ಹಾಸನದ ಬೀರನಹಳ್ಳಿ ಕೆರೆ ಪ್ರದೇಶ ಹಾಗೂ ಅರಕಲಗೂಡು ತಾಲೂಕಿನ ಅಬ್ಬೂರು ಮಾಚಗೌಡನಹಳ್ಳಿಯಲ್ಲಿ ಹಕ್ಕುಪತ್ರ ಪಡೆದಿರುವವರಿಗೆ ನಿವೇಶನ ಹಂಚಿಕೆ ಮಾಡುವಂತೆ ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ್ದರು. ಬಾಬು, ವಿಠ್ಠಲ, ಗಂಗಾಧರ್, ಅಶೋಕ್ ಇತರರಿದ್ದರು.
- ಹಕ್ಕುಪತ್ರ ಪಡೆದವರಿಗೆ ಶೀಘ್ರವೇ ನಿವೇಶನ ಹಂಚಿಕೆ
- ಡಿಸಿ ಕೆ.ಎಸ್. ಲತಾಕುಮಾರಿ ಭರವಸೆ
- ರೈತರ ಒತ್ತಡಕ್ಕೆ ಮಣಿದ ಜಿಲ್ಲಾಡಳಿತ
ಹಾಸನ: ಹಲವು ವರ್ಷಗಳಿಂದ ಹಕ್ಕುಪತ್ರ ಪಡೆದರೂ ನಿವೇಶನವನ್ನು ತಮ್ಮಂತೆ ಮಾಡಿಕೊಳ್ಳಲಾಗದೆ ತೊಂದರೆಪಡುತ್ತಿದ್ದ ಕುಟುಂಬಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ನಗರದ ಬೀರನಹಳ್ಳಿ ಕೆರೆ ಪ್ರದೇಶ ಹಾಗೂ ಅರಕಲಗೂಡು ತಾಲೂಕಿನ ಅಬ್ಬೂರು ಮಾಚಗೌಡನಹಳ್ಳಿಯಲ್ಲಿ ಹಕ್ಕುಪತ್ರ ಪಡೆದಿರುವವರಿಗೆ ನಿವೇಶನ ಹಂಚಿಕೆ ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದು, ಶೀಘ್ರ ಸಮಸ್ಯೆ ಬಗೆಹರಿಸುವ ಭರವಸೆಯನ್ನು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ನೀಡಿದ್ದಾರೆ.
ಡಿಸಿ ಕಚೇರಿ ಸಭಾಂಗಣದಲ್ಲಿ ಸಂತ್ರಸ್ತರ ಪರವಾಗಿ ರೈತ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ನಡೆದ ವಿಡಿಯೋ ಸಂವಾದದಲ್ಲಿ ಈ ಭರವಸೆ ಸಿಕ್ಕಿದೆ.
ರೈತ ಸಂಘದ ಜಿಲ್ಲಾಧ್ಯಕ್ಷ ಬಾಬು ಮಾತನಾಡಿ, 2007ರಲ್ಲಿ ನಗರದ ರಾಘವೇಂದ್ರ ಕಾಲನಿ ವ್ಯಾಪ್ತಿಯ ಬೀರನಹಳ್ಳಿ ಕೆರೆ ಪ್ರದೇಶದಲ್ಲಿ ವಾಸವಾಗಿದ್ದ ಸುಮಾರು 73 ಕುಟುಂಬಗಳನ್ನು ತೆರವುಗೊಳಿಸಲಾಗಿತ್ತು. ಆಗ ಆಶ್ರಯ ಯೋಜನೆಯಡಿ ಕೃಷ್ಣಾನಗರ ಪ್ರದೇಶದಲ್ಲಿ ನಿವೇಶನ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ, 18 ವರ್ಷ ಕಳೆದರೂ ಹಾಸನ ನಗರಾಭಿವೃದ್ಧಿ ಪ್ರಾಧಿಕಾರ ನಿವೇಶನ ಹಂಚದ ಕಾರಣ, ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಅನೇಕರು ಬಾಡಿಗೆ ಮನೆಗಳಲ್ಲಿ ಜೀವನ ಸಾಗಿಸುತ್ತಿದ್ದು, ಕೆಲವರು ತಾತ್ಕಾಲಿಕ ಶೆಡ್‌ಗಳಲ್ಲಿ ನೆಲೆಸಿದ್ದಾರೆ ಎಂದು ವಿವರಿಸಿದರು.
