ಬಾಲ್ಯ ನ್ಯಾಯ, ಪೋಕ್ಸೋ ಹಾಗೂ ಮಕ್ಕಳ ಸಂರಕ್ಷಣಾ ಯೋಜನೆ ಕುರಿತು ಬುಧವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಡಿಸಿ ಲತಾ ಕುಮಾರಿ ಮಾತನಾಡಿದರು. ಚಂದ್ರಮೌಳಿ, ವೆಂಕಟೇಶ್, ಕೆ.ಆರ್.ಅನುಪಮಾ, ಕೆ.ಜಿ.ದಿಲೀಪ್, ಕಾಂತರಾಜ್ ಇತರರು ಇದ್ದರು. 
ಹಾಸನ

ಪಾಲಕರು ಹೆಣ್ಣು ಮಕ್ಕಳಿಗೆ ಸುಂದರ ಬಾಲ್ಯ ಕಲ್ಪಿಸಲಿ

ಪ್ರಮುಖ ಮುಖ್ಯಾಂಶಗಳು

  • ಪಾಲಕರು ಹೆಣ್ಣು ಮಕ್ಕಳಿಗೆ ಸುಂದರ ಬಾಲ್ಯ ಕಲ್ಪಿಸಲಿ
  • ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಸಲಹೆ
ಹಾಸನ: ಮಗಳನ್ನು ಮದುವೆ ಮಾಡಿಕೊಟ್ಟರೆ ಜವಾಬ್ದಾರಿ ಮುಗಿಯಿತು ಎಂಬ ಮನೋಭಾವದಿಂದ ಹೊರಬಂದು, ಬಾಲ್ಯದಿಂದಲೇ ಉತ್ತಮ ಬದುಕು ರೂಪಿಸಲು ಪಾಲಕರು ಗಮನಹರಿಸಬೇಕೆಂದು ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಸಲಹೆ ನೀಡಿದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಬಾಲ್ಯ ನ್ಯಾಯ, ಪೋಕ್ಸೋ ಹಾಗೂ ಮಕ್ಕಳ ಸಂರಕ್ಷಣಾ ಯೋಜನೆ ಕುರಿತು ಬುಧವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳ ಸಮಸ್ಯೆಗಳನ್ನು ಕೇವಲ ಕಚೇರಿಯಲ್ಲಿ ಕುಳಿತು ಚರ್ಚಿಸಿದರೆ ಸಾಲದು. ಮಕ್ಕಳೊಂದಿಗೆ ಬೆರೆತು, ಅವರ ನೋವು–-ನಲಿವುಗಳನ್ನು ಅರಿತು ಪರಿಹಾರ ಕಂಡುಕೊಳ್ಳಬೇಕಿದೆ ಎಂದು ತಿಳಿಸಿದರು.
ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧದ ಪ್ರಕ್ರಿಯೆಯಲ್ಲಿ ನಾಗರಿಕ ಸಮಾಜದ ಪಾತ್ರ ಪ್ರಶ್ನಾರ್ಹವಾಗಿದೆ. ಪೋಕ್ಸೋ ಅಡಿ ದೂರು ದಾಖಲಾದರೂ ಕೆಲವೊಮ್ಮೆ ಅಪರಾಧಿಗಳು ಜೈಲಿನಿಂದ ಹೊರಬರುತ್ತಿದ್ದಾರೆ. ಇಂತಹ ಹಿಂಸಾತ್ಮಕ ಕೃತ್ಯಗಳಿಗೆ ಕೊನೇ ಹಾಡಲೇಬೇಕೆಂದರು.
