ಸಕಲೇಶಪುರ ತಾಲೂಕಿನ ವನಗೂರು ಗ್ರಾಮ ಸಮೀಪ ನಾಟಿ ಮಾಡಿದ್ದ ಭತ್ತದ ಗದ್ದೆಗಳನ್ನು ಕಾಡಾನೆಗಳು ತುಳಿದು ಹಾಳು ಮಾಡಿರುವುದು. 
ಹಾಸನ

ಭತ್ತ ಬೆಳೆಯಲು ಕೃಷಿಕರ ಬೇಸರ

ಎ. ಆರ್. ರಘುರಾಮ

ಕಾಂತರಾಜ್‌ಹೊನ್ನೇಕೋಡಿ ಸಕಲೇಶಪುರ

ತಾಲೂಕಿನಲ್ಲಿ ಭತ್ತ ಬೆಳೆಯುವ ಕೃಷಿಭೂಮಿ ವಿಸ್ತೀರ್ಣ ವರ್ಷದಿಂದ ವರ್ಷಕ್ಕೆ ಗಣನೀಯ ಪ್ರಮಾಣದಲ್ಲಿ ಕುಸಿಯುತ್ತಿದೆ. ಕಾರ್ಮಿಕರ ಕೊರತೆ, ಹವಾಮಾನ ಏರುಪೇರು, ಕಾಡು ಪ್ರಾಣಿಗಳ ಹಾವಳಿ ಮತ್ತಿತರ ಕಾರಣಗಳಿಂದ ಅನ್ನದಾತರು ಭತ್ತ ನಾಟಿ ಮಾಡುವುದು ಲಾಭದಾಯಕವಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
ಸಕಲೇಶಪುರ ತಾಲೂಕಿನಲ್ಲಿ 2010ರಲ್ಲಿ 14 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿತ್ತು ಎಂದು ಕೃಷಿ ಇಲಾಖೆ ದಾಖಲೆಗಳು ಹೇಳುತ್ತವೆ. 2015 ರ ವೇಳೆಗೆ ಭತ್ತ ಬೆಳೆಯುವ ಪ್ರದೇಶ 11 ಸಾವಿರ ಹೆಕ್ಟೇರ್‌ಗೆ ಕುಸಿತಗೊಂಡಿತು. 2020 ರ ದಾಖಲೆ ಪ್ರಕಾರ ತಾಲೂಕಿನಲ್ಲಿ ಭತ್ತ ಬೆಳೆಯುವ ವಿಸ್ತೀರ್ಣ 9,000 ಸಾವಿರ ಹೆಕ್ಟೇರ್‌ಗೆ ಇಳಿಯಿತು ಎಂದು ಇಲಾಖೆ ಮಾಹಿತಿ ನೀಡಿದೆ.
**
ಪ್ರಸ್ತುತ ವರ್ಷ ಕೃಷಿ ಇಲಾಖೆ ನೀಡಿದ ಅಂಕಿ ಅಂಶಗಳ ಪ್ರಕಾರ 5,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಉದ್ದೇಶ ಹೊಂದಲಾಗಿತ್ತು. ಜುಲೈ ಅಂತ್ಯಕ್ಕೆ ತಾಲೂಕಿನಲ್ಲಿ ಕೇವಲ 2,300 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಭತ್ತ ನಾಟಿ ಮಾಡಲಾಗಿದೆ. ಉಳಿದ ಕೃಷಿಕರು ಅಗಸ್ಟ್ ತಿಂಗಳಿನ ಅಂತ್ಯಕ್ಕೆ 1, 000 ಹೆಕ್ಟೇರ್ ಭತ್ತ ನಾಟಿ ಮಾಡಬಹುದು ಎಂದು ಇಲಾಖೆ ಅಂದಾಜು ಮಾಡಿದೆ. ಇದರಿಂದ ಭತ್ತದ ಇಳುವರಿಯಲ್ಲಿ ಈ ಬಾರಿ ನಿಗದಿತ ಗುರಿ ತಲುಪುವುದು ಅಸಾಧ್ಯವಾಗಲಿದೆ ಎಂಬುದು ಅಧಿಕಾರಿಗಳ ಅಭಿಮತ. 2026 ರಲ್ಲಿ ಹೆಚ್ಚೆಂದರೆ 3,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಬಹುದು ಎಂದು ಕೃಷಿ ಇಲಾಖೆ ಅಂದಾಜು ವರದಿಯನ್ನು ಈಗಾಗಲೇ ಸಲ್ಲಿಸಿದೆ. ಇವೆಲ್ಲ ಅಂಕಿ, ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ತಾಲೂಕಿನ ರೈತರಿಗೆ ಭತ್ತದ ಕೃಷಿ ಬಗ್ಗೆ ಆಸಕ್ತಿ ಇಲ್ಲದಿರುವುದು ಗೋಚರಿಸುತ್ತದೆ. ಒಂದೂವರೆ ದಶಕದಲ್ಲಿ ತಾಲೂಕಿನಲ್ಲಿ 10,500 ಹೆಕ್ಟೇರ್ ಪ್ರದೇಶ ಭತ್ತನಾಟಿಯಿಂದ ವಿಮುಖಗೊಂಡಿದೆ ಎಂಬುದು ಚರ್ಚಾರ್ಹವಾಗಿದೆ.