ಸಮಸ್ಯೆ ಪರಿಹರಿಸುವಂತೆ ಹಲವು ವರ್ಷಗಳಿಂದ ನಾನಾ ಸಂಘಟನೆಗಳು, ಸ್ಥಳೀಯರು ಹಾಗೂ ಸಂತ್ರಸ್ತರು ಅನೇಕ ಬಾರಿ ಪ್ರತಿಭಟನೆ ಮಾಡಿದ್ದರೂ ಪರಿಹಾರ ಸಿಕ್ಕಿಲ್ಲ. ಇದೀಗ ಕೆ.ಎಸ್.ಲತಾಕುಮಾರಿ ಅವರ ಗಮನಕ್ಕೆ ತಂದಾಗ ಅವರು ತಕ್ಷಣ ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆದು ವಾಸ್ತವ ಸ್ಥಿತಿ ಪರಿಶೀಲನೆ ನಡೆಸಿದ್ದಾರೆ. ಸಭೆಯಲ್ಲಿ ಎಲ್ಲವನ್ನೂ ಪರಿಶೀಲಿಸಿರುವ ಡಿಸಿ ಅವರು, ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ತ್ವರಿತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. 15 ದಿನಗಳೊಳಗೆ ಸಮಸ್ಯೆ ಬಗೆಹರಿಸುವ ಭರವಸೆ ಡಿಸಿ ಅವರಿಂದ ಸಿಕ್ಕಿದೆ ಎಂದು ರೈತ ಮುಖಂಡರು ಮಾಹಿತಿ ನೀಡಿದರು.
ಹಾಗೆಯೇ ಅಬ್ಬೂರು ಮಾಚಗೌಡನಹಳ್ಳಿಯಲ್ಲೂ ಇದೇ ರೀತಿಯ ಸಮಸ್ಯೆ ಎದುರಾಗಿದ್ದು, ಅಲ್ಲೂ ಕೂಡ ಹಕ್ಕುಪತ್ರ ಪಡೆದ ಹಲವು ಕುಟುಂಬಗಳು ನಿವೇಶನಕ್ಕಾಗಿ ಕಾಯುತ್ತಿವೆ. ಕಟ್ಟಿದ್ದ ಮನೆಗಳನ್ನು ತೆರವುಗೊಳಿಸಲಾಗಿದೆ. ಈ ವಿಚಾರವನ್ನೂ ಸಭೆಯಲ್ಲಿ ಪ್ರಸ್ತಾಪಿಸಲಾಗಿದ್ದು, ಸಮಸ್ಯೆಯನ್ನು ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಅಗತ್ಯ ದಾಖಲೆ ಪರಿಶೀಲಿಸಿ ಶೀಘ್ರ ಪರಿಹಾರ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಇದರಿಂದಾಗಿ ವರ್ಷಗಳ ಕಾಲ ಅನಿಶ್ಚಿತತೆಯಲ್ಲಿ ಬದುಕುತ್ತಿದ್ದ ಕುಟುಂಬಗಳಿಗೆ ಜಿಲ್ಲಾಡಳಿತದ ಈ ಭರವಸೆ ಹೊಸ ನಿರೀಕ್ಷೆ ಮೂಡಿಸಿದೆ. ಸರ್ಕಾರ ನೀಡಿದ ಹಕ್ಕುಪತ್ರಕ್ಕೆ ಅರ್ಥ ಸಿಗಬೇಕು. ನಮ್ಮ ಮಕ್ಕಳಿಗೆ ಶಾಶ್ವತ ನೆಲೆ ಸಿಗಬೇಕು ಎಂಬುದು ಫಲಾನುಭವಿಗಳ ಆಶಯವಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಅವರು ಮಧ್ಯೆ ಪ್ರವೇಶದಿಂದ ದೀರ್ಘಕಾಲದ ಸಮಸ್ಯೆಗೆ ಅಂತ್ಯ ಸಿಗುವ ವಿಶ್ವಾಸ ವ್ಯಕ್ತವಾಗಿದ್ದು, ಮುಂದಿನ ದಿನಗಳಲ್ಲಿ ನಿವೇಶನ ಹಂಚಿಕೆ ಪ್ರಕ್ರಿಯೆ ವೇಗ ಪಡೆಯುವ ನಿರೀಕ್ಷೆ ಮೂಡಿದೆ.
ಈ ವೇಳೆ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ವಿಠ್ಠಲ, ತಾಲೂಕು ಅಧ್ಯಕ್ಷ ಗಂಗಾಧರ್, ಅಶೋಕ್, ಪುಟ್ಟರಾಜು, ಕಾಳಕ್ಕ, ಪವಿತ್ರಾ, ಪುಟ್ಟಸ್ವಾಮಿ, ಅಕ್ಮಲ್ ಪಾಷ, ಕಾಂತರಾಜು ಇದ್ದರು.