ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಾಂಸ್ಕೃತಿಕ ಸಮಿತಿ ವತಿಯಿಂದ ಪತ್ರಕರ್ತರ ಭವನದಲ್ಲಿ ಮನೆ-ಮನೆ ಕವಿಗೋಷ್ಠಿ ನಡೆಯಿತು. ಶಿವಾನಂದ ತಗಡೂರು, ಎಚ್.ಬಿ.ಮದನಗೌಡ, ಜೆ.ಆರ್.ಕೆಂಚೇಗೌಡ, ಸುಕನ್ಯಾ ಮುಕುಂಡ ಇತರರಿದ್ದರು.
- ನಿರಂತರ ಬರವಣಿಗೆಯಿಂದ ಕಾವ್ಯ ಸೃಷ್ಟಿ ಸಾಧ್ಯ
- ಶಿವಾನಂದ ತಗಡೂರು ಅಭಿಪ್ರಾಯ
- ಮನೆ-ಮನೆ ಕವಿಗೋಷ್ಠಿ
ಹಾಸನ: ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಕವಿತೆ, ಕಾದಂಬರಿಗಳ ವಿಮರ್ಶೆಯಾಗದೆ ಬರಹಗಾರರ ಬೆಳವಣಿಗೆಗೆ ಪ್ರೋತ್ಸಾಹ ಇಲ್ಲದಂತಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮನೆ-ಮನೆ ಕವಿಗೋಷ್ಠಿ ಎರಡು ದಶಕಗಳಿಂದ ಸಾಹಿತ್ಯ ಕೃಷಿ ಮಾಡಿಕೊಂಡು ಬಂದಿರುವುದು ಶ್ಲಾಘನೀಯ ಎಂದು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಾಂಸ್ಕೃತಿಕ ಸಮಿತಿ ವತಿಯಿಂದ ಪತ್ರಕರ್ತರ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮನೆ-ಮನೆ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲರನ್ನೂ ಕವಿ, ಪತ್ರಕರ್ತ, ಸಾಹಿತಿ ಎನ್ನಲು ಸಾಧ್ಯವಿಲ್ಲ. ನಿರಂತರ ಬರವಣಿಗೆಯಿಂದ ಕಾವ್ಯ ಸೃಷ್ಟಿಯಾಗುತ್ತದೆ. ಪತ್ರಕರ್ತರಲ್ಲಿ ಕವಿ ಹೃದಯ ಇರುತ್ತದೆ. ಅನಕೃ, ಪದಶ್ರೀ ಪ್ರಶಸ್ತಿ ಪುರಸ್ಕೃತ ರಾಜಾರಾಮನ್, ಎಸ್.ಎಲ್.ಭೈರಪ್ಪ ಸೇರಿ ಅನೇಕರು ಕವಿ ಭಾವನೆಯಿಂದಲೇ ಸಾಹಿತ್ಯ ಕ್ಷೇತ್ರದಲ್ಲಿ ಅಪರಿಮಿತ ಸಾಧನೆ ಮಾಡಿದ್ದಾರೆ ಎಂದರು.
ಇತ್ತೀಚೆಗೆ ವಾಟ್ಸ್‌ಆ್ಯಪ್ ವಿಶ್ವವಿದ್ಯಾಲಯ ಪ್ರವೃತ್ತಿ ಹೆಚ್ಚಿದೆ. ಕವನವನ್ನು ವಿಮರ್ಶಿಸಿ ಮಾರ್ಗದರ್ಶನ ಮಾಡುವ ಕಾರ್ಯಾಗಾರಗಳು ಆಗಬೇಕು. ಫೇಸ್‌ಬುಕ್‌ನಲ್ಲಿ ಲೈಕ್ ಗಳಿಸುವುದಕ್ಕಷ್ಟೇ ಕವಿತೆಗಳು ಸೀಮಿತವಾಗಬಾರದು. ಪ್ರತಿಭಾನ್ವಿತರಿಗೆ ವೇದಿಕೆ ಮಾಡಿಕೊಡುವ ಕೆಲಸ ಕವಿಗೋಷ್ಠಿಯಿಂದ ಆಗಬೇಕೆಂದು ಸಲಹೆ ನೀಡಿದರು.
ನಾವು ಸಾಮಾಜಿಕ ಬದ್ಧತೆ ಹಿನ್ನೆಲೆಯಲ್ಲಿ ಬರೆಯಬೇಕು. ದೇಶ ಕಟ್ಟುವಲ್ಲಿ ಕವಿಗಳು, ಪತ್ರಕರ್ತರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಆ ಕಾಲಘಟ್ಟದಿಂದ ನಡೆದುಕೊಂಡು ಬಂದಿರುವ ಪರಂಪರೆ ಉಳಿಸಿಕೊಳ್ಳುವ ಸವಾಲು ನಮೆಲ್ಲರ ಮುಂದಿದೆ ಎಂದರು.
ಹಾಸನದಲ್ಲಿ ಮನೆ ಮನೆ ಕವಿಗೋಷ್ಠಿಗೆ ಸುದೀರ್ಘ ಇತಿಹಾಸವಿದೆ. ಆಕಾಶವಾಣಿಯಲ್ಲಿ ನಿರ್ದೇಶಕರಾಗಿದ್ದ ವಸಂತಕುಮಾರ್, ದಿ.ಜೈಕುಮಾರ್ ಚಿಂತನೆಯಿಂದ ಶುರುವಾದ ಕವಿಗೋಷ್ಠಿ 20 ವರ್ಷ ಪೂರೈಸಿದೆ. ಚಿಕ್ಕದಾಗಿ ಶುರುವಾದ ಕವಿಗೋಷ್ಠಿ ಇಂದು ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಹಲವಾರು ಜನರಿಗೆ ವೇದಿಕೆ ಕಲ್ಪಿಸಿಕೊಟ್ಟ ಮನೆ ಮನೆ ಕವಿಗೋಷ್ಠಿ ಬೆಳೆದು ಬಂದ ದಾರಿಯನ್ನು ಪುಸ್ತಕ ರೂಪದಲ್ಲಿ ದಾಖಲಿಸಬೇಕೆಂದು ಸಲಹೆ ನೀಡಿದರು.
ಮನೆ ಮನೆ ಕವಿಗೋಷ್ಠಿ ಸಂಚಾಲಕಿ ಸುಕನ್ಯಾ ಮುಕುಂಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಮಲಮ್ಮ ಅವರ ಕಾಲವೆಂಬ ಕನ್ನಡಿಯಲ್ಲಿ ಕೃತಿಯನ್ನು ಲೇಖಕ ಉಮೇಶ್ ಹೊಸಳ್ಳಿ ಪರಿಚಯ ಮಾಡಿಕೊಟ್ಟರು. ವೇದಿಕೆ ಕಾಯಕ್ರಮದ ಬಳಿಕ ಕವಿತೆ ವಾಚನ ನೆರವೇರಿತು.
ಜೆ.ಆರ್.ಕೆಂಚೇಗೌಡ, ಎಚ್.ಬಿ.ಮದನಗೌಡ, ರವಿ ನಾಕಲಗೂಡು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಉದಯರವಿ, ಲೀಲಾವತಿ, ಚಲಂ, ಬಿ.ಆರ್.ಬೊಮೇಗೌಡ ಇತರರು ಇದ್ದರು.