ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳ ರಾಶಿ
ಚನ್ನರಾಯಪಟ್ಟಣ: ಪರಿಸರಕ್ಕೆ ಮಾರಕವಾಗುವ ಏಕಬಳಕೆಯ ಪ್ಲಾಸ್ಟಿಕ್‌ಗೆ ಸರ್ಕಾರದಿಂದ ಕಟ್ಟುನಿಟ್ಟಿನ ನಿಷೇಧವಿದ್ದು, ಪುರಸಭಾ ಹಾಗೂ ಪರಿಸರ ಅಧಿಕಾರಿಗಳು ಎಚ್ಚರಿಕೆ ವಹಿಸಿದ್ದರೂ ಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಕೆ ಎಗ್ಗಿಲ್ಲದೆ ನಡೆಯುತ್ತಿದೆ.
ಎಲ್ಲ ರೀತಿಯ ಏಕಬಳಕೆಯ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಷೇಧಿಸಿ ಹೊರಡಿಸಿರುವ ಆದೇಶವೂ ಆದೇಶಕ್ಕಷ್ಟೇ ಸೀಮಿತವಾಗಿದೆ. ನಿತ್ಯ ಕಸ ಸಂಗ್ರಹಿಸುವ ವಾಹನಗಳಲ್ಲಿ ಧ್ವನಿವರ್ಧಕಗಳಲ್ಲಿ ಈ ಬಗ್ಗೆ ಪ್ರಚಾರ ಮಾಡಲಾಗುತ್ತಿದೆ. ಆದರೂ ನಿಷೇಧ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬಂದಿಲ್ಲ.
ಪುರಸಭೆ ಅಧಿಕಾರಿಗಳು ಕೆಲವೆಡೆ ಮಾರುಕಟ್ಟೆ ಸೇರಿದಂತೆ ಅಂಗಡಿ ಮುಂಗಟ್ಟು, ಫಾಸ್ಟ್‌ಫುಡ್‌ಗಳಿಗೆ ತೆರಳಿ ಎಚ್ಚರಿಕೆ ನೀಡಿದ್ದಾರೆ. ಪುರಸಭೆಯ ಪರಿಸರ ಇಂಜಿನಿಯರ್ ಸೇರಿದಂತೆ ಸಿಬ್ಬಂದಿ ಅಲ್ಲಲ್ಲಿ ಅಂಗಡಿಗಳ ಮೇಲೆ ದಾಳಿ ಮಾಡಿ ಪ್ಲಾಸ್ಟಿಕ್ ಕವರ್, ಲೋಟ, ತಟ್ಟೆಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಅಲ್ಲಲ್ಲಿ ದಂಡ ವಸೂಲು ಮಾಡುತ್ತಿದ್ದಾರೆ. ಆದರೂ ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಂತಿಲ್ಲ.
ಅನೇಕ ಅಂಗಡಿಗಳು, ಹೋಟೆಲ್‌ಗಳು, ರಸ್ತೆಬದಿ ಕ್ಯಾಂಟೀನ್‌ಗಳಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳನ್ನು ಎಗ್ಗಿಲ್ಲದೆ ಬಳಸಲಾಗುತ್ತಿದೆ. ಪುರಸಭಾ ಅಧಿಕಾರಿಗಳು ಪಟ್ಟಣದ ಬೆರಳೆಣಿಕೆ ಅಂಗಡಿಗಳಲ್ಲಿ ಮಾತ್ರ ನಿಷೇಧಿತ ಪ್ಲಾಸ್ಟಿಕ್ ಮಾರಾಟ, ಬಳಕೆಯ ಬಗ್ಗೆ ನಿಗಾ ವಹಿಸಿದ್ದಾರೆ ಎಂಬುದು ಪರಿಸರ ಪ್ರೇಮಿಗಳ ಆರೋಪ.