*
ಕಾರಣಗಳು ಏನು ?
ತಾಲೂಕಿನಲ್ಲಿ ಭತ್ತ ಬೆಳೆಯುವ ಕೃಷಿಕರ ಸಂಖ್ಯೆ ಮತ್ತು ಪ್ರದೇಶದ ವಿಸ್ತೀರ್ಣ ವರ್ಷದಿಂದ ವರ್ಷಕ್ಕೆ ಕುಸಿತಗೊಳ್ಳಲು ಹತ್ತಾರು ಕಾರಣಗಳಿವೆ. ಇದರಲ್ಲಿ ಮುಖ್ಯವಾಗಿ ಹವಾಮಾನ ವೈಪರೀತ್ಯ ಮತ್ತು ಕಾರ್ಮಿಕರ ಕೊರತೆ. ತಾಲೂಕಿನಲ್ಲಿ ಕಳೆದ ಒಂದೂವರೆ ದಶಕದಲ್ಲಿ ಅತಿಯಾಗಿ ಮಳೆ ಸುರಿದಿರುವುದರಿಂದ ಭತ್ತದ ಇಳುವರಿ ನಿರೀಕ್ಷಿತ ಮಟ್ಟದಲ್ಲಿ ದೊರಕಿಲ್ಲ.
ನೆರೆ ಜಿಲ್ಲೆಗಳಲ್ಲಿ ಒಂದು ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಇಳುವರಿ ಎಕರೆಗೆ 45ರಿಂದ 60 ಕ್ವಿಂಟಾಲ್ ದೊರಕಿದರೆ ತಾಲೂಕಿನಲ್ಲಿ 30 ರಿಂದ 35 ಕ್ವಿಂಟಾಲ್ ಮಾತ್ರ ದೊರಕುತ್ತಿದೆ. ಇದರಿಂದ ಭತ್ತ ಬೆಳೆಯಲು ಮಾಡುವ ಖರ್ಚು ಸಹಾ ಹುಟ್ಟುವುದಿಲ್ಲ ಎಂಬುದು ರೈತರ ಅಳಲು.ಅನಾವಶ್ಯಕ ಶ್ರಮದ ಲೆಕ್ಕಚಾರ ಹಾಕುತ್ತಿರುವ ರೈತಾಪಿ ವರ್ಗ ಭತ್ತ ನಾಟಿ ಕಾರ್ಯದಿಂದ ವಿಮುಖಗೊಳ್ಳುತ್ತಿದೆ.
