ಅರಸೀಕೆರೆ ನಗರದ ಹೆಂಜಗೊಂಡನಹಳ್ಳಿ ಬಡಾವಣೆಯಲ್ಲಿ ಅಂದಾಜು 7 ಕೋಟಿ ರೂ.ವೆಚ್ಚದ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಪ.ಜಾತಿ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಭೂಮಿ ಪೂಜೆ ನೆರವೇರಿಸಿದರು. ಸಂತೋಷ್ ಕುಮಾರ್, ಪರಶಿವಮೂರ್ತಿ, ಮೋಹನ್ ಕುಮಾರ್, ನಟರಾಜ್, ಪ್ರೊ.ಕಂಚಿರಾಯ ಇತರರಿದ್ದಾರೆ. 
ಹಾಸನ

ಸೋಲಾರ್ ಪ್ಲಾಂಟ್ ಕಾರ್ಯಾರಂಭಕ್ಕೆ ಸಿದ್ಧತೆ

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಮಾಹಿತಿ
ಅರಸೀಕೆರೆ: ಶೈಕ್ಷಣಿಕ ಸಮಾನ ಅವಕಾಶ ಕಲ್ಪಿಸುವ ಜತೆಗೆ ಕ್ಷೇತ್ರವನ್ನು ಪ್ರಗತಿ ಪಥದತ್ತ ಕೊಂಡೊಯ್ಯಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ ಎಂದು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಹೆಂಜಗೊಂಡನಹಳ್ಳಿ ಬಡಾವಣೆಯಲ್ಲಿ 7 ಕೋಟಿ ರೂ. ವೆಚ್ಚದ ಡಾ.ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಪ.ಜಾತಿ ಬಾಲಕಿಯರ ವಿದ್ಯಾರ್ಥಿ ನಿಲಯ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಏಳು ವಸತಿ ಶಾಲೆಗಳನ್ನು ತೆರೆಯಲಾಗಿದೆ. ಕಟ್ಟಡ ಕಾರ್ಮಿಕರ ಹಿತ ಮನಗಂಡು ಕಾರ್ಮಿಕರ ವಸತಿ ಶಾಲೆಯನ್ನು ಮಂಜೂರು ಮಾಡಿಸಿದ್ದು, ಸ್ಥಳ ಅಂತಿಮಗೊಳಿಸುವ ಜತೆಗೆ ಭೂಮಿ ಪೂಜೆ ಮಾಡಲಾಗುವುದು. ಹಾರನಹಳ್ಳಿ ಕೋಡಿಮಠದ ಬಳಿಯಿರುವ ವಸತಿ ಶಾಲೆಯ ಆವರಣದಲ್ಲಿ ಪದವಿ ಪೂರ್ವ ಕಾಲೇಜು ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ಸರ್ಕಾರಿ ಇಂಜಿನಿಯರಿಂಗ್ ಹಾಗೂ ಪಾಲಿಟೆಕ್ನಿಕ್ ಕೂಡ ತಂದಿದ್ದೇನೆ. ಸರ್ಕಾರದ ವತಿಯಿಂದ ನಡೆಯುವ ಕಾಲೇಜು ವಿದ್ಯಾರ್ಥಿನಿಯರ ಹಿತ ಮನಗಂಡು ಅಂದಾಜು ಏಳು ಕೋಟಿ ರೂ. ವೆಚ್ಚದಲ್ಲಿ ವಸತಿ ನಿಲಯ ಆರಂಭವಾಗಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಮಾನ ಅವಕಾಶ ಕೊಡಿಸಲು ನಿರಂತರ ಹೋರಾಟ ಮಾಡಿರುವುದು ಕ್ಷೇತ್ರದ ಜನರಿಗೆ ಗೊತ್ತಿದೆ. ಅಭಿವೃದ್ಧಿ ಶೂನ್ಯ ಎಂದು ಸುಖಾಸುಮ್ಮನೆ ಮಾತನಾಡುವವರು ಕೆಲಸಗಳನ್ನು ಒಮ್ಮೆ ತಿರುಗಿ ನೋಡಲಿ ಎಂದರು.
