ಚನ್ನರಾಯಪಟ್ಟಣ ತಾಲೂಕಿನ ಕುಂದೂರಿನ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಶ್ರೀ ಸುಬ್ರಹ್ಮಣ್ಯೇಶ್ವರ ಜಾತ್ರಾ ಮಹೋತ್ಸವಕ್ಕೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಿದರು.
- ಶ್ರೀ ಆದಿಚುಂಚನಗಿರಿ ಮಠದ ಪೀಠಾಧಿಪತಿ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿಕೆ
ಚನ್ನರಾಯಪಟ್ಟಣ: ಇಂದಿನ ಒತ್ತಡದ ಜೀವನದಲ್ಲಿ ದೇವರು ಮತ್ತು ಧರ್ಮದ ಮಾರ್ಗದಲ್ಲಿ ಸಾಗುವುದರಿಂದ ಮಾತ್ರ ಮನಸ್ಸಿಗೆ ಶಾಂತಿ, ನೆಮ್ಮದಿ ಲಭಿಸಲಿದೆ ಎಂದು ಶ್ರೀ ಆದಿಚುಂಚನಗಿರಿ ಮಠದ ಪೀಠಾಧಿಪತಿ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಶ್ರೀ ಕುಂದೂರು ಗ್ರಾಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಿಂದ ಆಯೋಜಿಸಿದ್ದ ಸುಬ್ರಹ್ಮಣ್ಯ ಸ್ವಾಮಿ ಷಷ್ಠಿ ಜಾತ್ರಾ ಮಹೋತ್ಸವಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದ ಶ್ರೀಗಳು, ಕರ್ಮ, ಭಕ್ತಿ ಮತ್ತು ಜ್ಞಾನವಿದ್ದಲ್ಲಿ ವ್ಯಕ್ತಿಯಾದವನು ಶಕ್ತಿಯಾಗಿ ಪರಿಣಮಿಸುತ್ತಾನೆ. ದೇವತಾ ಕಾರ್ಯಗಳ ಆಚರಣೆಯೊಂದಿಗೆ ಗುರು ಹಿರಿಯರನ್ನು ಭಕ್ತಿಭಾವದಿಂದ ಕಾಣುವುದರಿಂದ ಶ್ರದ್ಧೆ ಹೆಚ್ಚುತ್ತದೆ. ಶ್ರದ್ಧೆಯಿಂದ ಜ್ಞಾನ ಲಭಿಸುತ್ತದೆ. ಶ್ರದ್ಧೆ, ಜ್ಞಾನದಿಂದ ಕೂಡಿರುವ ಮನಸ್ಸನ್ನು ಮಲಿನವಾಗದಂತೆ ನೋಡಿಕೊಳ್ಳಲು ದೇವರ ಆರಾಧನೆ ಮುಖ್ಯವಾಗುತ್ತದೆ ಎಂದರು.
ಧರ್ಮದ ಮಾರ್ಗದಲ್ಲಿ ನಡೆದರೆ ಮಾತ್ರ ಮನಸ್ಸಿಗೆ ಶಾಂತಿ ದೊರಕುತ್ತದೆ ಎಂದು ನಮ್ಮ ಪೂರ್ವಜರು ನಂಬಿದ್ದರಿಂದಲೇ ಗುಡಿಗೋಪುರಗಳು ನಿರ್ಮಾಣವಾದವು. ಆದ್ದರಿಂದ ನಮ್ಮ ಮನಸ್ಸು ಹಾಗೂ ಆತ್ಮಸಾಕ್ಷಿ ಒಪ್ಪುವ ಜನಪರ ಕೆಲಸಗಳನ್ನು ಮಾಡುತ್ತ ಫಲಾಫಲವನ್ನು ಭಗವಂತನಿಗೆ ಬಿಡಬೇಕು. ಮನುಷ್ಯ ಜನ್ಮ ಅತ್ಯುತ್ತಮವಾಗಿದ್ದು ಪುಣ್ಯ ಕಾರ್ಯಗಳನ್ನು ಮಾಡುವುದರಿಂದ ವ್ಯಕ್ತಿಯಾದವನು ದೇವರ ಸ್ಥಾನ ತುಂಬಬಹುದು. ನಿಸ್ವಾರ್ಥ ಸೇವೆಯಿಂದ ಬದುಕು ಪ್ರಾರಂಭವಾಗಿ ಅಪೇಕ್ಷೆ ಇಟ್ಟುಕೊಳ್ಳದೆ ಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ರಥೋತ್ಸವದ ನಂತರ ಶ್ರೀಗಳು ಅನ್ನದಾಸೋಹಕ್ಕೆ ಪೂಜೆ ಸಲ್ಲಿಸಿ ನಂತರ ಶ್ರೀಗಳಿಂದ ಭಕ್ತರು ಪ್ರಸಾದ ಪಡೆದರು. ಶ್ರೀ ಮಠದ ಹಾಸನ ಮತ್ತು ಕೊಡಗು ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿ, ಸತ್ಕೀರ್ತಿನಾಥ ಸ್ವಾಮೀಜಿ, ಶ್ರೀ ಶೈಲನಾಥ ಸ್ವಾಮೀಜಿ, ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ, ಉದ್ಯಮಿ ರಾಜೇಗೌಡ ಇತರರಿದ್ದರು.