ಸಕಲೇಶಪುರ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಶಾಸಕ ಸಿಮೆಂಟ್ ಮಂಜು. ಲೋಹಿತ್ ಕೌಡಳ್ಳಿ, ರಮೇಶ್, ಮಂಜುನಾಥ್ ಇದ್ದರು.
ಸಕಲೇಶಪುರ: ಒಂದು ಆಟದ ಮೈದಾನ ಹತ್ತು ಆಸ್ಪತ್ರೆಗಳಿಗೆ ಸಮ. ಆದ್ದರಿಂದ ಪ್ರತಿಯೊಂದು ಗ್ರಾಮದಲ್ಲೂ ಆಟದ ಮೈದಾನಗಳಿರುವುದು ಅಗತ್ಯ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಶನಿವಾರ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಕ್ರೀಡೆ ಬದುಕಿನ ಅವಿಭಾಜ್ಯ ಅಂಗ. ಕ್ರೀಡೆಯಲ್ಲಿ ಸೋಲು ಹಾಗೂ ಗೆಲವು ಸಾಮಾನ್ಯ. ವಿದ್ಯಾರ್ಥಿ ದೆಸೆಯಲ್ಲಿ ಮಾತ್ರ ಕ್ರೀಡೆಯಲ್ಲಿ ತೊಡಗಿಕೊಳ್ಳದೆ ಬದುಕಿನ ಎಲ್ಲ ಹಂತಗಳಲ್ಲೂ ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ರೋಗಮುಕ್ತ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದರು.
ಇಂದು ವಿದ್ಯಾಭ್ಯಾಸದಿಂದ ಮಾತ್ರ ಸಾಧನೆ ಮಾಡಬಹುದು ಎಂಬುದು ಸುಳ್ಳು. ಕ್ರೀಡೆ ಸೇರಿದಂತೆ ಎಲ್ಲ ರಂಗಗಳಲ್ಲೂ ಸಾಧನೆ ಮಾಡಲು ಅವಕಾಶವಿದೆ. ದೇಶದಲ್ಲಿ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಕ್ರೀಡೆಗೆ ಹೆಚ್ಚಿನ ಉತ್ತೇಜನ ನೀಡುತ್ತಿದ್ದು, ಅಂತಾರಾಷ್ಟ್ರಿಯ ಕ್ರೀಡೆಗಳಲ್ಲಿ ಭಾರತದ ಕ್ರೀಡಾಪಟುಗಳು ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ. ಆದ್ದರಿಂದ ಕಠಿಣ ಪರಿಶ್ರಮ ಪಟ್ಟರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂದರು.
ಬಿಜೆಪಿ ಮುಖಂಡ ಲೋಹಿತ್ ಕೌಡಳ್ಳಿ, ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನ ಪ್ರಾಂಶುಪಾಲ ರಮೇಶ್, ಜೆಎಸ್‌ಎಸ್ ಪದವಿ ಪೂರ್ವ ಕಾಲೇಜಿನ ಅಧೀಕ್ಷಕ ಮಂಜುನಾಥ್ ಮುಂತಾದವರಿದ್ದರು.