ಹಾಸನ ನಗರದ ಕುವೆಂಪು ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಮಹಾನಗರ ಪಾಲಿಕೆಯ 2026-27ನೇ ಸಾಲಿನ ಆಯವ್ಯಯ ತಯಾರಿಕೆಯ ಮೊದಲ ಹಂತದ ಸಾರ್ವಜನಿಕ ಸಮಾಲೋಚನಾ ಸಭೆ, ಸಾರ್ವಜನಿಕರ ಆಕ್ರೋಶ, ಗೊಂದಲ, ವಾಗ್ವಾದಕ್ಕೆ ಸಾಕ್ಷಿಯಾಯಿತು. ಮಹಾನಗರ ಪಾಲಿಕೆಯ ಪ್ರಾದೇಶಿಕ ಆಯುಕ್ತರಾದ ನಿತೀಶ್, ಆಯುಕ್ತ ಕೃಷ್ಣಮೂರ್ತಿ ಇತರರು ಇದ್ದರು.
- ಜಟಾಪಟಿಗೆ ಸಾಕ್ಷಿಯಾದ ಬಜೆಟ್ ಪೂರ್ವಭಾವಿ ಸಭೆ
- ಹಾಸನ ಮಹಾನಗರ ಪಾಲಿಕೆಯಲ್ಲಿ ಸಮಸ್ಯೆಗಳ ಚರ್ಚೆ
- ಗೊಂದಲ, ಗದ್ದಲದ ನಡುವೆ ಸಾರ್ವಜನಿಕ ಸಮಾಲೋಚನೆಗೆ ತೆರೆ
ಹಾಸನ: ನಗರದ ಕುವೆಂಪು ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಮಹಾನಗರ ಪಾಲಿಕೆಯ 2026-27ನೇ ಸಾಲಿನ ಆಯವ್ಯಯ ತಯಾರಿಕೆಯ ಮೊದಲ ಹಂತದ ಸಾರ್ವಜನಿಕ ಸಮಾಲೋಚನಾ ಸಭೆ, ದೂರುಗಳ ಸುರಿಮಳೆ, ಗೊಂದಲ, ಗದ್ದಲಕ್ಕೆ ಸಾಕ್ಷಿಯಾಯಿತು.
ನಗರಸಭೆಯಿಂದ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದ ಬಳಿಕ ಆಯೋಜನೆಗೊಂಡಿದ್ದ ಮೊದಲ ಬಜೆಟ್ ಪೂರ್ವಭಾವಿ ಸಭೆಯಾಗಿರುವ ಕಾರಣ ಸಹಜವಾಗಿಯೇ ನಿರೀಕ್ಷೆ ಹೆಚ್ಚಿತ್ತು. ಈ ಕಾರಣ ಸಾರ್ವಜನಿಕರೂ ಹೆಚ್ಚಿನ ಸಂಖ್ಯೆಯಲ್ಲಿ ಸಭೆಗೆ ಹಾಜರಾಗಿದ್ದರು.
ಒಂದು ಹಂತದಲ್ಲಿ ಅಧಿಕಾರಿಗಳು, ಸಾರ್ವಜನಿಕರ ನಡುವೆ ವಾಗ್ವಾದ ತೀವ್ರಗೊಂಡ ಪರಿಣಾಮ ಪೊಲೀಸರು ಮಧ್ಯ ಪ್ರವೇಶ ಮಾಡಬೇಕಾದ ಸಂದರ್ಭವೂ ಒದಗಿತು.
ಆಮ್ ಆದ್ಮಿ ಪಾರ್ಟಿ ರಾಜ್ಯ ಉಪಾಧ್ಯಕ್ಷ ಅಗಿಲೆ ಯೋಗೀಶ್ ಮಾತನಾಡಿ, ಹಾಸನ ಮಹಾನಗರ ಪಾಲಿಕೆಯ ವಿದ್ಯುತ್ ಶಾಖೆಯ ಸಹಾಯಕ ಅಭಿಯಂತರ ಕೆ.ಆರ್. ಕವಿತಾ ಅವರಿಗೆ ಹಲವು ಹೆಚ್ಚುವರಿ ಜವಾಬ್ದಾರಿ ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಕೂಡಲೇ ಅವರಿಗೆ ನೀಡಿರುವ ಹೆಚ್ಚುವರಿ ಜವಾಬ್ದಾರಿಗಳನ್ನು ವಾಪಸ್ ಪಡೆಯಿರಿ ಎಂದು ಆಗ್ರಹಿಸಿದರು.
