ಅರಕಲಗೂಡಿನಲ್ಲಿ ಆಯೋಜಿಸಿದ್ದ ಸಮಾರಂಭವನ್ನು ಕೆ.ಟಿ.ಮೇಘನಾ ಉದ್ಘಾಟಿಸಿದರು.ಶ್ರೀ ಶಂಭುನಾಥ ಸ್ವಾಮೀಜಿ, ಎಚ್.ಎನ್. ಮಲ್ಲೇಶಗೌಡ ಇತರರಿದ್ದರು. 
ಹಾಸನ

ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಪೂರ್ವ ಸಿದ್ಧತೆ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಡಿಡಿ ಚಂದನ ವಾಹಿನಿ ಸಹಾಯಕ ನಿರ್ದೇಶಕಿ ಕೆ.ಟಿ. ಮೇಘನಾ
  • ಬಿಜಿಎಸ್ ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜು
ಅರಕಲಗೂಡು: ವಿದ್ಯಾರ್ಥಿಗಳು ಕೆಪಿಎಸ್‌ಸಿ ಮತ್ತು ಯುಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಶಸ್ಸಿಯಾಗಿ ಎದುರಿಸುವ ಉದ್ದೇಶದಿಂದ ಪದವಿ ಶಿಕ್ಷಣದ ಆರಂಭದಲ್ಲೇ ಪೂರ್ವ ಸಿದ್ಧತೆ ಮಾಡಿಕೊಳ್ಳುವುದು ಅತ್ಯವಶ್ಯಕ ಎಂದು ಡಿಡಿ ಚಂದನ ವಾಹಿನಿ ಸಹಾಯಕ ನಿರ್ದೇಶಕಿ ಕೆ.ಟಿ. ಮೇಘನಾ ಸಲಹೆ ನೀಡಿದರು.
ಪಟ್ಟಣದ ಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ಬಿಜಿಎಸ್ ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜು ವತಿಯಿಂದ ಮಂಗಳವಾರ ಆಯೋಜಿಸಿದ್ದ ಫೇರ್‌ವೆಲ್ ಪಾರ್ಟಿ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಬದುಕನ್ನು ಬದಲಾಯಿಸುವ ನಿಟ್ಟಿನಲ್ಲಿ ಶಿಕ್ಷಣವನ್ನು ಅಸ್ತ್ರವಾಗಿ ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳು ಶ್ರಮಪಟ್ಟು ವ್ಯಾಸಂಗ ಮಾಡುವ ಮೂಲಕ ಪರೀಕ್ಷೆಯಲ್ಲಿ ಉತ್ತಮ ಅಂಕಪಡೆದು ಅಂದುಕೊಂಡ ಕೋರ್ಸ್ ನಲ್ಲಿ ಸೀಟು ಸಿಕ್ಕರೆ ಸಫಲತೆ ಸಾಧಿಸಿದ ತೃಪ್ತಿ ಸಿಗಲಿದೆ. ಇದಕ್ಕಾಗಿ ಕೈಕಟ್ಟಿ ಕುಳಿತುಕೊಳ್ಳದೆ ಶ್ರಮಪಟ್ಟು ವ್ಯಾಸಂಗ ಮಾಡಬೇಕು ಎಂದರು.
ದ್ವಿತೀಯ ಪಿಯು ವಿದ್ಯಾರ್ಥಿಗಳು ಪರೀಕ್ಷೆ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಹೆಚ್ಚಿನದಾಗಿ ಓದಿದ್ದನ್ನು ಮನನ ಮಾಡಿಕೊಳ್ಳಬೇಕು. ಪರೀಕ್ಷೆ ಸಮೀಪಸುತ್ತಿದ್ದಂತೆ ಭಯ ತೊರೆದು ಧೈರ್ಯವಾಗಿ ಬರೆಯಬೇಕು. ಪರೀಕ್ಷೆ ಬರೆದು ಬಂದ ಮೇಲೆ ಆ ವಿಷಯದ ಬಗ್ಗೆ ಚರ್ಚಿಸದೆ ಮುಂದಿನ ವಿಷಯದ ಪರೀಕ್ಷೆ ಕಡೆ ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.
