ಆಲೂರು ತಾಲೂಕಿನ ಮಗ್ಗೆ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಸುಮಾರು 70 ರಿಂದ 80 ಕುಟುಂಬಗಳ ಜೀವನಾಧಾರವಾಗಿರುವ ಕಲ್ಲು ಗಣಿಗಾರಿಕೆ ಕಾರ್ಯ ಮರು ಆರಂಭಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅವರಿಗೆ ಮನವಿ ಸಲ್ಲಿಸಲಾಯಿತು. ಮಂಜೇಶ್, ನಾಗರಾಜು, ಶ್ರೀನಿವಾಸ್, ಮಹೇಶ್, ಚಿದಾನಂದ್, ಜೈಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜೇಶ್ ಇತರರು ಇದ್ದರು.
- ಮಗ್ಗೆ ಗ್ರಾಮದಲ್ಲಿ ಕಲ್ಲು ಗಣಿಗಾರಿಕೆ ಆರಂಭಿಸಲು ಒತ್ತಾಯ
- ಕಾರ್ಮಿಕರು ಹಾಗೂ ಲೈಸೆನ್ಸ್‌ದಾರರು ಭೂಮಿ ಸಂಘದಿಂದ ಪ್ರತಿಭಟನೆ
- ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿಗೆ ಮನವಿ
ಹಾಸನ: ಆಲೂರು ತಾಲೂಕಿನ ಮಗ್ಗೆ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಸುಮಾರು 70 ರಿಂದ 80 ಕುಟುಂಬಗಳ ಜೀವನಾಧಾರವಾಗಿರುವ ಕಟ್ಟಡ ಕಲ್ಲು ಗಣಿಗಾರಿಕೆ ಸ್ಥಗಿತಗೊಂಡಿದ್ದು, ಇದನ್ನು ಮರು ಆರಂಭಿಸಬೇಕು ಎಂದು ಕಾರ್ಮಿಕರು ಹಾಗೂ ಲೈಸೆನ್ಸ್‌ದಾರರು ಭೂಮಿ ಸಂಘದಿಂದ ಡಿಸಿ ಕಚೇರಿ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅವರಿಗೆ ಮನವಿ ಸಲ್ಲಿಸಿದರು.
ಆಲೂರು ತಾಲೂಕಿನ ಕೆ.ಹೊಸಕೋಟೆ ಹೋಬಳಿ ಮಗ್ಗೆ ಗ್ರಾಮದ ಸರ್ವೇ ನಂ.151ರಲ್ಲಿ ಲೈಸೆನ್ಸ್ ನಂ. 494/ಎಚ್.ಎಂ.ಜಿ. ಅಡಿಯಲ್ಲಿ 3 ಎಕರೆ ಪ್ರದೇಶದಲ್ಲಿ 2015-16ನೇ ಸಾಲಿನಲ್ಲಿ ಸರ್ಕಾರವು 20 ವರ್ಷಗಳ ಅವಧಿಗೆ ಕಟ್ಟಡ ಕಲ್ಲು ಗಣಿಗಾರಿಕೆ ಲೈಸೆನ್ಸ್ ನೀಡಿತ್ತು. ಈ ಲೈಸೆನ್ಸ್ ಭೋವಿ ಜನಾಂಗದವರ ಕುಲಕಸುಬು ಹಾಗೂ ಜೀವನೋಪಾಯಕ್ಕಾಗಿ ನೀಡಲಾಗಿದ್ದು, ಈ ಕೆಲಸವೇ ಅನೇಕ ಕುಟುಂಬಗಳಿಗೆ ಏಕೈಕ ಆದಾಯ ಮೂಲವಾಗಿದೆ. ಆದರೆ, ಹೊಸಮಠ ಗ್ರಾಮದ ಕೆಲವರು ಲಂಚ ನೀಡುವಂತೆ ಒತ್ತಾಯಿಸಿ ಹಣ ನೀಡದ ಕಾರಣ ಗಣಿಗಾರಿಕೆ ನಡೆಸುತ್ತಿದ್ದವರ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಂತರ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಸಂಬಂಧಪಟ್ಟ ಇಲಾಖೆಗಳಿಗೆ ದೂರು ನೀಡಲಾಗಿದ್ದು, ಅದರ ಆಧಾರದಲ್ಲಿ ಕಟ್ಟಡ ಕಲ್ಲು ಗಣಿಗಾರಿಕೆ ಕಾರ್ಯಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಲಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಗಣಿಗಾರಿಕೆ ಸ್ಥಗಿತಗೊಂಡ ಬಳಿಕ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಕುಟುಂಬಗಳು ಜೀವನೋಪಾಯವಿಲ್ಲದೆ ಬೀದಿ ಪಾಲಾಗುವ ಸ್ಥಿತಿ ಎದುರಿಸುತ್ತಿವೆ. ನಾವು ಬಡ ಹಾಗೂ ಶೋಷಿತ ವರ್ಗಕ್ಕೆ ಸೇರಿದವರು. ಯಾವುದೇ ಸಹಕಾರ ಅಥವಾ ರಕ್ಷಣೆ ಇಲ್ಲದೆ ಬದುಕು ಅಸಾಧ್ಯವಾಗುತ್ತಿದೆ. ಕೆಲಸ ಇಲ್ಲದೆ ಆತ್ಮಹತ್ಯೆಯ ಆಲೋಚನೆಗಳು ಬರುತ್ತಿವೆ ಎಂದು ಕಾರ್ಮಿಕರು ನೋವು ತೋಡಿಕೊಂಡಿದ್ದಾರೆ.
