ಕಾಫಿ ತೋಟಗಳಲ್ಲಿ ಕಳ್ಳತನ ತಡೆಗಟ್ಟುವಂತೆ ಆಗ್ರಹಿಸಿ ಪೊಲೀಸ್ ವೃತ್ತ ನಿರೀಕ್ಷಕ ಜಗದೀಶ್‌ಗೆ ಕಾಫಿ ಬೆಳೆಗಾರರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.  
ಹಾಸನ

ಬೇಲೂರು ತಾಲೂಕಿನಲ್ಲಿ ರಾತ್ರಿ ಪೊಲೀಸ್ ಗಸ್ತು ಹೆಚ್ಚಿಸಿ

ಪ್ರಮುಖ ಮುಖ್ಯಾಂಶಗಳು

  • ಕಾಫಿ ಬೆಳೆಗಾರರ ಸಂಘದ ಪದಾಧಿಕಾರಿಗಳ ಆಗ್ರಹ
  • ಪೊಲೀಸ್ ವೃತ್ತ ನಿರೀಕ್ಷಕರಿಗೆ ಮನವಿ ಪತ್ರ ಸಲ್ಲಿಕೆ
  • ತೋಟಗಳಲ್ಲಿ ಕಾಫಿ ಕಳ್ಳತನ ಹೆಚ್ಚಳ ಹಿನ್ನೆಲೆ
ಬೇಲೂರು: ತಾಲೂಕಿನ ತೋಟಗಳಲ್ಲಿ ಕಾಫಿ ಕಳ್ಳತನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ ಸಮಯ ಹೆಚ್ಚಿನ ಪೊಲೀಸ್ ಸಿಬ್ಬಂದಿ ನೇಮಿಸಿ ಬೀಟ್ ಮಾಡಿಸುವಂತೆ ಒತ್ತಾಯಿಸಿ ತಾಲೂಕು ಕಾಫಿ ಬೆಳೆಗಾರರ ಸಂಘದ ಪದಾಧಿಕಾರಿಗಳು ಪೊಲೀಸ್ ವೃತ್ತ ನಿರೀಕ್ಷಕ ಜಗದೀಶ್‌ಗೆ ಸೋಮವಾರ ಮನವಿ ಪತ್ರ ಸಲ್ಲಿಸಿದರು.
ಕಾಫಿ ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಅದ್ದೂರಿ ಕುಮಾರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಬೇಲೂರು ತಾಲೂಕಿನ ವಿವಿಧ ಗ್ರಾಮಗಳ ಕಾಫಿ ತೋಟಗಳಲ್ಲಿ ಮತ್ತು ಮನೆಯ ಆವರಣದಲ್ಲಿ ಒಣಗಲು ಹಾಕಿದ್ದ ಕಾಫಿ ಮತ್ತು ಗೋಡೌನ್‌ಗಳಲ್ಲಿ ಇಟ್ಟಿದ್ದ ಕಾಫಿ ಕಳ್ಳತನ ಹೆಚ್ಚಾಗುತ್ತಿದೆ. ಈ ಬಗ್ಗೆ ಹಲವಾರು ಬಾರಿ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಆದರೆ ಈಗಂತೂ ಎಲ್ಲಿ ನೋಡಿದರೂ ಕಾಫಿ ಕಳ್ಳತನವಾಗುತ್ತಿರುವುದರಿಂದ ಮತ್ತೊಮ್ಮೆ ಮನವಿ ಪತ್ರ ಸಲ್ಲಿಸಿ ರಾತ್ರಿ ಬೀಟ್ ಹೆಚ್ಚಿಸುವಂತೆ ಹಾಗೂ ಕೆಲವೊಂದು ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವಂತೆ ಮತ್ತು ಕಾಡಾನೆ ಸಮಸ್ಯೆ ಬಗೆಯೂ ಗಮನ ಹರಿಸುವಂತೆ ಮನವಿ ಮಾಡಿದರು.
ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಪೊಲೀಸ್ ವೃತ್ತ ನಿರೀಕ್ಷಕ ಜಗದೀಶ್, ಅರೇಹಳ್ಳಿ ಹೋಬಳಿಯ ತೋಟಗಳಲ್ಲಿ ಕಾಫಿ ಕಳ್ಳತನದ ಬಗ್ಗೆ ಈಗಾಗಲೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ತನಿಖೆ ಕೈಗೊಂಡಿದ್ದೇವೆ. ಜತೆಗೆ ಬೀಟ್ ಪೊಲೀಸರನ್ನು ನೇಮಿಸಿ ಇನ್ನಷ್ಟು ಹೆಚ್ಚಿನ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಕಾಫಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಗೋವಿಂದಶೆಟ್ಟಿ, ಬೆಳೆಗಾರರಾದ ಬಿರಟೆಮನೆ ಸುರೇಶ್, ಶಿವೇಗೌಡ ಇದ್ದರು.