ಪಟ್ಟಣದ ಬಹುತೇಕ ಕಲ್ಯಾಣ ಮಂಟಪಗಳಲ್ಲಿ ಪ್ಲಾಸ್ಟಿಕ್ ಬಳಕೆ ಅಡ್ಡಿ ಇಲ್ಲದೆ ನಡೆಯುತ್ತಿದೆ. ಊಟದ ಟೇಬಲ್ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆ, ಐಸ್‌ಕ್ರೀಮ್ ತಿನ್ನುವ ಪ್ಲಾಸ್ಟಿಕ್ ಚಮಚ, ಪಾನಿಪುರಿ ಮಾರಾಟದ ಗಾಡಿಗಳಲ್ಲಿ ಪ್ಲಾಸ್ಟಿಕ್ ಚಮಚಗಳನ್ನು ಈಗಲೂ ನೀಡಲಾಗುತ್ತಿದೆ. ಹಣ್ಣು, ತರಕಾರಿ ಅಂಗಡಿಗಳು, ಮಾರುಕಟ್ಟೆ ಇನ್ನಿತರ ಕಡೆ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳನ್ನು ನೀಡಲಾಗುತ್ತಿದೆ. ಮಧ್ಯದಂಗಡಿಗಳಲ್ಲಿ ಪ್ಲಾಸ್ಟಿಕ್ ಲೋಟಗಳ ಬಳಕೆ ನಿಂತಿಲ್ಲ.
ಈಗಾಗಲೇ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಮಾರಾಟದ ಅಂಗಡಿಗಳ ಮೇಲೆ ಸಾಕಷ್ಟು ದಾಳಿ ನಡೆಸಿದ್ದೇವೆ. ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಭಾರಿ ಪ್ರಮಾಣದಲ್ಲಿ ವಶಪಡಿಸಿಕೊಂಡಿದ್ದೇವೆ. ಪ್ಲಾಸ್ಟಿಕ್ ಮಾರಾಟ ಮತ್ತು ಬಳಕೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದೇವೆ. ಮುಂದೆಯೂ ಅದನ್ನು ತೀವ್ರಗೊಳಿಸುತ್ತೇವೆ ಎನ್ನುತ್ತಾರೆ ಪುರಸಭಾ ಅಧಿಕಾರಿಗಳು.
ಹೀಗಿದ್ದರೂ ಪಟ್ಟಣದ ಅನೇಕ ಕಡೆ ಕಸದ ತೊಟ್ಟಿಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳ ರಾಶಿಯೇ ಕಂಡು ಬರುತ್ತಿದೆ. ಮನೆ ಮನೆಗಳಲ್ಲಿ ಕಸ ಸಂಗ್ರಹಿಸುವವರಿಗೆ ಸಾರ್ವಜನಿಕರು ಪ್ಲಾಸ್ಟಿಕ್ ಚೀಲಗಳಲ್ಲಿಯೇ ಕಸ ತುಂಬಿ ಕೊಡುತ್ತಿದ್ದಾರೆ.
ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳು, ದೈನಂದಿನ ಬಳಕೆಯಲ್ಲಿರುವ ಇತರ ಪ್ಲಾಸ್ಟಿಕ್ ವಸ್ತುಗಳು ಅಲ್ಪಾವಧಿ ಹಾಗೂ ದೀರ್ಘಾವಧಿಯಲ್ಲಿ ಪರಿಸರ ಹಾಗೂ ಜನ-ಜಾನುವಾರುಗಳ ಆರೋಗ್ಯಕ್ಕೆ ಹಾನಿ ಉಂಟು ಮಾಡಲಿದೆ. ಪ್ಲಾಸ್ಟಿಕ್ ತ್ಯಾಜ್ಯ, ಚರಂಡಿ ಮತ್ತು ಒಳಚರಂಡಿಗಳ ನೀರು ಸರಾಗ ಹರಿವಿಗೆ ತಡೆ ಉಂಟು ಮಾಡಿ, ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗುತ್ತಿದೆ.
ಪಟ್ಟಣದಾದ್ಯಂತ ಏಕ ಬಳಕೆ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಬಟ್ಟೆ ಚೀಲ ಅಥವಾ ಪೇಪರ್ ಚೀಲಗಳನ್ನು ಮಾತ್ರ ಬಳಸಲು ನಾಗರಿಕರು ಹಾಗೂ ವ್ಯಾಪಾರಿಗಳಲ್ಲಿ ಹೆಚ್ಚಾಗಿ ಅರಿವು ಮೂಡಿಸಬೇಕಿದೆ.