ಹಾಸನ ನಗರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿರುವ 2 ದಿನಗಳ ರಾಜ್ಯ ಮಟ್ಟದ ಸ್ಪರ್ಧೆಯನ್ನು ಪವರ್ ಲಿಫ್ಟಿಂಗ್ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಸತೀಶ್‌ಕುಮಾರ್ ಉದ್ಘಾಟಿಸಿದರು. ಕೆ.ಎಂ. ಶ್ರೀನಿವಾಸ್, ನಿರಂಜನ್‌ರಾಜ್, ಕೆ.ಹನುಮಂತೇಗೌಡ, ಸಂತೋಷ್ ಶೆಟ್ಟಿ, ವೇಣುಗೋಪಾಲ್ ಇತರರಿದ್ದರು.
- 156 ದೇಶಗಳಲ್ಲಿ ಮಾನ್ಯತೆ ಪಡೆದ ಕ್ರೀಡೆ ಪವರ್ ಲಿಫ್ಟಿಂಗ್
- ಸತೀಶ್‌ಕುಮಾರ್ ಹೇಳಿಕೆ
- ರಾಜ್ಯ ಮಟ್ಟದ ಸ್ಪರ್ಧೆಗೆ ಚಾಲನೆ
ಹಾಸನ: ಜಿಲ್ಲಾ ಪವರ್ ಲಿಫ್ಟಿಂಗ್ ಸಂಸ್ಥೆ ವತಿಯಿಂದ ಮೊದಲ ಬಾರಿಗೆ ನಗರದಲ್ಲಿ ರಾಜ್ಯ ಮಟ್ಟದ ಮುಕ್ತ ಹಾಗೂ ಬಾಲಕ-ಬಾಲಕಿಯರ ಸಬ್ ಜೂನಿಯರ್ ಕ್ಲಾಸಿಕ್ ಮತ್ತು ಎಕ್ಯುಪ್ಡ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ ಅನ್ನು ಅತ್ಯುತ್ತಮವಾಗಿ ಆಯೋಜಿಸಲಾಗಿದೆ ಎಂದು ಪವರ್ ಲಿಫ್ಟಿಂಗ್ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಸತೀಶ್ ಕುಮಾರ್ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿರುವ 2 ದಿನಗಳ ರಾಜ್ಯ ಮಟ್ಟದ ಸ್ಪರ್ಧೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಎರಡು ದಿನಗಳ ಕಾಲ ನಡೆಯಲಿರುವ ಈ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ದಿನ ಕ್ಲಾಸಿಕ್ ವಿಭಾಗದ ಎಲ್ಲ ಸ್ಪರ್ಧೆಗಳು ನಡೆಯಲಿದ್ದು, ಭಾನುವಾರ ಎಕ್ಯುಪ್ಡ್ ಪವರ್‌ಲಿಫ್ಟಿಂಗ್ ಸ್ಪರ್ಧೆ ನಡೆಯಲಿವೆ ಎಂದು ತಿಳಿಸಿದರು.
ಪವರ್ ಲಿಫ್ಟಿಂಗ್ ವಿಶ್ವದ 156 ದೇಶಗಳಲ್ಲಿ ಮಾನ್ಯತೆ ಪಡೆದ ಕ್ರೀಡೆಯಾಗಿದೆ. ಈಗ ಸಾಮಾನ್ಯ ಜಿಮ್‌ಗಳಲ್ಲಿಯೂ ಪವರ್ ಲಿಫ್ಟಿಂಗ್ ಅಭ್ಯಾಸ ಮಾಡುವ ಕ್ರೀಡಾಪಟುಗಳಿದ್ದಾರೆ. ಕರ್ನಾಟಕದ ಕ್ರೀಡಾಪಟುಗಳು ಪ್ರತಿಬಾರಿಯೂ ರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದು ರಾಜ್ಯದ ಕೀರ್ತಿ ಹೆಚ್ಚಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಅನೇಕರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ ಎಂದರು.
ಈ ಸಾಧನೆ ಮಾಡಿದವರಿಗೆ ಉದ್ಯೋಗಾವಕಾಶ ಖಂಡಿತ ಸಿಗುತ್ತವೆ. ರಾಜ್ಯ ಸರ್ಕಾರದಿಂದ ಕ್ರೀಡಾಪಟುಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ.2 ರಷ್ಟು ಮೀಸಲಾತಿ ಇದೆ. ಸರಿಯಾದ ತರಬೇತಿ ಮತ್ತು ಪ್ರೋತ್ಸಾಹ ದೊರೆತರೆ ಜಿಲ್ಲೆಯ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬಹುದು. ಯುವಕರು ಹೆಚ್ಚು ಸಂಖ್ಯೆಯಲ್ಲಿ ಈ ಕ್ರೀಡೆಗೆ ಬರಬೇಕು ಎಂದರು.
ಜಿಲ್ಲಾ ಪವರ್ ಲಿಫ್ಟಿಂಗ್ ಸಂಸ್ಥೆ ಗೌರವಾಧ್ಯಕ್ಷ ಕೆ.ಎಂ. ಶ್ರೀನಿವಾಸ್ ಮಾತನಾಡಿ, ಯಾವುದೇ ಕ್ರೀಡೆಯಲ್ಲಿ ಗೆಲುವು, ಸೋಲು ಎರಡನ್ನೂ ಸಮಾನವಾಗಿ ಸ್ವೀಕರಿಸುವ ಮನೋಭಾವ ಇರಬೇಕು ಎಂದರು.
ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿದರು. ಪವರ್ ಲಿಫ್ಟಿಂಗ್‌ಗೆ ಅಗತ್ಯವಿರುವ ಪರಿಕರಗಳನ್ನು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಲಾಯಿತು. ಜಿಲ್ಲಾ ಪವರ್ ಲಿಫ್ಟಿಂಗ್ ಸಂಸ್ಥೆಯ ಪೋಷಕ ನಿರಂಜನ್‌ರಾಜ್, ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ಕೆ.ಹನುಮಂತೇಗೌಡ, ಸಹ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಉಪಾಧ್ಯಕ್ಷರಾದ ವೇಣುಗೋಪಾಲ್, ಮಂಜುನಾಥ್, ತ್ರಿಭುವನ್, ಶಶಿಧರ್, ಸಿ.ಕೆ. ರಘು, ಶಿವಮೊಗ್ಗ ಜಿಲ್ಲಾ ಪವರ್‌ಲಿಫ್ಟಿಂಗ್ ಸಂಸ್ಥೆಯ ಅಧ್ಯಕ್ಷ ಕಾರಂತ್, ಮಂಗಳೂರು ಘಟಕದ ಅಧ್ಯಕ್ಷ ಮಧುಚಂದ್ರ, ತೀರ್ಪುಗಾರರಾದ ಜಯರಾಂ, ಶಿವಣ್ಣ ಇದ್ದರು.
ಹಾಸನ ನಗರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿರುವ 2 ದಿನಗಳ ರಾಜ್ಯ ಮಟ್ಟದ ಸ್ಪರ್ಧೆಯನ್ನು ಪವರ್ ಲಿಫ್ಟಿಂಗ್ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಸತೀಶ್‌ಕುಮಾರ್ ಉದ್ಘಾಟಿಸಿದರು. ಕೆ.ಎಂ. ಶ್ರೀನಿವಾಸ್, ನಿರಂಜನ್‌ರಾಜ್, ಕೆ.ಹನುಮಂತೇಗೌಡ, ಸಂತೋಷ್ ಶೆಟ್ಟಿ, ವೇಣುಗೋಪಾಲ್ ಇತರರಿದ್ದರು.