ತಾಲೂಕಿನ ಗೊಟ್ರುವಳ್ಳಿ ಹಾಗೂ ಮೈಲಹಳ್ಳಿ ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಚ್.ಕೆ.ಸುರೇಶ್ ಭೂಮಿ ಪೂಜೆ ನೆರವೇರಿಸಿದರು. ಪುರುಷೋತ್ತಮ್. ರಾಮೇಗೌಡ, ವಿನಯ್, ಭರತ್ ಇತರರಿದ್ದರು.
- ಅಧಿಕಾರಿಗಳಿಗೆ ಶಾಸಕ ಎಚ್.ಕೆ.ಸುರೇಶ್ ಸೂಚನೆ
ಬೇಲೂರು: ತಾಲೂಕಿನ ತೊಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈಲಹಳ್ಳಿ ಹಾಗೂ ಗೊಟ್ರುವಳ್ಳಿ ಗ್ರಾಮದ ಸಂಪರ್ಕ ರಸ್ತೆಯನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ ಇಲಾಖೆಯಿಂದ 35 ಲಕ್ಷ ರೂ, ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಚ್.ಕೆ.ಸುರೇಶ್ ಮಂಗಳವಾರ ಭೂಮಿ ಪೂಜೆ ನೆರವೇರಿಸಿದರು.
ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಮಳೆಗಾಲದಲ್ಲಿ ಗೊಟ್ರುವಳ್ಳಿ ಹಾಗೂ ಮೈಲಹಳ್ಳಿ ರಸ್ತೆಯ ಗುಂಡಿಗಳಲ್ಲಿ ನೀರು ನಿಂತು ಜನರು ಮತ್ತು ವಾಹನಗಳು ಓಡಾಡದ ಸ್ಥಿತಿ ನಿರ್ಮಾಣವಾಗುತಿತ್ತು. ಜತೆಗೆ ಈ ಎರಡು ಗ್ರಾಮಗಳ ಗ್ರಾಮಸ್ಥರ ಬಹು ದಿನಗಳ ಬೇಡಿಕೆ ಸಹ ಇತ್ತು. ಈ ಹಿನ್ನೆಲೆಯಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ 35 ಲಕ್ಷ ರೂ, ಅನುದಾನದಲ್ಲಿ ಸಂಪರ್ಕ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಜತೆಗೆ ಈ ಗ್ರಾಮಗಳಲ್ಲಿ ಇನ್ನಷ್ಟು ಉಳಿದಿರುವ ರಸ್ತೆ ಅಭಿವೃದ್ಧಿ ಹಾಗೂ ಮೂಲ ಸೌಕರ್ಯಗಳನ್ನು ಕಲ್ಪಿಸಲು ಮುಂದಾಗಲಿದ್ದೇನೆ.
ಗುತ್ತಿಗೆದಾರರು ಗುಣಮಟ್ಟದ ಕೆಲಸ ನಿರ್ವಹಿಸಬೇಕು. ಇಂಜಿನಿಯರ್‌ಗಳು ಖುದ್ದಾಗಿ ಸ್ಥಳದಲ್ಲಿ ಕಾಮಗಾರಿ ವೀಕ್ಷಿಸಿ ನಿಂತು ಕೆಲಸ ಮಾಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು. ಗ್ರಾಮಸ್ಥರು ಸಹ ಕೆಲಸಕ್ಕೆ ಸಹಕಾರ ನೀಡಬೇಕು ಎಂದರು.
ಈ ಸಂದರ್ಭ ಗ್ರಾಮಸ್ಥರಾದ ಪುರುಷೋತ್ತಮ್. ರಾಮೇಗೌಡ, ವಿನಯ್, ಭರತ್, ಶೋಭ ಗಣೇಶ್, ಅಶ್ವಥ್, ಗಣೇಶ್, ಲಕ್ಷ್ಮಣ್, ಪದ್ಮೇಗೌಡ, ರಮೇಶ್, ಪ್ರದೀಪ್, ಚಂದ್ರಪ್ಪ, ದೇವರಾಜು, ವಸಂತ ಕುಮಾರ್, ಸಂಪತ್ ಸೇರಿದಂತೆ ಇತರರಿದ್ದರು.