ಇನ್ನೊಂದು ಕಾರಣ ಎಂದರೆ ನಾಟಿ ಕಾರ್ಯಕ್ಕೆ ಕಾರ್ಮಿಕರ ಕೊರತೆ. ಕೃಷಿ ಕಾಯಕಕ್ಕೆ ಸ್ಥಳೀಯ ಕಾರ್ಮಿಕರ ಕೊರತೆ ಕಳೆದ ಎರಡು ದಶಕಗಳಿಂದ ತೀವ್ರವಾಗಿ ಕಾಡುತ್ತಿದೆ. ಇದಕ್ಕೆ ಪರಿಹಾರವಾಗಿ ಉತ್ತರ ಕರ್ನಾಟಕದ ಕಾರ್ಮಿಕರು ಜಮೀನಿನಲ್ಲಿ ದುಡಿಯಲು ಬರುತ್ತಿದ್ದರು. ಅವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾದ ಕಾರಣ ಉತ್ತರಭಾರತದ ಕಾರ್ಮಿಕರು ಲಭ್ಯವಾದರು. ಇತ್ತೀಚೆಗೆ ಅವರೂ
ಕೃಷಿ ಜಮೀನಿಗೆ ಇಳಿಯಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಕೆಲಸಕ್ಕಾಗಿ ದುಪ್ಪಟ್ಟು ಕೂಲಿ ಕೊಡಬೇಕು ಎನ್ನುತ್ತಾರೆ.
ತಾಲೂಕಿನಲ್ಲಿ ಭತ್ತ ಬೆಳೆಯುವ ಪ್ರದೇಶಗಳು ಮುಖ್ಯ ರಸ್ತೆಯಿಂದ ಅನತಿ ದೂರದಲ್ಲಿರುತ್ತವೆ. ಹಾಗಾಗಿ ಆಧುನಿಕ ಯಂತ್ರೋಪಕರಣಗಳನ್ನು ಬಳಸುವುದು ಸಲ್ಪ ಕಷ್ಟಕರವಾಗಿದೆ. ಭತ್ತದ ಕೃಷಿ ಕಡಿಮೆಯಾಗಲು ಇದೂ ಒಂದು ಕಾರಣವಾಗಿದೆ.
*
ಕಾಡು ಪ್ರಾಣಿಗಳ ಕಾಟ:
ಮಲೆನಾಡಿನಲ್ಲಿ ವರ್ಷದಿಂದ ವರ್ಷಕ್ಕೆ ಕಾಡು ಪ್ರಾಣಿಗಳ ಕಾಟ ಹೆಚ್ಚಾಗುತ್ತಿದೆ. ಹಗಲು, ರಾತ್ರಿ ಭತ್ತದ ಜಮೀನಿನ ಸಮೀಪದಲ್ಲಿ ಜೋಪಡಿ ಹಾಕಿಕೊಂಡು ಬೆಳೆ ಕಾಯಬೇಕಾಗಿದೆ. ಹಾಗಿದ್ದರೂ ಕಾಡಾನೆ, ಕಾಟಿಗಳು ದಾಳಿ ಮಾಡುತ್ತಿವೆ. ಕ್ಷಣ ಮಾತ್ರದಲ್ಲಿ ಕಾಡಾನೆಗಳ ಹಿಂಡು ಭತ್ತದ ಫಸಲನ್ನು ತಿಂದು, ಗದ್ದೆಯನ್ನೂ ಹಾಳು ಮಾಡಿ ಹೋಗುತ್ತಿವೆ. ಹಾಗಾಗಿ ಭತ್ತದ ಬೆಳೆ ನಮಗ್ಯಾಗೆ ಎಂಬ ತೀರ್ಮಾನ ರೈತಾಪಿವರ್ಗದ್ದು.
ಕಾಫಿ, ಅಡಿಕೆಗೆ ಆದರ : ಕಾಫಿ ಧಾರಣೆ ವರ್ಷದಿಂದ ವರ್ಷಕ್ಕೆ ಏರುಮುಖವಾಗುತ್ತಿದೆ. ಹಾಗಾಗಿ ಹಲವು ಗದ್ದೆಗಳು ಕಾಫಿ ತೋಟಗಳಾಗಿ ಪರಿವರ್ತನೆ ಆಗುತ್ತಿವೆ. ಕಷ್ಟಕರವಾದ ಭತ್ತದ ಬೆಳೆಗಿಂತ ಕಾಫಿ, ಅಡಿಕೆ ತೋಟಗಳೇ ಉತ್ತಮ ಎಂದು ಹಲವರು ಭಾವಿಸಿದ್ದಾರೆ. ಇವೆಲ್ಲ ಕಾರಣದಿಂದ ಭತ್ತ ಬೆಳೆಯುವ ಪ್ರದೇಶ ಕಡಿಮೆ ಆಗುತ್ತಿದೆ.