ಈ ನಡುವೆ ಕೃಷಿ, ಅರಣ್ಯ, ಪರಿಸರ, ಸಮಾಜ ಕಲ್ಯಾಣ, ರೆವಿನ್ಯೂ, ಪಿಡಬ್ಲುೃಡಿ, ಆರೋಗ್ಯ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ತಹಸೀಲ್ದಾರ್, ಉಪವಿಭಾಗಾಧಿಕಾರಿಗಳು, ಪೊಲೀಸ್ ಇಲಾಖೆ, ಪಂಚಾಯಿತಿ ಅಧಿಕಾರಿಗಳು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಜಂಟಿ ಸರ್ವೇ ನಡೆಸಲಾಗಿದೆ. ಜಂಟಿ ಸರ್ವೇ ವರದಿಗಳಲ್ಲಿ ಗಣಿಗಾರಿಕೆ ಕಾರ್ಯದಿಂದ ಜಮೀನು, ಮನೆಗಳು, ಗ್ರಾಮಸ್ಥರು ಅಥವಾ ಕೃಷಿ ಜಾನುವಾರುಗಳಿಗೆ ಯಾವುದೇ ರೀತಿಯ ಹಾನಿ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಈ ವರದಿಗಳು ಗಣಿ ವಿಜ್ಞಾನ ಇಲಾಖೆಗೆ ಸಲ್ಲಿಕೆಯಾಗಿವೆ ಎಂದು ಹೇಳಿದರು. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಜಿಲ್ಲಾಧಿಕಾರಿಗಳು ನ್ಯಾಯಯುತ ನಿರ್ಧಾರ ಕೈಗೊಂಡು ಕಟ್ಟಡ ಕಲ್ಲು ಗಣಿಗಾರಿಕೆ ಕಾರ್ಯವನ್ನು ಮರು ಆರಂಭಿಸಲು ಅನುಮತಿ ನೀಡಬೇಕು ಎಂದು ಭೋವಿ ಜನಾಂಗದ ಕುಟುಂಬಗಳು ಒತ್ತಾಯಿಸಿವೆ.
ಸರ್ಕಾರ ನೀಡಿರುವ ಲೈಸೆನ್ಸ್ ಮತ್ತು ಇಲಾಖೆಗಳ ಸ್ಪಷ್ಟ ವರದಿಗಳಿದ್ದರೂ ಕೆಲಸ ಸ್ಥಗಿತಗೊಂಡಿರುವುದು ಅನ್ಯಾಯವಾಗಿದ್ದು, ಕೂಡಲೇ ತಡೆ ತೆರವುಗೊಳಿಸಬೇಕೆಂದು ಮನವಿ ಮಾಡಿದರು.
ಇದೆ ವೇಳೆ ಭೂವಿ ಸಂಘದ ಮಂಜೇಶ್, ನಾಗರಾಜು, ಶ್ರೀನಿವಾಸ್, ಮಹೇಶ್, ಚಿದಾನಂದ್, ಜೈಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜೇಶ್ ಇತರರು ಇದ್ದರು.