ಚನ್ನರಾಯಪಟ್ಟಣದಲ್ಲಿನ ಕಂಟ್ರಾಕ್ಟರ್ ಅಸೋಸಿಯೇಷನ್ ಅಂಡ್ ಕ್ಲಬ್ ತನ್ನ 200 ಮಂದಿ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ ನಡೆಸಿತು. ಸಿ.ವೈ.ಪ್ರವೀಣ್, ಯೋಗಣ್ಣ, ಎನ್.ರಂಗಸ್ವಾಮಿ ಇತರರಿದ್ದರು.
- ರಾಜ್ಯ ಮಾರಾಟ ಮಹಾಮಂಡಳದ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮೀಗೌಡ ಅಭಿಮತ
ಚನ್ನರಾಯಪಟ್ಟಣ: ಸಾರ್ವಜನಿಕರು ಶಿಸ್ತುಬದ್ಧ ಜೀವನಶೈಲಿಯಿಂದ ಸಾಂಕ್ರಾಮಿಕ ರೋಗಗಳಿಂದ ದೂರವಿರಬಹುದೆಂದು ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಳದ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮೀಗೌಡ ಹೇಳಿದರು.
ಚನ್ನರಾಯಪಟ್ಟಣದಲ್ಲಿನ ಕಂಟ್ರಾಕ್ಟರ್ ಅಸೋಸಿಯೇಷನ್ ಅಂಡ್ ಕ್ಲಬ್ ತನ್ನ 200 ಮಂದಿ ಸದಸ್ಯರಿಗೆ ಅಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಮತ್ತು ನೇತ್ರ ಪರೀಕ್ಷೆ ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕ್ಲಬ್ 22 ವರ್ಷಗಳಿಂದ ಮನರಂಜನೆಗಷ್ಟೇ ಸೀಮಿತವಾಗದೇ ಕ್ಲಬ್ ಕಲೆ, ಕ್ರೀಡೆ, ಸಾಹಿತ್ಯ, ರಂಗಭೂಮಿ ಸೇರಿ ಹಲವು ಕ್ಷೇತ್ರಗಳಲ್ಲಿ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಾ ಬಂದಿದೆ. ಇದೀಗ ತನ್ನೆಲ್ಲಾ ಸದಸ್ಯರಿಗೆ ಆರೋಗ್ಯ ಶಿಬಿರವನ್ನು ನಡೆಸುತ್ತಿದೆ. ರೋಗಗಳನ್ನು ಅಂಟಿಸಿಕೊಂಡು ನೋವು ಅನುಭವಿಸುವುದಕ್ಕಿಂತ ರೋಗ ಬರದಂತೆ ಎಚ್ಚರವಹಿಸುವುದು ಮುಖ್ಯ. 40ವಯೋಮಿತಿ ದಾಟಿದ ಪ್ರತಿಯೊಬ್ಬರು 6 ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ದೈಹಿಕವಾಗಿ ಬಲಾಢ್ಯವಾಗಿದ್ದೇನೆ ಎಂದು ತಪಾಸಣೆಯಿಂದ ದೂರವುಳಿಯುವುದು ತಪ್ಪು. ಇಂದಿನ ಆಹಾರಪದ್ಧತಿ, ಜೀವನಶೈಲಿಯಿಂದ ಶೀಘ್ರ ರೋಗಕ್ಕೆ ತುತ್ತಾಗುತ್ತಿದ್ದೇವೆ. ಮಧುಮೇಹ, ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕೆಂದರು.
ಕಂಟ್ರಾಕ್ಟರ್ ಅಸೋಸಿಯೇಷನ್ ಅಂಡ್ ಕ್ಲಬ್‌ನ ಅಧ್ಯಕ್ಷರಾದ ತೋಪೆಗೌಡ ಮಾತನಾಡಿ, ನಮ್ಮ ಸದಸ್ಯರ ಉತ್ತಮ ಆರೋಗ್ಯದ ದೃಷ್ಟಿಯಿಂದ ಮೊದಲ ಬಾರಿಗೆ ಆರೋಗ್ಯ ತಪಾಸಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಜಾಗದ ಕೊರತೆಯಿಂದ ಮೊದಲ ಹಂತದಲ್ಲಿ ಬರೀ ಸದಸ್ಯರಿಗೆ ಮಾತ್ರ ಶಿಬಿರ ಅಯೋಜಿಸಿದ್ದು, ಮುಂದಿನ ದಿನಗಳಲ್ಲಿ ಸದಸ್ಯರ ಕುಟುಂಬಸದಸ್ಯರು ಸೇರಿದಂತೆ ಸಾರ್ವಜನಿಕರಿಗೂ ಆಯೋಜಿಸಲಿದ್ದೇವೆ ಎಂದರು.
ಶಿಬಿರದಲ್ಲಿ ಬಿಪಿ, ಶುಗರ್, ನೇತ್ರ ಪರೀಕ್ಷೆ, ಮೂಳೆ ಸಾಂಧ್ರತೆ ಪರೀಕ್ಷೆ ಯೊಂದಿಗೆ ಮೂಳೆ ತಜ್ಞರು, ಇಎನ್‌ಟಿ, ದಂತ, ಸರ್ಜನ್ ವೈದ್ಯರುಗಳು ಭಾಗವಹಿಸಿದ್ದರು.
ಕಂಟ್ರಾಕ್ಟರ್ ಅಸೋಸಿಯೇಷನ್ ಅಂಡ್ ಕ್ಲಬ್‌ನ ಗೌರವಾಧ್ಯಕ್ಷ ಸಿ.ವೈ.ಪ್ರವೀಣ್, ಉಪಾಧ್ಯಕ್ಷರಾದ ಯೋಗಣ್ಣ, ಎನ್.ರಂಗಸ್ವಾಮಿ, ಕಾರ್ಯದರ್ಶಿ ಎಸ್.ಎಲ್.ರಮೇಶ್, ಜಂಟಿ ಕಾರ್ಯದರ್ಶಿ ಪಿಜೆ ರಾಮಕೃಷ್ಣೇಗೌಡ, ಖಜಾಂಚಿ ಸಿಎನ್ ಪಾಂಡು, ನಿರ್ದೇಶಕರಾದ ವೆಂಕಟೇಗೌಡ, ಕೆ.ಎನ್.ಶಂಕರ್, ರಾಜು, ಧರಣೇಶ್, ಗಂಗಾಧರ್, ಸಿಆರ್ ನಂಜಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್‌ಬಿ ಜಗದೀಶ್, ಡಾ.ಮಹೇಶ್ ಇತರರು ಇದ್ದರು.