ಹಾಸನ ನಗರದ ಕೆಎಸ್‌ಆರ್‌ಟಿಸಿ ಘಟಕ-2ರ ಕೆಂಪೇಗೌಡ ಸಂಘಟನೆ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಜಯಂತಿ ಕಾರ್ಯಕ್ರಮದಲ್ಲಿ ಸಿಬ್ಬಂದಿ ಸ್ವಯಂ ಪ್ರೇರಿತ ರಕ್ತದಾನ ಮಾಡಿದರು. ಎಂ.ಕೆ.ಪ್ರಕಾಶ್, ಎಸ್.ಪ್ರವೀಣ್, ಶಿವರಾಮ್, ಧರ್ಮ, ಶ್ರೀಕಂಠೇಗೌಡ, ಶಿವರಾಂ, ರವಿಕುಮಾರ್ ಇತರರಿದ್ದರು.
- ಜನಪರ ಚಿಂತನೆ ಎಲ್ಲರಿಗೂ ಪ್ರೇರಣೆ
- ಕೆಂಪೇಗೌಡ ಜಯಂತಿಯಲ್ಲಿ ಸಾರಿಗೆ ಅಧಿಕಾರಿ ಎಂ.ಕೆ.ಪ್ರಕಾಶ್ ಅಭಿಮತ
ಹಾಸನ: ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸುವಂತಾಗಬೇಕು ಎಂದು ಕೆಎಸ್‌ಆರ್‌ಟಿಸಿ ಘಟಕ-2ರ ವ್ಯವಸ್ಥಾಪಕ ಎಂ.ಕೆ.ಪ್ರಕಾಶ್ ಅಭಿಪ್ರಾಯಪಟ್ಟರು.
ನಗರದ ಕೆಎಸ್‌ಆರ್‌ಟಿಸಿ ಘಟಕ-2ರ ಕೆಂಪೇಗೌಡ ಸಂಘಟನೆಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಜಯಂತಿಯಲ್ಲಿ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಉತ್ತಮ ಆಡಳಿತ, ಜನಪರ ಚಿಂತನೆ ಮತ್ತು ಸಮಾಜ ನಿರ್ಮಾಣಕ್ಕೆ ನೀಡಿದ ಕೊಡುಗೆ ಇಂದಿಗೂ ಪ್ರೇರಣೆಯಾಗಿದೆ. ಅವರ ಆದರ್ಶಗಳನ್ನು ಕೇವಲ ಭಾಷಣಗಳಲ್ಲಿ ಹೇಳುವುದಕ್ಕಿಂತ ಸಮಾಜಕ್ಕೆ ಉಪಯುಕ್ತವಾಗುವ ಕಾರ್ಯಗಳ ಮೂಲಕ ಸ್ಮರಿಸುವುದು ಹೆಚ್ಚು ಅರ್ಥಪೂರ್ಣ ಎಂದರು.
ಕೆಂಪೇಗೌಡ ಸಂಘದ ಅಧ್ಯಕ್ಷ ಎಸ್.ಪ್ರವೀಣ್ ಮಾತನಾಡಿ, ಸಮಾಜಕ್ಕೆ ಅಪಾರ ಕೊಡುಗೆ ನೀಡಿದ ಮಹನೀಯರನ್ನು ಸ್ಮರಿಸುವ ಉದ್ದೇಶದಿಂದ ಜಯಂತಿಗಳನ್ನು ಆಚರಿಸಲಾಗುತ್ತಿದೆ. ನಾವು ಯಾವುದೇ ಜಾತಿಯ ದೃಷ್ಟಿಕೋನದಿಂದ ಕಾರ್ಯಕ್ರಮ ನಡೆಸುವುದಿಲ್ಲ. ಸಮಾಜದ ಅಭಿವೃದ್ಧಿಗೆ ಶ್ರಮಿಸಿದ ಮಹನೀಯರ ಆದರ್ಶಗಳನ್ನು ಜನರಿಗೆ ತಲುಪಿಸುವುದು ಹಾಗೂ ಅವರ ಸೇವಾ ಮನೋಭಾವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮ ಗುರಿಯಾಗಿದೆ ಎಂದರು.
ಜಯಂತಿ ಅಂಗವಾಗಿ ರಕ್ತದಾನ ಹಾಗೂ ಆರೋಗ್ಯ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಶಿಬಿರದಲ್ಲಿ 25ಕ್ಕೂ ಹೆಚ್ಚು ಸಿಬ್ಬಂದಿ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು.
ಕೆಂಪೇಗೌಡ ಸಂಘದ ಪದಾಧಿಕಾರಿಗಳಾದ ಶಿವರಾಮ್, ಧರ್ಮ, ಶ್ರೀಕಂಠೇಗೌಡ, ಶಿವರಾಂ, ರವಿಕುಮಾರ್ ಇತರರಿದ್ದರು.