವಿರುವುದಿಲ್ಲ. ಗ್ರೇಡ್ ಮಾಡುವವರು ರೈತರಿಗೆ ಸಮಾಧಾನವಾಗುವ ರೀತಿ ಗ್ರೇಡ್ ಮಾಡಬೇಕೆಂದು ಕಿವಿಮಾತು ಹೇಳಿದರು.
ಟಿಎಪಿಸಿಎಂಎಸ್‌ನ ಅಧ್ಯಕ್ಷ ವೆಂಕಟೇಶ್ ಮೂರ್ತಿ, ನಿರ್ದೇಶಕ ರಮೇಶ್ ಕುಂಬಾರಹಳ್ಳಿ, ಎಂ.ಆರ್. ಅನಿಲ್ ಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಶಿವಣ್ಣ, ಕಾರ್ಯದರ್ಶಿ ಸೋಮಶೇಖರ್, ಮುಖಂಡರಾದ ಬೋರೇಗೌಡ, ಮೂಡನಳ್ಳಿ, ಚಂದ್ರಣ್ಣ, ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕಿ ಅನುರಾಧ ತಾಲೂಕು ಆಹಾರ ಶಿರಸ್ತೆದಾರ್ ಹೇಮಂತ್ ಕುಮಾರ್ ಇತರರು ಇದ್ದರು.
ಚಿತ್ರ ಶೀರ್ಷಿಕೆ 14 ಸಿಆರ್‌ಪಿ-3ಎ.