ವಾಸವಿ ಜಯಂತಿ ಅಂಗವಾಗಿ ಶ್ರೀಕನ್ನಿಕಾ ಪರಮೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಿದ ಕನ್ನಿಕಾ ಪರಮೆಶ್ವರಿ-ಆರ್ಯ ವೈಶ್ಯ ಮಂಡಳಿ ಪದಾಧಿಕಾರಿಗಳು ಮತ್ತು ಸದಸ್ಯರು.
ಬೇಲೂರು: ಶ್ರೀಕನ್ನಿಕಾ ಪರಮೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಭಾನುವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶ್ರೀಚನ್ನಕೇಶವಸ್ವಾಮಿ ದೇಗುಲದವರೆಗೂ ಮೆರವಣಿಗೆ ನಡೆಸಿ ವಾಸವಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಶ್ರೀಕನ್ನಿಕಾ ಪರಮೇಶ್ವರಿ-ಆರ್ಯ ವೈಶ್ಯ ಮಂಡಳಿ ಪೇಟೆ ಸಂಘದ ಅಧ್ಯಕ್ಷ ಬಿ.ಡಿ.ಅಶೋಕ್ ನೇತೃತ್ವ ಮತ್ತು ಸಮಾಜದ ವಿವಿಧ ಸಂಘಗಳ ಪ್ರಮುಖರ ಸಮ್ಮುಖದಲ್ಲಿ ಪಟ್ಟಣದಲ್ಲಿ ಶನಿವಾರ ಬೆಳಗ್ಗೆಯಿಂದಲೇ ಹಲವಾರು ಪೂಜಾ ಕೈಂಕಾರ್ಯಗಳು ಜರುಗಿದವು. ಮೂಲ ಸ್ಥಾನದಲ್ಲಿ ಅಮ್ಮನವರಿಗೆ ಹಾಗೂ ಉತ್ಸವ ಮೂರ್ತಿಗೆ ವಿಶೇಷ ಅಭಿಷೇಕ ನೆರವೇರಿಸಲಾಯಿತು. ಬಳಿಕ ಮಡಿ ಉತ್ಸವ ಹಾಗೂ ವಾಸವಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ದಿನದ ವಿಶೇಷವಾಗಿ ಅಮ್ಮನವರಿಗೆ ತುಲಾಭಾರ, ಗೋ ಪೂಜೆ, ಕನ್ನಿಕಾ ಪೂಜೆ ಹಾಗೂ ಮಹಿಳೆಯರಿಗೆ ಮಡಿಲಕ್ಕಿ ನೀಡುವ ಕಾರ್ಯಕ್ರಮಗಳು ಜರುಗಿದವು. ಮಧ್ಯಾಹ್ನ ವಾಸವಿ ಹೋಮ ಮತ್ತು ಮಹಾಮಂಗಳಾರತಿ ನೆರವೇರಿತು. ವಾಸವಿ ಜಯಂತಿ ಅಂಗವಾಗಿ ಎಲ್ಲ ಕುಲಬಾಂಧವರು ತಮ್ಮ ದೈನಂದಿನ ವ್ಯವಹಾರಗಳನ್ನು ಸ್ಥಗಿತಗೊಳಿಸಿ ಕುಟುಂಬ ಸಮೇತರಾಗಿ ಪಾಲ್ಗೊಂಡಿದ್ದರು.
ಉಪಾಧ್ಯಕ್ಷ ಬಿ.ಎಂ.ಸುರೇಶ್, ಕಾರ್ಯದರ್ಶಿ ಕೆ.ಎಲ್.ಸುಧೀಂದ್ರ, ಖಜಾಂಚಿ ಬಿ.ಎಸ್.ವಿನಯ್ ಕುಮಾರ್, ನಿರ್ದೇಶಕರಾದ ಎಚ್.ವಿ.ರವೀಂದ್ರನಾಥ್, ವಿಶ್ವನಾಥ್ ಜೆ.ಪ್ರಶಾಂತ್, ಬಿ.ಆರ್.ಉಮೇಶ್, ಬಿ.ಎ.ಆನಂದ್, ಬಿ.ಜೆ.ಪ್ರಶಾಂತ್, ವಾಸವಿ ಯುವಜನ ಸಂಘದ ಅಧ್ಯಕ್ಷ ಬಿ.ಎಸ್.ಶ್ರೀನಿವಾಸ್, ವಾಸವಿ ಫಂಡ್ಸ್ ಅಧ್ಯಕ್ಷ ಬಿ.ಎಚ್.ಗುರುರಾಜ್, ವಾಸವಿ ಸೇವಾ ಮಂಡಳಿ ಅಧ್ಯಕ್ಷ ಬಿ.ಟಿ.ಕೃಷ್ಣಕುಮಾರ್, ವಾಸವಿ ವನಿತಾ ಸಂಘದ ಅಧ್ಯಕ್ಷೆ ಜ್ಯೋತಿ ಸುರೇಶ್, ಶ್ರೀವಾರಿ ಭಜನಾ ಮಂಡಳಿ ಮಾಲತಿ ಸೇರಿದಂತೆ ಇತರರಿದ್ದರು.