ಪರೀಕ್ಷೆಯಲ್ಲಿ ಗಳಿಸುವ ಅಂಕವೇ ಮುಖ್ಯವಾದರೂ ಅದೇ ಜೀವನ ಎಂದು ಭಾವಿಸಿ ಕೈಕಟ್ಟಿ ಕುಳಿತುಕೊಳ್ಳದೆ ಸತತ ಪ್ರಯತ್ನ ಮಾಡಬೇಕು. ಒಂದು ಬಾಗಿಲು ಮುಚ್ಚಿದರೆ ಹಲವು ಬಾಗಿಲು ತೆರೆದುಕೊಳ್ಳುತ್ತವೆ. ಇದಕ್ಕಾಗಿ ಅವಿರತ ಪ್ರಯತ್ನ ಮುಖ್ಯ ಎಂದರು.
ಹಾಸನದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಕಠಿಣ ಪರಿಶ್ರಮದಿಂದ ಮಾತ್ರ ಸಾಧನೆಯ ಮೆಟ್ಟಿಲೇರಲು ಸಾಧ್ಯ. ಮೇಘನಾ ಅವರು ಯಾರೋ ಕಟ್ಟಿದ ಗೋಪುರಕ್ಕೆ ಕಳಸವಾಗಿಲ್ಲ. ಅವರೇ ಕಟ್ಟಿದ ಗೋಪುರಕ್ಕೆ ಕಳಸವಾಗಿದ್ದಾರೆ. ಪರೀಕ್ಷೆ ಎದುರಿಸಲು ಭಯ, ಆತಂಕ ಬೇಡ. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ನಮ್ಮ ಮುಂದೆ ಸಾಕಷ್ಟು ಸವಾಲುಗಳು ಬಂದರೂ ಧೃತಿಗೆಡದೆ ಎದುರಿಸಬೇಕು ಎಂದರು.
ಹಾಸನ ಜಿಲ್ಲಾ ಕಸಪಾ ಅಧ್ಯಕ್ಷ ಎಚ್.ಎನ್. ಮಲ್ಲೇಶ್ ಗೌಡ ಮಾತನಾಡಿ, ಉತ್ತಮ ಶಿಕ್ಷಣ ಪಡೆದು ಉನ್ನತ ಬದುಕು ರೂಪಿಸಿಕೊಳ್ಳಬೇಕು. ತಮಗೆ ಶಿಕ್ಷಣ ಕೊಡಿಸಲು ಶ್ರಮಿಸುತ್ತಿರುವ ಪಾಲಕರ ಸ್ಥಿತಿ ಕಡೆಗೂ ಮಕ್ಕಳು ಗಮನ ಹರಿಸಬೇಕು. ಕಲಿಕಾ ಹಂತದಲ್ಲಿ ಸಮಯ ವ್ಯರ್ಥ ಮಾಡದೆ ಕಲಿತರೆ ಸಾಧನೆ ಮಾಡಲು ಸಾಕಷ್ಟು ಅವಕಾಶಗಳಿವೆ. ಕನ್ನಡ ಸಾಹಿತ್ಯದಲ್ಲೂ ಐಎಎಸ್ ಮಾಡಲು ಅವಕಾಶವಿದ್ದು ಉನ್ನತ ಸ್ಥಾನಕ್ಕೇರಬಹುದು ಎಂದು ಹೇಳಿದರು.
ಪ್ರಾಂಶುಪಾಲರಾದ ಮಹೇಶ್ ಹೊಡೆನೂರು, ಉಪನ್ಯಾಸಕ ದಶರಥ ಇತರರಿದ್ದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.