ಗುಡ್ಡೆನಹಳ್ಳಿ ನಿವಾಸಿ ರಂಗಸ್ವಾಮಿ ಗ್ರಾಮಸ್ಥರ ಪರವಾಗಿ ಮಾತನಾಡಿ, ಸರ್ಕಾರಿ ಕೆರೆಯ ದುಸ್ಥಿತಿಯನ್ನು ವಿವರಿಸಿದರು. ಕೆಲವರು ಆಯ್ದ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಮಾತನಾಡುತ್ತಿದ್ದಾರೆ ಎನ್ನುವ ವಿಚಾರ ಪ್ರಸ್ತಾಪವಾಗಿ ಸಭೆಯಲ್ಲಿ ಗೊಂದಲ ಉಂಟಾಗಿ ವಾಗ್ವಾದ ಹೆಚ್ಚಾಯಿತು. ಬಿ. ಕಾಟೀಹಳ್ಳಿಯ ಮುಖ್ಯ ರಸ್ತೆಯಲ್ಲಿ ಪೈಪ್ ಒಡೆದು ನೀರು ವ್ಯರ್ಥವಾಗುತ್ತಿರುವುದು, ಬಸ್ ತಂಗುದಾಣವನ್ನು ದ್ವಿಚಕ್ರ ವಾಹನ ಪಾರ್ಕಿಂಗ್‌ಗಾಗಿ ಬಳಸಿಕೊಳ್ಳುತ್ತಿರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿರುವುದು, ನಗರದ ವಿವಿಧ ಭಾಗಗಳಲ್ಲಿ ಅಂಗಡಿ ಮಾಲೀಕರು ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿರುವುದು ಸೇರಿ ಹಲವು ಸಮಸ್ಯೆಗಳ ಪರಿಹಾರಕ್ಕೆ ಬಜೆಟ್ ನಲ್ಲಿ ಅವಕಾಶ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.
ನಗರದಲ್ಲಿ ಪ್ಲೈಓವರ್‌ಗಳ ನಿರ್ಮಾಣ, ಅಂಬೇಡ್ಕರ್ ವೃತ್ತದಲ್ಲಿ ಪ್ರತಿಮೆ ಸ್ಥಾಪನೆ, ಪರಿಶಿಷ್ಟ ಜಾತಿ, ಪಂಗಡದವರಿಗಾಗಿ ಟೈಲರಿಂಗ್ ಮಿಷನ್‌ಗಳ ವಿತರಣೆ, ಯುಜಿಡಿಗಳ ಸಮರ್ಪಕ ನಿರ್ವಹಣೆಯ ಬಗ್ಗೆ ಚರ್ಚೆಯಾಯಿತು.
ಜೈ ಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜೇಶ್, ಶ್ರೀನಗರ ನಿವಾಸಿ ದಸ್ತಾಗೀರ್, ಸಾರ್ವಜನಿಕರು ತಮ್ಮ ವಾರ್ಡ್‌ಗಳ ಸಮಸ್ಯೆಗಳನ್ನು ಪ್ರಸ್ತಾಪಿಸಿದರು. ಮಹಾನಗರ ಪಾಲಿಕೆಯ ಪ್ರಾದೇಶಿಕ ಆಯುಕ್ತರು ಹಾಗೂ ಆಡಳಿತಾಧಿಕಾರಿ ನಿತೀಶ್ ಮತ್ತು ಆಯುಕ್ತ ಕೃಷ್ಣಮೂರ್ತಿ ಎಲ್ಲ ಮನವಿಗಳನ್ನು ಆಲಿಸಿ, ಸಾಧ್ಯವಾದಷ್ಟು ಶೀಘ್ರವಾಗಿ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ವೇಳೆ ತಹಸೀಲ್ದಾರ್ ಗೀತಾ ಇತರರು ಉಪಸ್ಥಿತರಿದ್ದರು.