ಸಮರ್ಪಕ ವಿದ್ಯುತ್ ದೊರೆಯದೆ ರೈತರು ಜನರೇಟರ್ ಮೊರೆ ಹೋಗಿದ್ದಾರೆ.
ನುಗ್ಗೇಹಳ್ಳಿ: ಬೇಸಿಗೆ ಆರಂಭದಲ್ಲೇ ವಿದ್ಯುತ್ ಅಭಾವ ಕಾಡುತ್ತಿದ್ದು ಶುಂಠಿ, ತೆಂಗು, ಅಡಕೆ, ಬಾಳೆ ಬೆಳೆ ಸೇರಿದಂತೆ ಕೃಷಿ ಚಟುವಟಿಕೆಗೆ ನೀರು ಪೂರೈಸಿಕೊಳ್ಳಲು ತೊಂದರೆಯಾಗಿದೆ ಎಂದು ಹೋಬಳಿಯ ರೈತರು ಆರೋಪಿಸಿದ್ದಾರೆ.
ಸಂತೆ ಶಿವರ ಪಂಚಾಯಿತಿ ವ್ಯಾಪ್ತಿಯ ಯಾಚನಘಟ್ಟ, ದುಗ್ಗೇನಹಳ್ಳಿ, ಹೊಸಳ್ಳಿ, ಗಂಜಿಗೆರೆ, ನರೇನಹಳ್ಳಿ, ರಾಂಪುರ, ಸೋಸಲಗೆರೆ ಸೇರಿದಂತೆ ಹೋಬಳಿಯ ಇತರ ಹಳ್ಳಿಗಳಲ್ಲಿ ವಿದ್ಯುತ್ ಕಣ್ಣಮುಚ್ಚಾಲೆಯಾಗಿದೆ. ರೈತರು ಲಕ್ಷಾಂತರ ರೂ. ಬಂಡವಾಳ ಹಾಕಿಕೊಂಡು ಶುಂಠಿ ಬಿತ್ತನೆ ಮಾಡಲು ಕಾಯುತ್ತಿದ್ದಾರೆ. ಮಾರ್ಚ್ ತಿಂಗಳು ಆರಂಭವಾದರೂ ಶುಂಠಿ ಬಿತ್ತನೆ ಮಾಡಲು ಆಗುತ್ತಿಲ್ಲ. 7 ಗಂಟೆ ಸಮರ್ಪಕ ವಿದ್ಯುತ್ ಕೊಡುತ್ತಿಲ್ಲ.
ದಿನ ಬಿಟ್ಟು ದಿನ ಹಗಲು ವೇಳೆ 2 ಗಂಟೆ ವಿದ್ಯುತ್ ಕೊಡುತ್ತಿದ್ದಾರೆ. ರಾತ್ರಿ ವೇಳೆ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ. ಶುಂಠಿ ಬಿತ್ತನೆ ಮಾಡಲು ಲಕ್ಷಾಂತರ ರೂ. ಬಂಡವಾಳ ಹಾಕಿಕೊಂಡಿರುವ ರೈತರು ಜನರೇಟರ್ ಮೊರೆ ಹೋಗಬೇಕಾದ ಸ್ಥಿತಿ ಬಂದೊದಗಿದೆ ಎಂದು ರೈತ ಮುಖಂಡ ಮುನಿಯಮ್ಮನ ಪಾಳ್ಯದ ಪ್ರಭಾಕರ್ ಆರೋಪಿಸಿದ್ದಾರೆ.
ಈ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿದ ಸೆಸ್ಕ್ ಸಹಾಯಕ ಇಂಜಿನಿಯರ್ ಮಹದೇವ್, ಸಂತೆ ಶಿವರ ಗ್ರಾಮ ಪಂಚಾಯಿತಿ ಭಾಗದ ಹಳ್ಳಿಗಳಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ಸಮಸ್ಯೆ ಉಂಟಾಗಿ ಲೈನ್ ನಿಲ್ಲುತ್ತಿಲ್ಲ. ಬೇರೆ ಮಾರ್ಗದಿಂದ ವಿದ್ಯುತ್ ಪೂರೈಕೆ ಮಾಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.