ಹೆಣ್ಣು ಮಕ್ಕಳಿಗೆ ಸುಂದರ ಬಾಲ್ಯ ಕಲ್ಪಿಸುವುದು ಪಾಲಕರ ಜವಾಬ್ದಾರಿ. ಮಗಳಿಗೆ 18 ವರ್ಷ ತುಂಬುವುದನ್ನೇ ಚಾತಕಪಕ್ಷಿಯಂತೆ ಕಾದು ಮದುವೆ ಮಾಡಿಕೊಡುತ್ತಾರೆ. ಹದಿಹರೆಯದ ವಯಸ್ಸಿನಲ್ಲಿ ಗೊತ್ತಿಲ್ಲದೆ ಆಗುವ ತಪ್ಪುಗಳನ್ನು ಪದೇ ಪದೆ ಕೆಣಕುತ್ತ ಅವರ ಭವಿಷ್ಯವನ್ನೇ ಹಾಳು ಮಾಡುತ್ತಾರೆ. ಈ ನಿಟ್ಟಿನಲ್ಲಿ ಎಲ್ಲರ ಮನಸ್ಥಿತಿ ಬದಲಾಗಬೇಕೆಂದರು.
ಡಿಸ್ಕಸ್ ವಿಥ್ ಡಿಸಿ: ಜಿಲ್ಲೆಯ ವಿವಿಧ ವಸತಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರ ಅಹವಾಲು ಸ್ವೀಕರಿಸುವ ಉದ್ದೇಶದಿಂದ ಪ್ರತಿ ಮಂಗಳವಾರ ಭೇಟಿ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ತಿಳಿಸಿದರು.
ಅಂಗವಿಕಲ ಪುನರ್ವಸತಿ ಕಾರ್ಯಕರ್ತರು ಸಮಾಜದ ಬಲವಾದ ಶಕ್ತಿಯಾಗಿದ್ದು, ಸರ್ಕಾರದ ಯೋಜನೆಗಳು ಅರ್ಹರಿಗೆ ತಲುಪಿಸುವಲ್ಲಿ ಅವರ ಪಾತ್ರ ಗಮನಾರ್ಹವಾಗಿದೆ. ಏನೇ ಸಮಸ್ಯೆಗಳಿದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಬೇಕೆಂದರು.
ಅಂಗವಿಕಲರ ಇಲಾಖೆ ಯೋಜನಾ ನಿರ್ದೇಶಕ ಚಂದ್ರಮೌಳಿ ಮಾತನಾಡಿ, ಅಂಗವಿಕಲರಿಗಾಗಿ ಸ್ಥಳೀಯ ಸಂಸ್ಥೆಗಳಲ್ಲಿ ಶೇ.5 ರಷ್ಟು ಅನುದಾನ ಮೀಸಲಿಡಲಾಗುತ್ತದೆ. ಆದರೆ ಎಲ್ಲ ಕಡೆ ಅದರ ಸದುಪಯೋಗ ಆಗುತ್ತಿಲ್ಲ. ಹಲವೆಡೆ ಪಂಚಾಯಿತಿಗಳಲ್ಲಿ ಅಂಗವಿಕಲರಿಗೆ ಕೂರಲು ಸಹ ಸೂಕ್ತ ವ್ಯವಸ್ಥೆ ಇಲ್ಲದಿರುವುದು ದುರಂತ. ಅಧಿಕಾರಿಗಳು ನೆಲಮಟ್ಟದ ಸಮಸ್ಯೆಗಳನ್ನು ಅರಿತು, ಯಾವುದೇ ಅಡಚಣೆಗಳಿದ್ದರೂ ಪರಿಹಾರ ಕಂಡುಕೊಳ್ಳುವ ಮನೋಭಾವ ಹೊಂದಬೇಕು ಎಂದು ಸಲಹೆ ನೀಡಿದರು.
ವೇದಿಕೆ ಕಾರ್ಯಕ್ರಮದ ಬಳಿಕ ಅಂಗವಿಕಲ ಪುನರ್ವಸತಿ ಕಾರ್ಯಕರ್ತರ ಅಹವಾಲು ಸ್ವೀಕಾರ ಹಾಗೂ ಕಾರ್ಯಾಗಾರ ನಡೆಯಿತು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್, ಜಿಲ್ಲಾ ಅಂಗವಿಕಲ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಕೆ.ಆರ್.ಅನುಪಮಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕೆ.ಜಿ.ದಿಲೀಪ್, ಕಾಂತರಾಜ್ ಇತರರು ಇದ್ದರು.