ಪುರಸಭೆಯ ಸ್ವಚ್ಛತಾ ನಿಯಮ ಉಲ್ಲಂಘಿಸಿ ಎಲ್ಲೆಂದರಲ್ಲಿ ಕಸ ಹಾಕುತ್ತಿದ್ದ ಪಟ್ಟಣದ ಮೈಕ್ರೋ ಫೈನಾನ್ಸ್ ಸಂಸ್ಥೆ ಮುಂದೆಯೇ ಕಸ ಸುರಿದ ಪುರಸಭೆ ಅಧಿಕಾರಿಗಳು ಹಾಗೂ ಪೌರಕಾರ್ಮಿಕರು, ಮತ್ತೊಮ್ಮೆ ಕಸ ಹಾಕದಂತೆ ಮಂಗಳವಾರ ಎಚ್ಚರಿಕೆ ನೀಡಿದರು.
ಬೇಲೂರು : ಪುರಸಭೆಯ ಸ್ವಚ್ಛತಾ ನಿಯಮ ಉಲ್ಲಂಘಿಸಿ ಎಲ್ಲೆಂದರಲ್ಲಿ ಕಸ ಹಾಕುತ್ತಿದ್ದ ಪಟ್ಟಣದ ಮೈಕ್ರೋ ಫೈನಾನ್ಸ್ ಸಂಸ್ಥೆ ಮುಂದೆಯೇ ಕಸ ಸುರಿದ ಪುರಸಭೆ ಅಧಿಕಾರಿಗಳು ಹಾಗೂ ಪೌರಕಾರ್ಮಿಕರು, ಮತ್ತೊಮ್ಮೆ ಕಸ ಹಾಕದಂತೆ ಮಂಗಳವಾರ ಎಚ್ಚರಿಕೆ ನೀಡಿದರು.
ಪಟ್ಟಣವನ್ನು ಅಂದವಾಗಿಡಬೇಕೆಂದು ಪುರಸಭೆ ನಿಗದಿತ ಸ್ಥಳ ಹಾಗೂ ಮನೆ ಬಾಗಿಲಿಗೆ ಬರುವ ಆಟೋ ಟಿಪ್ಪರ್‌ಗಳಿಗೆ ಕಸ ಹಾಕುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಈಗಲೂ ಧ್ವನಿವರ್ಧಕದ ಮೂಲಕವೂ ತಿಳಿಸಲಾಗುತ್ತಿದೆ. ಪುರಸಭೆಯ ಎಲ್ಲ ವಾರ್ಡ್‌ಗಳಿಗೂ ಕಸ ಸಂಗ್ರಹಣೆಗಾಗಿ ಆಟೋ ಟಿಪ್ಪರ್‌ಗಳು ನಿತ್ಯ ಬಂದರೂ, ಪಟ್ಟಣದ ಪಂಪ್‌ಹೌಸ್ ರಸ್ತೆಯ ಕೆಲವರು ಹಾಗೂ ಮೈಕ್ರೋ ಫೈನಾನ್ಸ್ ಸಿಬ್ಬಂದಿ ನಿತ್ಯ ತಮ್ಮ ಕಚೇರಿ ಆವರಣದ ಚರಂಡಿ ಸಮೀಪ ಕಸ ಹಾಕುತ್ತಿದ್ದರು. ಈ ಸಂಬಂಧ ಪುರಸಭೆ ಸಿಬ್ಬಂದಿ ತಿಳಿ ಹೇಳಲು ಹೋದಾಗ ಫೈನಾನ್ಸ್ ಸಿಬ್ಬಂದಿ ಸರಿಯಾಗಿ ಸ್ಪಂದಿಸಲಿಲ್ಲ ಎನ್ನಲಾಗಿದೆ. ಈ ಸಂದರ್ಭ ಪೌರಕಾರ್ಮಿಕರು ಹಾಗೂ ಮೈಕ್ರೋ ಫೈನಾನ್ಸ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಆರೋಗ್ಯಾಧಿಕಾರಿ ಲೋಹಿತ್ ಮತ್ತು ಸಿಬ್ಬಂದಿ ಫೈನಾನ್ಸ್ ಸಿಬ್ಬಂದಿಗೆ ತಿಳಿ ಹೇಳಿದರೂ ಕೇಳದ ಕಾರಣ ಪೌರಕಾರ್ಮಿಕರು ರಸ್ತೆಯಲ್ಲಿದ್ದ ಕಸವನ್ನು ತೆಗೆದುಕೊಂಡು ಫೈನಾನ್ಸ್ ಸಂಸ್ಥೆಯ ಬಾಗಿಲು ಮುಂಭಾಗದ ಆವರಣದಲ್ಲಿ ಸುರಿದಿದ್ದಾರೆ.
ಪುರಸಭೆ ಮುಖ್ಯಾಧಿಕಾರಿ ಬಸವರಾಜ ಸಿಗ್ಗಾವಿ ಮಾತನಾಡಿ, ನಮ್ಮ ಸಿಬ್ಬಂದಿ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ನಿಯಮ ಪಾಲನೆ ಮಾಡದೆ ಕಸವನ್ನು ರಸ್ತೆಗೆ ತಂದು ಹಾಕುತ್ತಿದ್ದರು. ಈಗಾಗಲೇ ಮಳೆ ಪ್ರಾರಂಭವಾಗಿದೆ. ಕಸದ ಜತೆಗೆ ಪ್ಲಾಸ್ಟಿಕ್ ಸೇರಿದಂತೆ ಇತರ ವಸ್ತುಗಳಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿಯಾಗುತ್ತಿದೆ. ಪಟ್ಟಣದ ಸ್ವಚ್ಛತೆ ಕಾಪಾಡುವುದು ಎಲ್ಲರ ಜವಾಬ್ದಾರಿ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮೈಕ್ರೋಫೈನಾನ್ಸ್‌ನವರು ಇದೇ ಚಾಳಿ ಮತ್ತೆ ಮುಂದುವರಿಸಿದರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದು ಎಂದರು.
ಆರೋಗ್ಯಾಧಿಕಾರಿ ಲೋಹಿತ್, ಮೇಸ್ತ್ರಿ ಹರೀಶ್ ಸೇರಿದಂತೆ ಪೌರಕಾರ್ಮಿಕರಿದ್ದರು.