ಅನ್ಯ ಬೆಳೆ: ತಾಲೂಕಿನ ಸುಮಾರು 14 ಸಾವಿರ ಹೆಕ್ಟೇರ್ ಭತ್ತ ಬೆಳೆಯುವ ಪ್ರದೇಶದಲ್ಲಿ ಈಗಾಗಲೇ ಸುಮಾರು 4 ಸಾವಿರ ಹೆಕ್ಟೇರ್ ಪ್ರದೇಶವು ಕಾಫಿ,ಅಡಿಕೆ ತೋಟವಾಗಿ ಪರಿವರ್ತನೆಗೊಂಡಿದೆ. ಸುಮಾರು 6 ಸಾವಿರ ಹೆಕ್ಟೇರ್ ಪ್ರದೇಶ ಪಾಳು ಬಿದ್ದಿದೆ. ಪಾಳು ಬಿಟ್ಟಿರುವ ಗದ್ದೆಗಳು ಈಗ ಕಾಟಿ,ಕಾಡುಹಂದಿಗಳ ಆವಾಸವಾಗಿದೆ. ಇಲ್ಲಿರುವ ವನ್ಯ ಜೀವಿಗಳು ಆಗಾಗ್ಗೆ ಗ್ರಾಮಗಳಿಗೂ ಲಗ್ಗೆ ಇಟ್ಟು ಭಯ ಮೂಡಿಸುತ್ತಿವೆ.
ಹೇಳಿಕೆ:
ಕೃಷಿ ಕಾರ್ಮಿಕರ ಕೊರತೆ, ಕಾಡುಪ್ರಾಣಿಗಳ ಹಾವಳಿ, ಹವಾಮಾನ ಏರುಪೇರು, ಇಳುವರಿಯಲ್ಲಿ ಕುಸಿತ ಮುಂತಾದ ಕಾರಣಗಳಿಂದ ತಾಲೂಕಿನ ರೈತರು ಭತ್ತದ ಕೃಷಿಗೆ ಬೆನ್ನು ತೊರತ್ತಿದ್ದಾರೆ. ಸರ್ಕಾರ ಮತ್ತು ಕೃಷಿ ಇಲಾಖೆಯು ಭತ್ತದ ಕೃಷಿಗೆ ಉತ್ತೇಜನ ನೀಡಲು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆಯಾದರೂ ಅನ್ನದಾತರು ಈ ನಿಟ್ಟಿನಲ್ಲಿ ಆಸಕ್ತಿ ತೋರುತ್ತಿಲ್ಲ.
ಪ್ರಕಾಶ್‌ರಾಜ್
ಸಹಾಯಕ ನಿರ್ದೇಶಕ. ಕೃಷಿ ಇಲಾಖೆ, ಸಕಲೇಶಪುರ.
ತಾಲೂಕಿನಲ್ಲಿ ಗಣನೀಯ ಪ್ರಮಾಣದಲ್ಲಿ ಭತ್ತ ಬೆಳೆಯುವ ಪ್ರದೇಶ ಕಡಿಮೆ ಆಗುತ್ತಿದೆ. ಹಲವೆಡೆ ತೋಟಗಳಾಗಿ ಪರಿವರ್ತನೆ ಆಗಿದೆ. ಕೆಲವರು ಜಮೀನು ಪಾಳು ಬಿಟ್ಟಿದ್ದಾರೆ. ಇದಕ್ಕೆ ಮುಖ್ಯ ಕಾರಣ ಎಂದರೆ ಕಾರ್ಮಿಕರ ಕೊರತೆ. ಭತ್ತ ನಾಟಿಯಿಂದ ನಿಗದಿತ ಆದಾಯ ಲಭಿಸುತ್ತಿಲ್ಲ. ಹಾಗಾಗಿ ಹತ್ತಾರು ಎಕರೆ ಜಮೀನಿದ್ದರೂ ಗ್ರಾಮೀಣ ಭಾಗದ ಕೃಷಿಕರು ಅಂಗಡಿಯಿಂದ ಅಕ್ಕಿತಂದು ತಿನ್ನುವಂತಾಗಿದೆ
ರೋಷನ್
ಹರಗರಹಳ್ಳಿ ಗ್ರಾಮಸ್ಥ