ವಿದ್ಯುತ್ ಕ್ಷಾಮ ನೀಗಿಸುವ ಉದ್ದೇಶದಿಂದ ಈಗಾಗಲೇ 350 ಕೋಟಿ ರೂ.ವೆಚ್ಚದಲ್ಲಿ ಸೋಲಾರ್ ಪ್ಲಾಂಟ್ ಕಾರ್ಯಾರಂಭ ಮಾಡಲು ಸಿದ್ಧತೆ ನಡೆದಿದ್ದು ವಿದ್ಯುತ್ ಸರಬರಾಜಿಗೆ ಸಬ್ ಸ್ಟೇಷನ್ ನಿರ್ಮಾಣ ಅಗತ್ಯವಿದೆ. ಇಂಧನ ಸಚಿವ ಕೆ.ಜೆ.ಜಾರ್ಜ್ ಸಕಾರಾತ್ಮಕ ಸ್ಪಂದನೆ ನೀಡಿದ್ದು ಭೂಮಿ ಪೂಜೆಗೆ ಬರಲಿದ್ದಾರೆ. ಗೀಜಿಹಳ್ಳಿ ತರಕಾರಿ ಸಗಟು ಮಾರುಕಟ್ಟೆ ಪ್ರಾಂಗಣಕ್ಕೆ 10 ಕೋಟಿ ರೂ. ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣವಾಗಲಿದೆ. ಇದರಿಂದ ರೈತರಿಗೆ, ವರ್ತಕರಿಗೆ ಅನುಕೂಲವಾಗಲಿದೆ. ಎತ್ತಿನ ಹೊಳೆ, ಭದ್ರ ಮೇಲ್ದಂಡೆ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚುವರಿ ಹಣ ಬಿಡುಗಡೆ ಮಾಡಿಸಿದ್ದು, 300 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸಚಿವರು ಶೀಘ್ರದಲ್ಲಿ ಚಾಲನೆ ನೀಡಲಿದ್ದಾರೆ ಎಂದರು.
ವಸತಿ ಶಿಕ್ಷಣ ಸಂಸ್ಥೆಗಳ ಎಇಇ ನಟರಾಜ್ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. 20 ಕೊಠಡಿ, 1 ಮೇಲ್ಬಿಚಾರಕ ಕೊಠಡಿ, ಗ್ರಂಥಾಲಯ ಸೇರಿದಂತೆ ಮೂಲ ಸೌಲಭ್ಯಗಳನ್ನು ಒಳಗೊಂಡ ಭವ್ಯ ನಿಲಯ ನಿರ್ಮಾಣಗೊಳ್ಳಲಿದೆ. ಸ್ಥಳಿಯ ಶಾಸಕರು ತಾಲೂಕಿನ ಮೂರು ಶಾಲೆಗಳನ್ನು ಮೇಲ್ದರ್ಜೆಗೇರಿಸಬೇಕು ಎಂದು ಮನವಿ ಮಾಡಿದರು.
ಪಿಯುಸಿ ಮತ್ತು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಸತಿಶಾಲೆ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ತಹಸಿಲ್ದಾರ್ ಎಂ.ಜೆ ಸಂತೋಷ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪರ ಶಿವಮೂರ್ತಿ, ಬಿಇಒ ಮೋಹನ್ ಕುಮಾರ್, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಪ್ರೊ.ಕಂಚಿರಾಯ, ವ್ಯವಸ್ಥಾಪಕ ವೆಂಕಟೇಶ್ ಶೆಟ್ಟಿ, ಜಿಲ್ಲಾ ದಿಶಾ ಸಮಿತಿ ಸದಸ್ಯೆ ಮಂಜುಳಾ ಚಂದ್ರನಾಯ್ಕ, ಹಾಸ್ಟೆಲ್ ಮೇಲ್ವಿಚಾರಕರಾದ ಸತೀಶ್, ಗುತ್ತಿಗೆದಾರರಾದ ಬಸವರಾಜು, ತಿರುಪತಿ ರೆಡ್ಡಿ, ಬಸವರಾಜು, ಮುಖಂಡ ವೆಂಕಟೇಶ್, ಪ್ರಾಧಿಕಾರ ಸದಸ್ಯ ಬಾಲಮುರುಗನ್, ಅನಂದ್, ರಂಗಸ್ವಾಮಿ, ವಿವಿಧ ಹಾಸ್ಟೆಲ್‌ಗಳ ಮೇಲ್ವಿಚಾರಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.